More

    ಆಕ್ರಮಣಕಾರರ ಇತಿಹಾಸ ಬಿಂಬಿಸುವುದು ಸಲ್ಲ

    ಅಥಣಿ: ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ, ಸಂಸ್ಕೃತಿ ಬಿಂಬಿಸುವುದಕ್ಕಿಂತ ಆಕ್ರಮಣಕಾರರ ಇತಿಹಾಸ ಪರಿಚಯಿಸಿರುವುದು ಬೇಸರದ ಸಂಗತಿ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಂಯೋಜಕ ನಂದಕುಮಾರ ಹೇಳಿದರು.

    ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಉತ್ತಿಷ್ಠ ಭಾರತ ಸಂಘಟನೆ ವತಿಯಿಂದ ಆಯೋಜಿಸಿದ್ದ ಸ್ವಾಧೀನತೆಯಿಂದ ಸ್ವಾತಂತ್ರ್ಯದ ಕಡೆಗೆ ವಿಷಯದ ಮೇಲಿನ ಒಂದು ದಿನದ ವಿಚಾರ ಸಂಕಿರಣಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

    ನಮ್ಮ ಪಠ್ಯಪುಸ್ತಕಗಳಲ್ಲಿ ಚೋಳರು, ಹೊಯ್ಸಳರು, ವಿಜಯ ನಗರ ಸಾಮ್ರಾಜ್ಯ, ಪಾಂಡ್ಯರು ಅನೇಕ ಶತಮಾನಗಳ ಕಾಲ ಆಡಳಿತ ನಡೆಸಿರುವ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಜತೆಗೆ ಕಲೆ, ವಾಸ್ತು ಶಿಲ್ಪ ಮತ್ತು ಸಂಸ್ಕೃತಿ ಕುರಿತಾಗಿ ಅಷ್ಟು ವಿವರವಿಲ್ಲ. ನಮ್ಮ ಮೇಲೆ ಆಕ್ರಮಣ ಮಾಡಿದ ಮೊಘಲರ, ಬ್ರಿಟಿಷರ ಆಡಳಿತ ಇತಿಹಾಸದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ ಎಂದರು.

    ಲೇಖಕ ರೋಹಿತ ಚಕ್ರತೀರ್ಥ ಮಾತನಾಡಿ, ಸಂಸ್ಕೃತ ಎಲ್ಲ ಭಾರತೀಯ ಭಾಷೆಗಳ ತಾಯಿಯಾಗಿದ್ದರೂ ಇಂಗ್ಲಿಷನ್ನು ತಲೆ ಮೇಲೆ ಹೊತ್ತು ಮೆರೆಸಿ ಅದರ ಗುಲಾಮರಾಗಿದ್ದೇವೆ. ಇಂಗ್ಲಿಷ್ ಜಾಗತಿಕ ಭಾಷೆ ಎಂದು ಬಿಂಬಿಸಲಾಗಿದೆ. ಆದರೆ ಜಗತ್ತಿನ ಅನೇಕ ದೇಶಗಳಲ್ಲಿ ಸ್ಥಳೀಯ ಭಾಷೆಯಲ್ಲೇ ವ್ಯವಹಾರ ಮಾಡುತ್ತಾರೆ. ಇಂಗ್ಲಿಷ್‌ನಿಂದಾಗಿ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವಂತಾಗಿದೆ. ವೇದ, ಉಪನಿಷತ್, ಭಗವದ್ಗೀತೆ ಸಂಸ್ಕೃತದಲ್ಲಿರುವುದು ಸತ್ಯ. ಅದನ್ನು ಇಂಗ್ಲಿಷ್ ಮೂಲಕ ತಿಳಿದುಕೊಳ್ಳಲು ಬೇಸರ ಎಂದರು.

    ಆರ್‌ಎಸ್‌ಎಸ್ ಅಖಂಡ ಕರ್ನಾಟಕದ ಪ್ರಚಾರ ಪ್ರಮುಖ ಅರುಣಕುಮಾರ ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ರಾಜನೀತಿ ಎಂಬುದು ರಾಜಕಾರಣವಾಗಿ ಬದಲಾಗಿದೆ. ಜನರಿಗೆ ಆಸೆ ತೋರಿಸಿ ಅಧಿಕಾರ ಪಡೆಯುವುದಕ್ಕೆ ರಾಜಕಾರಣ ಉಪಯೋಗವಾಗುತ್ತಿದೆ. ನಗದು ರಹಿತ ಚುನಾವಣಾ ಪ್ರಕ್ರಿಯೆಯಿಂದ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಿದೆ ಎಂದರು. ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಹ ಸಂಯೋಜಕ ರಘುನಂದನ, ಗದಗದ ಕೆಎಲ್‌ಇ ಪ್ರಾಧ್ಯಾಪಕಿ ಎಂ.ವೀಣಾ ಮಾತನಾಡಿದರು.

    ಉತ್ತಿಷ್ಠ ಭಾರತ ಅಥಣಿ ಸಂಯೋಜಕ ಚಂದ್ರಕಾಂತ ಉಂಡೊಡಿ ನಿರೂಪಿಸಿದರು. ಭಾರತ ಕರ್ಪೂರಮಠ, ವಿನಾಯಕ ಆಸಂಗಿ, ಮಂಜೂಶಾ ನಾಯಿಕ, ಡಾ.ವಿನಾಯಕ ಚಿಂಚೋಳಿಮಠ, ವೈಶಾಲಿ ಕುಲಕರ್ಣಿ, ಕುಮಾರ ಗಾಣಿಗೇರ, ಸಂಜಯ ನಾಯಿಕ, ಪ್ರಮೀಳಾ ನಾಯಿಕ, ಡಾ.ಅಮತ ಕುಲಕರ್ಣಿ, ಡಾ.ಪ್ರತೀಕಾ ಕುಲಕರ್ಣಿ, ಮಣಾಲಿನಿ ದೇಶಪಾಂಡೆ, ಕುಮಾರ ಪತ್ತಾರ ಸಂಘಟಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts