More

    ಅಲ್ಪ ತೃಪ್ತಿ, ಅಧಿಕ ನಿರಾಸೆ !

    ಸಂತೋಷ ವೈದ್ಯ ಹುಬ್ಬಳ್ಳಿ

    ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿದ ಸ್ವಚ್ಛ ಸರ್ವೆಕ್ಷಣೆ-2020 ಫಲಿತಾಂಶ ಪ್ರಕಟವಾಗಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ರಾಜ್ಯದ 2ನೇ ದೊಡ್ಡ ನಗರ ಸ್ವಚ್ಛತೆಯಲ್ಲಿ ಸಾಕಷ್ಟು ಹಿಂದಿರುವುದು ಈ ಸಮೀಕ್ಷೆ ಎತ್ತಿ ಹೇಳಿದೆ.

    ಅವಳಿ ನಗರಕ್ಕೆ ಈ ಬಾರಿ ಲಭಿಸಿರುವುದು 172 ರ್ಯಾಂಕ್. ಹಾಗೇ ನೋಡಿದರೆ ಇದು ತೃಪ್ತಿದಾಯಕವಲ್ಲ. ಕಳೆದ ವರ್ಷ (235ನೇ ರ್ಯಾಂಕ್) ಕ್ಕೆ ಹೋಲಿಸಿದರೆ, ಸುಧಾರಿಸಿದ್ದೇವೆ ಎಂದು ಪಾಲಿಕೆ ಬೆನ್ನು ತಟ್ಟಿಕೊಳ್ಳುತ್ತಿದೆ. ನೂರರೊಳಗೆ ಸ್ಥಾನ ಪಡೆಯುವ ಕನಸು ಈ ಬಾರಿಯೂ ಈಡೇರಲಿಲ್ಲ ಎಂಬುದು ನಿರಾಶಾದಾಯಕ. ಇದೇ ವೇಳೆ ಸಣ್ಣ ನಗರಗಳಾದ ಮೈಸೂರು 2ನೇ ಸ್ಥಾನ ಹಾಗೂ ತುಮಕೂರು 48ನೇ ಸ್ಥಾನ ಪಡೆದಿದೆ.

    ಜನವರಿ 4ರಿಂದ 31ರ ವರೆಗೆ ದೇಶಾದ್ಯಂತ 2020ರ ಸ್ವಚ್ಛ ಸರ್ವೆಕ್ಷಣೆ ನಡೆಸಲಾಗಿತ್ತು. ಒಟ್ಟು 6 ಸಾವಿರ ಅಂಕಗಳಲ್ಲಿ ಹು-ಧಾ 2708. 24 ಅಂಕಗಳನ್ನು ಪಡೆದಿದೆ. ಮೈಸೂರು 5298.61 ಹಾಗೂ ತುಮಕೂರು 3863.66 ಅಂಕ ಸಂಪಾದಿಸಿದೆ.

    ಅವಳಿ ನಗರದ ಸ್ವಚ್ಛತೆಯ ಜವಾಬ್ದಾರಿ ಹು-ಧಾ ಮಹಾನಗರ ಪಾಲಿಕೆಯದ್ದು. ಕಳೆದ 3-4 ವರ್ಷಗಳಿಂದ ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ಇದು ಅಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಹಸಿ ಕಸ-ಒಣ ಕಸ ವಿಂಗಡಣೆ ಮಾಡಿ ಕೊಡುವಂತೆ ಜನರಿಗೆ ತಿಳಿವಳಿಕೆ ಮೂಡಿಸುವಲ್ಲಿ ಪಾಲಿಕೆ ವಿಫಲವಾಗಿದೆ ಎನ್ನುವುದಕ್ಕಿಂತ ವಿಂಗಡಣೆ ಮಾಡಿಕೊಟ್ಟರೂ ಆಟೋ ಟಿಪ್ಪರ್​ನಲ್ಲಿ ಒಟ್ಟಿಗೆ ಸೇರಿಸುತ್ತಿರುವುದು ವೈಫಲ್ಯಕ್ಕೆ ಪ್ರಮುಖ ಕಾರಣ. ಇಲ್ಲಿ ಸಾರ್ವಜನಿಕರಿಗೆ ದಂಡ ವಿಧಿಸುವುದಕ್ಕಿಂತ ಪಾಲಿಕೆ ತಾನು ಮೊದಲು ತಿದ್ದಿಕೊಳ್ಳಬೇಕು.

    ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಆಟೋ ಟಿಪ್ಪರ್​ಗಳ ಖರೀದಿ, ಸ್ಟೇಷನರಿ ಕಾಂಪ್ಯಾಕ್ಟರ್ ಸ್ಟೇಶನ್​ಗಳ ಸ್ಥಾಪನೆ, ಕಾಂಪೋಸ್ಟ್ ಯಾರ್ಡ್​ಗಳ ನಿರ್ಮಾಣ (ಉದ್ಘಾಟನೆಗೊಂಡಿಲ್ಲ), ಇನ್ನಿತರ ಸುಧಾರಿತ ವ್ಯವಸ್ಥೆಗಳ ನಡುವೆಯೂ ಅವಳಿ ನಗರ ಸ್ವಚ್ಛತೆಯಲ್ಲಿ ಸಾಕಷ್ಟು ಹಿಂದುಳಿದಿರುವುದು ಒಳ್ಳೆಯ ಲಕ್ಷಣವಲ್ಲ. ಕೋಟ್ಯಂತರ ರೂ. ವೆಚ್ಚ ಮಾಡಿಯೂ ಸ್ವಚ್ಛತೆಯಲ್ಲಿ ನೂರರೊಳಗೆ ಸ್ಥಾನ ಪಡೆಯದಿರುವುದು ಹಿನ್ನಡೆಯೇ ಸರಿ. ಹಣ ನುಂಗುವ ಸ್ವಚ್ಛತೆ ಗುತ್ತಿಗೆ ಪದ್ಧತಿ ಇನ್ನು ರದ್ದುಗೊಂಡಿಲ್ಲ. 48 ವಾರ್ಡ್​ಗಳಲ್ಲಿ ಸ್ವಚ್ಛತೆ ಗುತ್ತಿಗೆ ವ್ಯವಸ್ಥೆ ಮುಂದುವರಿದಿದೆ.

    ಖಾಲಿ ಜಾಗ, ರಸ್ತೆ ಬದಿ ಕಸ ಚೆಲ್ಲುವ ಪ್ರವೃತ್ತಿ ಈಗಲೂ ನಿಂತಿಲ್ಲ. ದುರಸ್ತಿ, ಇನ್ಯಾವುದೋ ಕಾರಣಕ್ಕೆ ವಾರದಲ್ಲಿ 2 ದಿನ ಆಟೋ ಟಿಪ್ಪರ್​ಗಳು ಮನೆ ಮನೆಗೆ ಬರುವುದೇ ಇಲ್ಲ. ಹೀಗಾದಾಗ ಸಾರ್ವಜನಿಕರು ಮನೆಯಲ್ಲಿ ಕಸ ಇಟ್ಟುಕೊಳ್ಳಲು ಬಯಸುವುದಿಲ್ಲ. ರಸ್ತೆ ಬದಿ, ಖಾಲಿ ಜಾಗದಲ್ಲಿ ಚೆಲ್ಲುತ್ತಾರೆ.

    ದೂರದ ಡಂಪಿಂಗ್ ಯಾರ್ಡ್​ಗೆ ಹೋಗಿ ಕಸ ವಿಲೇವಾರಿ ಮಾಡಲು ವಿಳಂಬವಾಗುತ್ತದೆಂದು ಹುಬ್ಬಳ್ಳಿಯಲ್ಲಿ 4 ಕಡೆ ಹಾಗೂ ಧಾರವಾಡದಲ್ಲಿ 3 ಕಡೆ ಸ್ಟೇಷನರಿ ಕಾಂಪ್ಯಾಕ್ಟರ್ ಸ್ಟೇಶನ್ ಸ್ಥಾಪಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಆಟೋ ಟಿಪ್ಪರ್​ಗಳನ್ನು ನೀಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯೂ ಪಾಲಿಕೆಯ ನಗರ ಸ್ವಚ್ಛತೆ ಕಾರ್ಯದಲ್ಲಿ ಕೈ ಜೋಡಿಸಿದೆ. ಇಷ್ಟಾದರೂ, ಇಲ್ಲಿ ಅನುಷ್ಠಾನವೇ ಸಮಸ್ಯೆಯಾಗಿದೆ. ಪರಿಣಾಮಕಾರಿ ಅನುಷ್ಠಾನ, ದಂಡದ ಅಸ್ತ್ರ ಬಳಕೆ ಸ್ವಚ್ಛತೆ ರ‍್ಯಾಂಕಿಂಗ್ ಅನ್ನು ಉತ್ತಮ ಪಡಿಸಬಲ್ಲದು.

    ಈ ಬಾರಿಯ ಸ್ವಚ್ಛ ಸರ್ವೆಕ್ಷಣೆ ಫಲಿತಾಂಶ ಕರೊನಾ ಅಬ್ಬರದಲ್ಲಿ ಗೌಣವಾಗಿದೆ. ಹಾಗಂತ ಪಾಲಿಕೆ ತನ್ನ ಜವಾಬ್ದಾರಿಯನ್ನು ಮರೆಯುವ ಹಾಗಿಲ್ಲ. ಇದು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ.

    ಬಯಲು ಶೌಚ ಮುಕ್ತ ಅಭಿಯಾನದಲ್ಲಿ ಒಡಿಎಫ್ ಪ್ಲಸ್ ಹಾಗೂ ಒಡಿಎಫ್ ಪ್ಲಸ್ ಪ್ಲಸ್ ಪ್ರಮಾಣಪತ್ರವನ್ನು ನಾವಿನ್ನು ಪಡೆಯಬೇಕಿದೆ. ಮೈಸೂರು ಈ ವಿಷಯದಲ್ಲಿ ಮುಂದಿದೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಶೀಘ್ರದಲ್ಲೇ ಕಾಂಪೋಸ್ಟ್ ಘಟಕಗಳು ಕಾರ್ಯಾರಂಭ ಮಾಡಲಿವೆ. ಸ್ವಚ್ಛ ಸರ್ವೆಕ್ಷಣೆಯಲ್ಲಿ ಮುಂದಿನ ವರ್ಷ 50 ರೊಳಗೆ ಸ್ಥಾನ ಪಡೆಯುವತ್ತ ಪ್ರಯತ್ನಶೀಲರಾಗಿದ್ದೇವೆ.
    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts