More

    ಅಭಿವೃದ್ಧಿ ಹೆಸರಲ್ಲಿ ಕೆರೆ ಮಣ್ಣು ಲೂಟಿ, ಹೊನ್ನೇನಹಳ್ಳಿ, ಎಡೇಹಳ್ಳಿ ಭಾಗದಲ್ಲಿ ಮಾಫಿಯಾ*ವಾಣಿಜ್ಯ ಬಳಕೆಗೆ ಕೆರೆ ಒಡಲಿಗೆ ಕನ್ನ

    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿದ್ದು, ಕೆರೆ ಒಡಲಿಗೆ ಮಣ್ಣು ಮಾಫಿಯಾದವರು ಕನ್ನ ಹಾಕುತ್ತಿದ್ದಾರೆ.
    ಹೂಳು ತೆಗೆದು ಬರುವ ಮಣ್ಣನ್ನು ಕೃಷಿ ಜಮೀನುಗಳಿಗೆ ಬಳಸುವಂತೆ ಸರ್ಕಾರ ಅನುಮತಿ ನೀಡಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವರು ಕೆರೆ ಮಣ್ಣನ್ನು ಕೃಷಿ ಭೂಮಿಗೆ ಬಳಸದೆ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಕಾರಣವಾಗಿದೆ.

    ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಹಾಗೂ ಎಡೇಹಳ್ಳಿಗೆ ಹೊಂದಿಕೊಂಡಿರುವ ವಿಸ್ತಾರವಾದ ಕೆರೆ ಅಂಗಳ ಇಂಥ ಮಾಫಿಯಾದ ಕಪಿಮುಷ್ಟಿಗೆ ಸಿಲುಕಿದೆ. ಮುಖ್ಯವಾಗಿ ಈ ಕೆರೆಯಲ್ಲಿ ಕುಮುದಾವತಿ ನದಿ ಪುನಶ್ಚೇತನ ಸಮಿತಿಯವರು ಸಾವಿರಾರು ಗಿಡ ನೆಟ್ಟು ಇಂಗು ಗುಂಡಿ ನಿರ್ಮಿಸಿದ್ದಾರೆ. ಮಳೆ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿ ಎಂಬ ದೃಷ್ಟಿಯಿಂದ ಇಂಥ ಸಾಮಾಜಿಕ ಕಾರ್ಯ ನಡೆಸಲಾಗಿದೆ. ಆದರೆ ಇದೇ ಕೆರೆ ಒಡಲನ್ನು ಮನಸೋ ಇಚ್ಛೆ ಬಗೆಯುತ್ತಿರುವ ಮಾಫಿಯಾದವರು ಇಲ್ಲಿನ ಮಣ್ಣನ್ನು ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

    ಅನುಮತಿ ಇಲ್ಲದೆ ಲೂಟಿ: ಕೆಲವು ರಿಯಲ್ ಎಸ್ಟೇಟ್ ವ್ಯಾಪಾರಿಗಳು ತಮ್ಮ ಒಡೆತನದ ಜಾಗಗಳಿಗೆ ಮಣ್ಣನ್ನು ಸಾಗಿಸುತ್ತಿದ್ದಾರೆ. ಕಂದಾಯ ಇಲಾಖೆ, ಗ್ರಾಪಂ ಸೇರಿ ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಅನುಮತಿ ಪತ್ರ ಪಡೆಯದೆ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ, ಅನುಮತಿ ಪತ್ರ ಪಡೆದಿದ್ದೇವೆ ಎಂದು ಗ್ರಾಮಸ್ಥರನ್ನು ನಂಬಿಸಿ ರಾಜಾರೋಷವಾಗಿ ಮಣ್ಣು ಲೂಟಿ ಹೊಡೆಯುತ್ತಿದ್ದಾರೆ ಎನ್ನಲಾಗಿದೆ.

    2 ವರ್ಷದಿಂದ ಲೂಟಿ: 35 ಎಕರೆ ವಿಸ್ತೀರ್ಣದ ಕೆರೆಯಿಂದ 2 ವರ್ಷದಿಂದ ನಿರಂತರವಾಗಿ ಮಣ್ಣು ಸಾಗಿಸಲಾಗುತ್ತಿದೆ, ಇಟ್ಟಿಗೆ ್ಯಾಕ್ಟರಿ ಸೇರಿ ವಿವಿಧ ವಾಣಿಜ್ಯ ಬಳಕೆಗೆ ಇಂಥ ಮಣ್ಣನ್ನು ಬಳಸಲಾಗುತ್ತಿದೆ. ಹಗಲಿನ ವೇಳೆಯೇ ನಿರಾಂತಕವಾಗಿ ಲೂಟಿ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಮಣ್ಣು ಲೂಟಿಯಾಗುತ್ತಿರುವುದಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಕೆಲವು ತಾಲೂಕುಮಟ್ಟದ ಅಧಿಕಾರಿಗಳ ಶ್ರೀರಕ್ಷೆ ಇದೆ ಎಂಬ ಆರೋಪ ಕೇಳಿಬರುತ್ತಿದೆ.

    ಇವೆರಡು ಗ್ರಾಮದ ನೂರಾರು ಜಾನುವಾರುಗಳ ಮೇವಿನ ತಾಣವಾಗಿದ್ದ ಕೆರೆ ಅಂಗಳ ಈಗ ಮಣ್ಣಿನಿಂದ ಆವೃತವಾಗಿದೆ. ಜಲಮೂಲ ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಲೂಟಿ ಮಾಡುವವರ ಬೆನ್ನಿಗೆ ನಿಂತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಭಾಗದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಣ್ಣು ತುಂಬುತ್ತಿದ್ದ ಜೆಸಿಬಿ ಹಾಗೂ ಲಾರಿ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಅನುಮತಿ ಇಲ್ಲದೆ ಮಣ್ಣು ತೆಗೆದರೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ.
    ಎಚ್.ಎಂ.ಕುಮಾರಸ್ವಾಮಿ, ಉಪತಹಸೀಲ್ದಾರ್

    ಅಕ್ರಮವಾಗಿ ಕೆರೆ ಮಣ್ಣು ಲೂಟಿ ಮಾಡಿ 6 ಅಡಿಗೂ ಹೆಚ್ಚು ಆಳ ತೋಡುತ್ತಿದ್ದಾರೆ. ಇದರಿಂದ ಕೆರೆಯ ಅಂಗಳ ನಾಶವಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು.
    ಗೌರಮ್ಮ, ರೈತ ಮಹಿಳೆ ಹೊನ್ನೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts