More

    ಅರ್ಹರನ್ನು ತಲುಪುತ್ತಿಲ್ಲ ಸರ್ಕಾರಿ ಯೋಜನೆ

    ಕುಮಟಾ: ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳು, ವಿನಾಯಿತಿ, ಸೌಲಭ್ಯಗಳನ್ನು ಒದಗಿಸಿದ್ದರೂ ಬಡರೈತ ಕುಟುಂಬಗಳ ಸ್ಥಿತಿ ಸುಧಾರಣೆಯಲ್ಲಿ ನಿರೀಕ್ಷಿತ ಫಲಿತಾಂಶ ಇನ್ನೂತನಕ ದಕ್ಕಿಲ್ಲದಿರುವುದು ಬೇಸರ ತಂದಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ತಾಲೂಕಿನ ಕೂಜಳ್ಳಿಯಲ್ಲಿ ನೂತನ ನಿರ್ವಿುತ ರೈತ ಸಂಪರ್ಕ ಕೇಂದ್ರದ ಕಟ್ಟಡ ಶನಿವಾರ ಉದ್ಘಾಟಿಸಿ ಬಳಿಕ ತಾಲೂಕು ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯೋಜನೆಗಳು, ಸೌಲಭ್ಯಗಳು ಎಲ್ಲ ಅರ್ಹ ರೈತರನ್ನು ತಲುಪುತ್ತಿಲ್ಲ. ವಿಮೆಯ ಲಾಭ ರೈತರಿಗೆ ಸಿಗುತ್ತಿಲ್ಲ. ಸಮಸ್ಯೆ ಏನಿದೆ ಎಂಬುದನ್ನು ಬೇರುಮಟ್ಟದಲ್ಲಿ ಅರಿತು ಇಲಾಖೆಗೆ ಗೌರವ ತರುವಂತೆ ಅಧಿಕಾರಿಗಳು ಕೆಲಸ ಮಾಡಬೇಕು.

    ರೈತರ ಮಕ್ಕಳಿಗೆ ಶಿಕ್ಷಣಕ್ಕೆ ವಿಶೇಷ ಬೆಂಬಲ ನೀಡುವ ಮೂಲಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಸಮುದಾಯದಲ್ಲಿ ಚೈತನ್ಯ ತುಂಬಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿರುವ ಅವರು ಹೆಚ್ಚಿನ ಪರಿಹಾರ ಘೊಷಿಸಿದ್ದಾರೆ. ಯಾವುದೇ ಮನೆಯೊಳಗೆ ಪ್ರವಾಹದ ನೀರು ಹೊಕ್ಕಿದ್ದರೂ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಕಳೆದ ಬಾರಿ 3000ಕ್ಕೂ ಹೆಚ್ಚು ಕುಟುಂಬಗಳು ಇದರ ಲಾಭ ಪಡೆದಿದ್ದರೆ ಈ ಬಾರಿ 7-8 ಸಾವಿರ ಕುಟುಂಬಗಳು ಪಡೆಯಲಿದೆ ಎಂದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 930 ಕ್ವಿಂಟಾಲ್ ಬಿತ್ತನೆ ಬೀಜ ಪಡೆದ ತಾಲೂಕು ಕುಮಟಾ. ಇಲ್ಲಿ ಸಾವಯವ ಗೊಬ್ಬರಕ್ಕೂ ಅತಿಯಾದ ಬೇಡಿಕೆ ಇದೆ. ಇಲ್ಲಿನ ರೈತರು ಕೃಷಿಯಲ್ಲಿ ಸಕ್ರಿಯವಾಗಿರುವುದು ಖುಷಿ ಕೊಡುವ ವಿಚಾರ. ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹತ್ತುಹಲವು ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.

    ಕೂಜಳ್ಳಿ ಪಂಚಾಯಿತಿ ಅಧ್ಯಕ್ಷ ಗಜಾನನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೌರಿ ಗೌಡ, ಉಪಕೃಷಿ ನಿರ್ದೇಶಕ ನಟರಾಜ ಟಿ.ಎಚ್., ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಯಶಸ್ವಿನಿ ಇತರರಿದ್ದರು. ರಶ್ಮಿ ಶಹಾಪುರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಐ. ಹೆಗಡೆ, ಎಸ್.ವಿ. ಹೆಗಡೆ, ಸಿ.ಎಂ. ಪಟಗಾರ, ಮೋಹನ ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts