More

    ಅಲ್ಲಲ್ಲಿ ತ್ಯಾಜ್ಯ ಸುರಿದರೆ ದಂಡ ಪಕ್ಕ!, ಡೋರ್ ಟು ಡೋರ್ ತ್ಯಾಜ್ಯ ಸಂಗ್ರಹಣೆಗೆ ಪುತ್ತೂರು ನಗರಸಭೆಯಿಂದ ಆ್ಯಪ್ ಬಳಕೆಗೆ ಚಿಂತನೆ

    ಪುತ್ತೂರು: ಬರೋಬ್ಬರಿ 70 ಸಾವಿರ ಜನಸಂಖ್ಯೆ ಇರುವ ಪುತ್ತೂರು ನಗರಸಭೆಗೆ ಹಲವು ವರ್ಷಗಳಿಂದ ತ್ಯಾಜ್ಯ ವಿಲೆವಾರಿಯೇ ತ್ರಾಸವಾಗಿದ್ದು, ಆ್ಯಪ್ ಆಧರಿತ ಡೋರ್ ಟು ಡೋರ್ ಸಂಗ್ರಹಣೆಗೆ ಒತ್ತು ನೀಡಲು ಮಹತ್ತ ಯೋಜನೆಯೊಂದನ್ನು ರೂಪಿಸಿದೆ. ಸ್ವಚ್ಛ ನಗರ ರೂಪಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ತ್ಯಾಜ್ಯ ಸುರಿದರೆ ದಂಡ ಪ್ರಯೋಗಕ್ಕೂ ನಗರಸಭೆ ನಿರ್ಧರಿಸಿದೆ.
    ನೇರವಾದ ರಾಜರಸ್ತೆಗಳು ಒಂದೆಡೆಯಾದರೆ, ಕವಲು ರಸ್ತೆಗಳು, ಅಗಲ ಕಿರಿದಾಗ ಉಪ ರಸ್ತೆಗಳು ಮತ್ತೊಂದೆಡೆ. ಸಪಾಟಾದ ಪ್ರದೇಶ ಇದ್ದರೂ ಏರು ತಗ್ಗುಗಳು, ಬೆಟ್ಟ ಪ್ರದೇಶಗಳು, ಕಡಿದಾದ ಪ್ರದೇಶಗಳು ಸಾಕಷ್ಟಿವೆ. ಇಂಥ ಪ್ರದೇಶದಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಬಹುದೊಡ್ಡ ಸವಾಲು..! ಈ ಸವಾಲಿಗೆ ಪೌರ ಕಾರ್ಮಿಕರ ಸಂಖ್ಯೆಯ ಸಮಸ್ಯೆ ಬಗೆಹರಿಸಲು ನಗರಸಭೆ ಕೌಸ್ಸಿಲ್ 35 ಹೆಚ್ಚುವರಿ ಪೌರಕಾರ್ಮಿಕರ ನೇಮಕಾತಿಗಾಗಿ ಜಿಲ್ಲಾಧಿಕಾರಿಗಳ ಕದ ತಟ್ಟಿದ್ದಾರೆ.
    ನೇರ ಪಾವತಿಯಡಿಯಲ್ಲಿ ಭರ್ತಿಗೆ ಅವಕಾಶ
    ಪುತ್ತೂರು ನಗರಸಭಾ ವ್ಯಾಪ್ತಿ 32 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, 31 ವಾರ್ಡ್‌ಗಳಲ್ಲಿ ನಗರ, ಗ್ರಾಮೀಣ ಪ್ರದೇಶಗಳೆರಡನ್ನೂ ಒಳಗೊಂಡಿದೆ. 2018ರವರೆಗೆ ಇಲ್ಲಿ ತ್ಯಾಜ್ಯ ಸಂಗ್ರಹಣೆಗೆ ಸ್ವಸಹಾಯ ಸಂಘ ಪದ್ಧತಿ ಇತ್ತು. 2 ಸ್ವಸಹಾಯ ಸಂಘಗಳು ತ್ಯಾಜ್ಯ ಸಂಗ್ರಹಿಸುತ್ತಿದ್ದರು. ನಿರ್ವಹಣೆ ಸವಾಲು, ತ್ಯಾಜ್ಯ ಶುಲ್ಕ ಸಂಗ್ರಹದ ಸವಾಲುಗಳಿಂದಾಗಿ ನಷ್ಟಕ್ಕೆ ಜಾರಿ ಸಂಘಗಳು ಹಿಂದೆ ಸರಿದವು. ಇಂತಹ ಸಂದರ್ಭದಲ್ಲೂ ನಗರಸಭಾ ಅಧ್ಯಕ್ಷ ಜಿವಂಧರ್ ಜೈನ್ ನೇತೃತ್ವದ ತಂಡದಿಂದ ತ್ಯಾಜ್ಯ ನಿರ್ವಹಣೆಗೆ 16 ಜನ ಲೋಡರ್ಸ್, 4 ಕ್ಲೀನರ್ಸ್ ಬೇಕಾಗಿದ್ದು, ಎಲ್ಲವೂ ಖಾಲಿ ಇದೆ. ಇವುಗಳನ್ನು ನೇರ ಪಾವತಿಯಡಿಯಲ್ಲಿ ಭರ್ತಿ ಮಾಡಲು ಅವಕಾಶ ನೀಡಬೇಕೆಂದು ಅಧ್ಯಕ್ಷ ಜೀವಂಧರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ.
    ತ್ಯಾಜ್ಯ ಸುರಿದರೆ ದಂಡ ಪಕ್ಕ!
    ನಗರಸಭೆಯ ಸುತ್ತಮುತ್ತ ಬೇಕೆಂದರಲ್ಲಿ ತ್ಯಾಜ್ಯ ಸುರಿವಂತಿಲ್ಲ ಎಂದು ಪುತ್ತೂರು ನಗರಸಭೆಯಿಂದ ಸುತ್ತೋಲೆ ಕಳುಹಿಸಲಾಗಿದ್ದು, ಈಗಾಗಲೇ 15 ಪ್ರಕರಣ ದಾಖಲಾಗಿ ದಂಡ ವಸೂಲಿ ಮಾಡಲಾಗಿದೆ. ತ್ಯಾಜ್ಯ ಸಂಗ್ರಹದ 20 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಇವುಗಳ ಚಲನವಲನ ವೀಕ್ಷಿಸಲಾಗುತ್ತದೆ. ಜತೆಗೆ ರೂಟ್ ಮ್ಯಾಪ್ ಒದಗಿಸಲಾಗಿದ್ದು, ಬದಲಿ ಚಾಲಕ ಬಂದಾಗಲೂ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 5.30ರಿಂದ ರಸ್ತೆ ಬದಿ ಗುಡಿಸುವ ಕೆಲಸ ನಡೆಯುತ್ತದೆ. 7 ಗಂಟೆಗೆ ಕಾರ್ಮಿಕರು ಬಯೋಮೆಟ್ರಿಕ್ ಹಾಜರಾತಿ ದಾಖಲಿಸಿ, ಉಪಾಹಾರ ಸೇವಿಸಿ ಕಸ ಸಂಗ್ರಹಕ್ಕೆ ಹೊರಡುತ್ತಾರೆ. ಡೋರ್ ಟು ಡೋರ್ ಸಂಗ್ರಹಣೆಗೆ ಮಂಗಳೂರು ಮಹಾನಗರ ಪಾಲಿಕೆ ಅನುಷ್ಠಾನಗೊಳಿಸಿದ ಆ್ಯಪ್‌ನಂತಹ ವ್ಯವಸ್ಥೆಯನ್ನು ಬಳಕೆಗೆ ಚಿಂತನೆ ನಡೆಸಲಾಗಿದೆ. ಇದರಿಂದ ಪ್ರತೀ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯ ದಾಖಲೆ ಲಭ್ಯವಾಗಲಿದೆ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜಿವಂಧರ್ ಜೈನ್ ತಿಳಿಸಿದ್ದಾರೆ.

    ಪೌರ ಕಾರ್ಮಿಕರ 100 ಹುದ್ದೆಗಳು ಇಲ್ಲಿಗೆ ಮಂಜೂರಾಗಿದ್ದರೂ, ಪ್ರಸ್ತುತ ಕೇವಲ 11 ಹುದ್ದೆಗಳು ಭರ್ತಿಯಾಗಿ ನಗರ ಸ್ವಚ್ಛತೆ, ಗುಡಿಸುವಿಕೆ, ಗಿಡಗಳ ಕಟ್ಟಿಂಗ್ ಮುಂತಾದ ಕೆಲಸಗಳಿಗೆ ತಾತ್ಕಾಲಿಕ ನೆಲೆಯಲ್ಲಿ 44 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 35 ಹೆಚ್ಚುವರಿ ಪೌರಕಾರ್ಮಿಕರ ನೇಮಕಾತಿಗೆ ಜಿಲ್ಲಾಧಿಕಾರಿಯಿಂದ ಅನುಮತಿ ಕೇಳಲಾಗಿದೆ. ನಂತರ 2 ಹೆಚ್ಚುರಿ ತ್ಯಾಜ್ಯ ಸಂಗ್ರಹಣಾ ವಾಹನ ಖರೀದಿಗೆ ಯೋಜನೆ ರೂಪಿಸಲಾಗಿದೆ.
    ಜಿವಂಧರ್ ಜೈನ್,
    ಪುತ್ತೂರು ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts