More

    ಅರಣ್ಯ ಇಲಾಖೆ ಯಡವಟ್ಟನಿಂದ ಕೃಷಿ ಜಮೀನಿಗೆ ಮಳೆನೀರು; ಗ್ರಾಮಸ್ಥರ ಆರೋಪ: ನಷ್ಟ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

    ತೀರ್ಥಹಳ್ಳಿ: ಅರಣ್ಯ ಸಂರಕ್ಷಣೆ ಕಾನೂನು ಹಳ್ಳಿಗರ ಜೀವನಕ್ಕೆ ಮಾರಕವಾಗಿದ್ದು ತಿದ್ದುಪಡಿ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾಟ ಹಳ್ಳಿಯಲ್ಲಿ ಹೆಚ್ಚಾಗಿದೆ. ಹಳ್ಳಿಗರು ಬೀದಿಗಿಳಿದರೆ ಅದರ ಪರಿಣಾಮವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮಲೆನಾಡು ಸಂಘರ್ಷ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್ ಎಚ್ಚರಿಸಿದರು.
    ಸೋಮವಾರ ತಾಲೂಕು ಕಚೇರಿ ಮುಂಭಾಗ ದೇಮ್ಲಾಪುರ, ಹುಂಚದಕಟ್ಟೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಅರಸಾಳು ವಲಯಾರಣ್ಯ ವಿಭಾಗ ಗಡಿ ಕಾಲುವೆ ನಿರ್ಮಿಸಿ ಸಾಗುವಳಿ ಜಮೀನಿಗೆ ಮಳೆನೀರು ಹರಿಯುವಂತೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
    ಈ ವೇಳೆ ಮಾತನಾಡಿದ ಅವರು, ಆಲೂರು, ಹೊಸಕೊಪ್ಪ, ಕಾರಕೋಡ್ಲು, ದೇಮ್ಲಾಪುರ ಸೇರಿದಂತೆ ಅನೇಕ ಗ್ರಾಮದಲ್ಲಿ ಅರಣ್ಯ ಇಲಾಖೆ ಮಾರ್ಚ್‌ನಲ್ಲಿ ಗಡಿಕಾಲುವೆ ನಿರ್ಮಿಸಿದೆ. ಮಳೆನೀರು ಕಾಲುವೆ ತುಂಬಿ ಸಾಗುವಳಿ ಜಮೀನು, ರಸ್ತೆಗಳಲ್ಲಿ ಹರಿದ ಕಾರಣ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಅರಣ್ಯ ಇಲಾಖೆ ಹಾನಿಯ ನಷ್ಟದ ಹೊಣೆ ಹೊತ್ತು ರೈತರಿಗೆ ಸೂಕ್ತವಾದ ಪರಿಹಾರ ಧನ ನೀಡಬೇಕು. ಇಲ್ಲದಿದ್ದರೆ ಸಾಕುಪ್ರಾಣಿಗಳೊಂದಿಗೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹೊಸಕೊಪ್ಪ ಸುಂದರೇಶ್ ಮಾತನಾಡಿ, ರೈತರಿಗೆ ಕಿರುಕುಳ ನೀಡದಂತೆ ಹಲವು ಬಾರಿ ಮನವಿ ಮಾಡಿದರು ಅರಣ್ಯ ಇಲಾಖೆ ಸ್ಪಂದಿಸಿಲ್ಲ. ಕಾನೂನು ಹೆಸರಲ್ಲಿ ಅರಣ್ಯ ಇಲಾಖೆ ಕೆಟ್ಟ ವರ್ತನೆ ತೋರಿದರೆ ರೈತರು ಸುಮ್ಮನೆ ಇರಲು ಸಾಧ್ಯವಿಲ್ಲ. ನೆಡತೋಪು, ಕಾಲುವೆ ಕಾಮಗಾರಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿದ್ದು, ಸರ್ಕಾರ ತನಿಖೆ ನಡೆಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts