More

    ಅರಣ್ಯ ರಕ್ಷಕರಿಬ್ಬರ ಬಂಧನ

    ಅಳ್ನಾವರ: ಸಾಗವಾನಿ ಮರದ ಕಟ್ಟಿಗೆ (ನಾಟಾ) ಸಾಗಿಸಲು ಪರವಾನಗಿ ನೀಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ತಾಲೂಕಿನ ಅರವಟಿಗೆ ಅರಣ್ಯ ನಾಕಾದ ಬಳಿ ಇರುವ ಫಾರೆಸ್ಟರ್ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಇಬ್ಬರು ಅರಣ್ಯ ರಕ್ಷಕರನ್ನು ಬಂಧಿಸಿದ್ದಾರೆ.

    ಅಶೋಕ ಪಾಟೀಲ ಹಾಗೂ ಧರೆಪ್ಪ ಆಳೂರು ಬಂಧಿತ ಆರೋಪಿಗಳು. ಫಾರೆಸ್ಟರ್ ಎಂ.ಡಿ. ಲಮಾಣಿ ತಲೆಮರೆಸಿಕೊಂಡಿದ್ದಾರೆ.

    ತಾಲೂಕಿನ ಕೋಗಿಲಗೇರಿ ಗ್ರಾಮದ ರುದ್ರಪ್ಪ ಗಣಪತಿ ಮಟಗೇರಿ ಎಂಬುವರು 3 ಎಕರೆ ಜಮೀನಿನಲ್ಲಿ ಸಾಗವಾನಿ ಮರಗಳನ್ನು ಬೆಳೆಸಿದ್ದರು. ಅವುಗಳನ್ನು ಕಡಿಯಲು ಮತ್ತು ಸಾಗಿಸಲು ಪರವಾನಗಿ ಕೊಡುವಂತೆ 2012ರಿಂದ ಅರವಟಗಿ ಅರಣ್ಯ ನಾಕಾ ಫಾರೆಸ್ಟರ್ ಕಚೇರಿಗೆ ಅಲೆಯುತ್ತಿದ್ದರು. ಆ ವೇಳೆ ಫಾರೆಸ್ಟರ್ ಎಂ.ಡಿ. ಲಮಾಣಿ ಹಾಗೂ ಅರಣ್ಯ ರಕ್ಷಕ ಅಶೋಕ ಪಾಟೀಲ, ಕಟ್ಟಿಗೆಯನ್ನು ತಮಗೇ ಮಾರಾಟ ಮಾಡಿ ಹಣ ಪಡೆಯುವಂತೆ ಹೇಳಿದ್ದರು. ಅದಕ್ಕೆ ಒಪ್ಪದ ಕಾರಣ ಪರವಾನಗಿ ಕೊಡದೇ ಸತಾಯಿಸುತ್ತಿದ್ದರು.

    ಕೊನೆಗೆ 2019ರ ಮಾರ್ಚ್​ನಲ್ಲಿ ಪರವಾನಗಿ ಪತ್ರ ಕೊಟ್ಟಿದ್ದರು. ಬಳಿಕ ಮರದ ದಿಮ್ಮಿಗಳನ್ನು ವಾಹನದಲ್ಲಿ ಅಳ್ನಾವರಕ್ಕೆ ಸಾಗಿಸಲು ಪಾಸ್ ಕೇಳಲು ಹೋದಾಗ ನಮಗೆ ಶೇ. 10ರಷ್ಟು ಹಣ ಕೊಡಬೇಕು. 40 ಸಾವಿರ ರೂ. ಕೊಡಬೇಕು ಎಂದು ಒತ್ತಡ ಹೇರುತ್ತಿದ್ದರು. ಮೂರು ವಾಹನದ ಪಾಸ್ ಪಡೆಯಲು ತೆರಳಿದ್ದಾಗ 5 ಸಾವಿರ ರೂ. ಕೊಟ್ಟರೆ ಮಾತ್ರ ಪಾಸ್ ಕೊಡುವುದಾಗಿ ತಿಳಿಸಿದ್ದರು. ಇದರಿಂದ ಬೇಸತ್ತ ರುದ್ರಪ್ಪ ಧಾರವಾಡ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಎಸಿಬಿ ಡಿವೈಎಸ್​ಪಿ ವಿಜಯಕುಮಾರ ಬಿಸನಳ್ಳಿ ನೇತೃತ್ವದಲ್ಲಿ ಇನ್ಸ್​ಪೆಕ್ಟರ್ ಮಂಜುನಾಥ ಹಿರೇಮಠ ತಂಡ ಗುರುವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 5 ಸಾವಿರ ರೂ. ವಶಪಡಿಸಿಕೊಂಡಿದೆ. ಸಿಬ್ಬಂದಿ ವಿಜಯಲಕ್ಷ್ಮೀ ಕಟ್ಟಿ, ಶ್ರೀಶೈಲ ಕಾಜಗಾರ, ಗಿರೀಶ ಮನಸೂರ, ಲೋಕೇಶ ಬೆಂಡಿಕಾಯಿ, ಶಿವಾನಂದ ಕೆಲವಡಿ, ಕಾರ್ತಿಕ ಹುಯಿಲಗೋಳ, ಎಸ್. ವೀರೇಶ, ಶಂಕರ ನರಗುಂದ, ಗಣೇಶ ಶಿರಹಟ್ಟಿ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts