More

    ಅರ್ಹರಿಗೆ ನಿವೇಶನ ಹಂಚಿಕೆಯಾಗಲಿ

    ಮುಂಡರಗಿ: ಪಟ್ಟಣದ ನಿರ್ಗತಿಕ ಬಡವರಿಗೆ ಆಶ್ರಯ ಯೋಜನೆಯಡಿ ವಿತರಿಸಲು ಆಶ್ರಯ ಕಮಿಟಿ ಹಾಗೂ ಪುರಸಭೆ ಅಧಿಕಾರಿಗಳು ಸಿದ್ಧಪಡಿಸಿರುವ ಆಶ್ರಯ ಮನೆ ನಿವೇಶನ ಹಂಚಿಕೆ ಪಟ್ಟಿ ಪಾರದರ್ಶಕವಾಗಿಲ್ಲ. ಅದನ್ನು ರದ್ದುಗೊಳಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಬೇಕು ಎಂದು ಪುರಸಭೆಯ ಕೆಲವು ಸದಸ್ಯರು ಒತ್ತಾಯಿಸಿದರು.

    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಆಶ್ರಯ ಕಮಿಟಿಯವರು ಪುರಸಭೆ ಸದಸ್ಯರನ್ನು ಕಡೆಗಣಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

    ಶಿರೋಳ ಬಳಿಯ 25 ಎಕರೆ ಜಮೀನಿನಲ್ಲಿ ಒಟ್ಟು 1050 ಮನೆ ನಿವೇಶನ ಮಂಜೂರಾಗಿವೆ. ಪರಿಷ್ಕತ ಪಟ್ಟಿಯಲ್ಲಿ 844 ಜನರನ್ನು ಸೇರಿಸಲಾಗಿದೆ. ಇದನ್ನು ಮರುಪರಿಶೀಲಿಸಿ ಹಂಚಬೇಕು. ಇನ್ನುಳಿದ ನಿವೇಶನಗಳನ್ನು ಪೌರಕಾರ್ವಿುಕರಿಗೆ, ಮಾಜಿ ಸೈನಿಕರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ನೀಡಬೇಕು ಎಂದು ಆಗ್ರಹಿಸಿದರು.

    ಪುರಸಭೆ ಸದಸ್ಯ ರಾಜಾಭಕ್ಷೀ ಬೆಟಗೇರಿ ಮಾತನಾಡಿ, ಈಗಾಗಲೇ ಪಟ್ಟಣದಲ್ಲಿ ಸ್ವಂತ ಮನೆ, ಆಸ್ತಿ ಹೊಂದಿರುವವರಿಗೆ ಹಾಗೂ ಶ್ರೀಮಂತರಿಗೆ ನಿವೇಶನ ಹಂಚಲು ಫಲಾನುಭವಿಗಳ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿದೆ. ಆಯಾ ವಾರ್ಡ್​ನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮಗೆ ಬೇಕಾದವರಿಗೆ ಆಶ್ರಯ ಮನೆ ನಿವೇಶನ ವಿತರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ದೂರಿದರು.

    ಪುರಸಭೆ ಸದಸ್ಯ ರಫೀಕ್ ಮುಲ್ಲಾ ಮಾತನಾಡಿ, ನಿವೇಶನ ಹಂಚಿಕೆಯು ಪಕ್ಷಪಾತದಿಂದ ಕೂಡಿದೆ. ಮನೆಗಳಿಗಾಗಿ ಅರ್ಜಿ ಸಲ್ಲಿಸಿದ ಬಡವರನ್ನು ಬಿಟ್ಟು ತಮ್ಮ ಹಿಂಬಾಲಕರಿಗೆ ವಿತರಿಸಲಾಗಿದೆ. ಆ ಮೂಲಕ ಚುನಾಯಿತ ಸದಸ್ಯರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಪುರಸಭೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರು ಹೇಳಿದಂತೆ ಕೇಳುತ್ತಿದ್ದಾರೆ. ಈಗ ತಯಾರಿಸಿದ ಫಲಾನುಭವಿಗಳ ಯಾದಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

    ಪುರಸಭೆ ಸದಸ್ಯ ಸಂತೋಷ ಹಿರೇಮನಿ ಮಾತನಾಡಿ, ಹಲವು ದಶಕಗಳಿಂದ ಪಟ್ಟಣದಲ್ಲಿ ಮನೆಗಳಿಲ್ಲದೆ ವಾಸಿಸುತ್ತಿರುವ ದೇವದಾಸಿಯರು, ಬಡ ದಲಿತರನ್ನು ಫಲಾನುಭವಿಗಳ ಪಟ್ಟಿಯಿಂದ ಭಾಗಶಃ ಕೈಬಿಡಲಾಗಿದೆ. ಯಾದಿಯನ್ನು ಸರಿಪಡಿಸದಿದ್ದರೆ ನೊಂದ ಫಲಾನುಭವಿಗಳೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಪುರಸಭೆ ಸದಸ್ಯ ರೈಮಾನಸಾಬ್ ಮಲ್ಲನಕೇರಿ, ನಬೀಸಾಬ್ ಕೆಲೂರ, ಮಂಜಪ್ಪ ದಂಡಿನ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts