More

    ಅಳಿಯನಿಂದ ಮಾವನ ಹತ್ಯೆ

    ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಅಳಿಯನೇ ಮಾವನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೆದ ಘಟನೆ ಇಲ್ಲಿನ ಲಿಂಗರಾಜ ನಗರದ ಕಟ್ಟಿ ಮಂಗಳಮ್ಮ ದೇವಸ್ಥಾನದ ಬಳಿ ಶನಿವಾರ ನಡೆದಿದೆ.

    ಗದಗ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಶಂಕ್ರಪ್ಪ ಸಣ್ಣನಿಂಗಪ್ಪ ಮುಶಣ್ಣವರ (72) ಕೊಲೆಯಾದವರು. ಅವರ ಪತ್ನಿ ನಾಗರತ್ನ ಹಾಗೂ ಪುತ್ರಿ ಲತಾ ಗಾಯಗೊಂಡಿದ್ದಾರೆ. ದಾವಣಗೆರೆ ವಿದ್ಯಾನಗರ ನಿವಾಸಿ, ದಂತವೈದ್ಯ ಡಾ. ಸಂತೋಷ ಎಸ್.ಜಿ. (40) ಆರೋಪಿ.

    ಶಂಕ್ರಪ್ಪ ಮುಶಣ್ಣವರ ಪುತ್ರಿ ಲತಾಳನ್ನು ಡಾ. ಸಂತೋಷ 2011ರಲ್ಲಿ ಮದುವೆಯಾಗಿದ್ದರು. ಅವರಿಗೆ ಐದು ವರ್ಷದ ಪುತ್ರನಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಪದೇಪದೆ ಹಲ್ಲೆ ನಡೆಸುತ್ತಾನೆ ಎಂದು ಬೇಸತ್ತು ಲತಾ 4 ವರ್ಷಗಳಿಂದ ತವರಲ್ಲಿ ವಾಸವಾಗಿದ್ದಾರೆ. ಇದೇ ವಿಚಾರವಾಗಿ ಲತಾಳ ತಂದೆ ತಾಯಿ ಮತ್ತು ಸಂತೋಷನ ಮಧ್ಯೆ ಜಗಳ ಏರ್ಪಟ್ಟಿತ್ತು.

    ವಿಚ್ಛೇದನ ಕೊಡುವಂತೆ ಸಂತೋಷ ಒತ್ತಾಯಿಸುತ್ತಿದ್ದರು. ಇದಕ್ಕೆ ಮಾವ ಅಡ್ಡಿಯಾಗಿದ್ದಾರೆ ಎಂದು ಇಬ್ಬರ ನಡುವೆ ಆಗಾಗ ಜಗಳ ನಡೆದಿತ್ತು. ಇದೇ ವಿಚಾರವಾಗಿ ಆಕ್ರೋಶಗೊಂಡಿದ್ದ ಸಂತೋಷ, ಮಾವನ ಕುಟುಂಬದವರ ಹತ್ಯೆಗೆ ಸಂಚು ರೂಪಿಸಿದ್ದ.

    ಮುಶಣ್ಣವರ ನಿವಾಸದ ಎದುರು ಶನಿವಾರ ಬೆಳ್ಳಂಬೆಳಗ್ಗೆ ಡಾ. ಸಂತೋಷ ಕಾದು ಕುಳಿತಿದ್ದ. ಶಂಕ್ರಪ್ಪ ಮುಶಣ್ಣವರ ಬೆಳಗ್ಗೆ 6.30ಕ್ಕೆ ವಾಯುವಿಹಾರಕ್ಕೆ ಹೋಗಲೆಂದು ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಿಡಿಸಲು ಮುಂದಾದ ಅತ್ತೆ ನಾಗರತ್ನ ಅವರ ಹೊಟ್ಟೆ, ಕೈ ಹಾಗೂ ಮುಖಕ್ಕೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಾನೆ. ಪತ್ನಿ ಲತಾ ಮೇಲೂ ಹಲ್ಲೆ ನಡೆಸಿದ್ದಾರೆ.

    ಶಂಕ್ರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳುಗಳನ್ನು ಗೋಕುಲ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಪೊಲೀಸ್ ಆಯುಕ್ತ ಲಾಬು ರಾಮ್ ಡಿಸಿಪಿ ಪಿ. ಕೃಷ್ಣಕಾಂತ, ಎಸಿಪಿ ಶಂಕರ ರಾಗಿ, ಇನ್ಸ್​ಪೆಕ್ಟರ್ ಆನಂದ ಒನಕುದ್ರಿ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ-ಹೆಂಡತಿಯರಲ್ಲಿ ಮನಸ್ತಾಪವಿತ್ತು. ಇದೇ ಕಾರಣಕ್ಕೆ ನನ್ನ ತಂದೆಯನ್ನು ಹತ್ಯೆಗೈದಿದ್ದಾರೆ. ತಾಯಿಗೆ ಗಂಭೀರ ಗಾಯಗಳಾಗಿವೆ ಎಂದು ಶಂಕ್ರಪ್ಪ ಅವರ ಇನ್ನೊಬ್ಬ ಪುತ್ರಿ ಅಶ್ವಿನಿ ಪಾಟೀಲ ಪೊಲೀಸರಿಗೆ ಪ್ರತಿಕ್ರಿಯಿಸಿದ್ದಾರೆ.

    ಗಂಡ-ಹೆಂಡತಿ ಕಲಹ ಕೋರ್ಟ್ ಮೆಟ್ಟಿಲೇರಿತ್ತು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿದೆ. ಇದೇ ವಿಚಾರವಾಗಿ ಸಂತೋಷ ಹೊಂಚು ಹಾಕಿ ಮಾವ ಶಂಕ್ರಪ್ಪರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ.
    | ಲಾಬು ರಾಮ್ ಪೊಲೀಸ್ ಆಯುಕ್ತ

    ಕೊಲೆ ಮಾಡಿದ್ದು ನಾನೇ: ಮಾವನನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಅಳಿಯ ಡಾ. ಸಂತೋಷ ಮಾವನ ಮನೆಯಲ್ಲೇ ಕುಳಿತಿದ್ದರು. ಅಕ್ಕಪಕ್ಕದ ಮನೆಯವರಿಂದ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಶಂಕ್ರಪ್ಪ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು. ಮನೆಯೊಳಗೆ ಕುಳಿತಿದ್ದ ಸಂತೋಷ ‘ಕೊಲೆ ಮಾಡಿದ್ದು ನಾನೇ’ ಎಂದು ಒಪ್ಪಿಕೊಂಡರು. ನಂತರ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts