More

    ಆಗಸಕ್ಕೇರಿದ ಕರೊನಾ ಸೋಂಕು ಪ್ರಕರಣ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ಡೇಂಜರ್ ಸ್ಥಿತಿಗೆ ತಲುಪುತ್ತಿದೆ. ಸೋಂಕು ಹರಡುವಿಕೆ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಈವರೆಗೆ 112 ಜನ ಮೃತಪಟ್ಟಿದ್ದು, ಈ ಪೈಕಿ ಆಗಸ್ಟ್ ತಿಂಗಳೊಂದರಲ್ಲಿಯೇ 82 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ, ಜನರಲ್ಲಿ ಭೀತಿಗೆ ಕಾರಣವಾಗಿದೆ.

    ಮೇ 3ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಜೂನ್ ಅಂತ್ಯದವರೆಗೆ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿರಲಿಲ್ಲ. ಜುಲೈ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 991ಕ್ಕೇರಿತ್ತು. ಆಗಸ್ಟ್ ಅಂತ್ಯಕ್ಕೆ ಈ ಸಂಖ್ಯೆ 4,324ಕ್ಕೇರಿದೆ. ಜೂನ್ 30ಕ್ಕೆ ಕರೊನಾ ಸೋಂಕಿಗೆ ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮ ಹಾಗೂ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿಯ ವೃದ್ಧೆಯರು ಮೊದಲು ಬಲಿಯಾದರು. ಅಲ್ಲಿಂದ ಜುಲೈ 31ರವರೆಗೆ ಸಾವಿನ ಸಂಖ್ಯೆ ಕೇವಲ 27 ಆಗಿತ್ತು. ಆದರೆ, ಆಗಸ್ಟ್ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.

    ಜಿಲ್ಲೆಯಲ್ಲಿ ಮಳೆಗಾಲ ಜೋರಾದಂತೆ ಕರೊನಾ ಮಹಾಮಾರಿ ಹರಡುವಿಕೆಯೂ ಜೋರಾಗಿದೆ. ಜತೆಗೆ ಉಸಿರಾಟದ ತೊಂದರೆಯಿಂದ ಸಾವಿಗೀಡಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 20 ಬೆಡ್​ಗಳ ಕೇಂದ್ರೀಕೃತ ಆಕ್ಸಿಜನ್ ವ್ಯವಸ್ಥೆ ಇದ್ದರೂ ಉಸಿರಾಟದ ತೊಂದರೆಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ, ಇತರ ಆರೋಗ್ಯ ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ. ಹೀಗಾಗಿ, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಕರೊನಾಕ್ಕೆ ಬಲಿಯಾಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರತೊಡಗಿವೆ.

    ಸದ್ಯ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೆಡ್​ಗಳ ಕೊರತೆಯಂತೂ ಇಲ್ಲ. ಸೋಂಕಿನ ಲಕ್ಷಣಗಳಿಲ್ಲದವರನ್ನು ಹೋಂ ಐಸೊಲೇಷನ್ ಮಾಡಲಾಗುತ್ತಿದೆ. ಹೀಗಾಗಿ, ಕೋವಿಡ್ ಆಸ್ಪತ್ರೆ, ಕೇರ್ ಸೆಂಟರ್​ಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಸೋಂಕಿನ ಲಕ್ಷಣ ಸೇರಿ ಇತರ ಆರೋಗ್ಯ ಸಮಸ್ಯೆ ಇರುವವರನ್ನು ಮಾತ್ರ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 1,277 ಸಕ್ರಿಯ ಪ್ರಕರಣಗಳಿದ್ದು, 890 ಸೋಂಕಿತರು ಹೋಂ ಐಸೊಲೇಷನ್​ನಲ್ಲಿ, 387 ಸೋಂಕಿತರು ಮಾತ್ರ ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ದಾಖಲಾಗಿದ್ದಾರೆ. ಇಷ್ಟು ಕಡಿಮೆ ಪ್ರಮಾಣದಲ್ಲಿ ರೋಗಿಗಳು ಆಸ್ಪತ್ರೆಯಲ್ಲಿದ್ದರೂ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರತೊಡಗಿವೆ. ಹಾವೇರಿ ಬಸವೇಶ್ವರ ನಗರದ ವೃದ್ಧರೊಬ್ಬರು ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಸಮರ್ಪಕವಾಗಿ ಆಕ್ಸಿಜನ್ ವ್ಯವಸ್ಥೆ ಮಾಡದ ಕಾರಣ ರೊಚ್ಚಿಗೆದ್ದ ರೋಗಿಯ ಕಡೆಯವರು ವೃದ್ಧನನ್ನು ಮನೆಗೆ ಕರೆದುಕೊಂಡು ಬಂದು ಮನೆಯಲ್ಲಿಯೇ ಸ್ವಂತವಾಗಿ ಆಕ್ಸಿಜನ್ ವ್ಯವಸ್ಥೆ ಮಾಡಿರುವ ಘಟನೆಯೂ ಬೆಳಕಿಗೆ ಬಂದಿದೆ.

    ಎಚ್ಚರಿಕೆ ಅಗತ್ಯ
    ಸದ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವಿಕೆಯ ಪ್ರಮಾಣವನ್ನು ಗಮನಿಸಿದರೆ ಸಾರ್ವಜನಿಕರೇ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕರೊನಾ ಸೋಂಕಿನ ಟೆಸ್ಟ್ಗಳನ್ನು ಹೆಚ್ಚಿಸುವ ಮೂಲಕ ಹಾಗೂ ಸಮರ್ಪಕವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸೂಚನೆ ನೀಡುತ್ತಿದ್ದಾರೆ. ಆದರೆ, ಅವರ ಸೂಚನೆಗೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಿತ್ತಿರುವುದು ಆತಂಕ ತಂದಿದೆ. ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಬಳ್ಳಾರಿಯಿಂದ ಆಕ್ಸಿಜನ್ ಸಿಲಿಂಡರ್ ತರಿಸಲು ಸಿದ್ಧತೆ ಮಾಡಿದ್ದೇವೆ. ಜಿಲ್ಲಾಸ್ಪತ್ರೆ ಸೇರಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ಇನ್ನಷ್ಟು ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ನಮ್ಮಲ್ಲಿ ಮೆಡಿಕಲ್ ಕಾಲೇಜ್ ಇಲ್ಲದಿರುವುದರಿಂದ ತಜ್ಞ ವೈದ್ಯರ ಕೊರತೆಯೂ ಇದೆ. ಇರುವ ತಜ್ಞ ವೈದ್ಯರಲ್ಲಿ ಕೆಲವರು ಕರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    | ಡಾ. ರಾಜೇಂದ್ರ ದೊಡ್ಡಮನಿ ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts