More

    ಅಭಿವೃದ್ಧಿ ಕಾರ್ಯ ತ್ವರಿತವಾಗಿ ಮುಗಿಸಿ

    ಬೆಳಗಾವಿ: ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಪ್ರತಿಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಮತ್ತು ಕೈಗೊಂಡ ಕ್ರಮಗಳ ಕುರಿತು ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ರಾಮದುರ್ಗ ತಾಲೂಕಿನ ಮುದೇನೂರಿನಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು ಹಲವರು ಅಸ್ವಸ್ಥಗೊಂಡ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಚರಂಡಿ ಕೆಳಗೆ ಕುಡಿಯುವ ನೀರಿನ ಪೈಪ್‌ಲೈನ್ ಇರುವುದನ್ನು ಏಕೆ ಗಮನಿಸಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ನಿಮ್ಮ ನಿರ್ಲಕ್ಷೃದಿಂದ ಈ ಘಟನೆ ನಡೆದಿದೆ. ಅದಕ್ಕೆ ಕಾರಣವಾದ ಪಿಡಿಒ ಹಾಗೂ ಸ್ಥಳೀಯ ಕಿರಿಯ ಅಭಿಯಂತರನ್ನು ಸೇವೆಯಿಂದ ಅಮಾನತುಗೊಳಿಸಿ ಎಂದು ಸೂಚಿಸಿದರು. ಜಿಲ್ಲಾದ್ಯಂತ ಜಲಜೀವನ ಮಿಷನ್ ಕಾಮಗಾರಿ ತ್ವರಿತವಾಗಿ ಕೈಗೊಳ್ಳಬೇಕು. ಬೆಳಗಾವಿ-ಚೋರ್ಲಾ ರಸ್ತೆ ನಿರ್ಮಾಣ ಕಾಮಗಾರಿಗೆ ನ.14ರಂದು ಚಾಲನೆ ನೀಡಬೇಕು. ಇದಕ್ಕೆ ವಿನಾಕಾರಣ ತಕರಾರು ತೆಗೆಯದೆ, ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲ ಮುಗಿದಿರುವುದರಿಂದ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ, ದುರಸ್ತಿ ಕಾಮಗಾರಿಗಳನ್ನು ಡಿ.10ರೊಳಗೆ ಪೂರ್ಣಗೊಳಿಸಬೇಕು. ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿ, ನೂತನ ಕೊಠಡಿಗಳ ನಿರ್ಮಾಣ ಚುರುಕುಗೊಳಿಸಬೇಕು
    ಎಂದರು. ಪ್ರವಾಹ ಸಂದರ್ಭ ಉಂಟಾದ ಮನೆ ಹಾನಿಗೆ ಹಲವರು ಮೊದಲ ಕಂತಿನ ಪರಿಹಾರ ಪಡೆದಿದ್ದಾರೆ. ಆದರೂ, ಮನೆ ನಿರ್ಮಾಣ ಕಾಮಗಾರಿ ಆರಂಭಿಸದವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ಸಂಬಂಧಿಸಿ 61,535 ರೈತರಿಗೆ 68.54 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಅಂತೆಯೇ ಮನೆಗೆ ನೀರು ನುಗ್ಗಿ ಹಾನಿಯಾಗಿರುವ 794 ಕುಟುಂಬಗಳಿಗೆ ತಲಾ 10 ಸಾವಿರದಂತೆ 79.40 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.

    ಭೂಸ್ವಾಧೀನ ಆರಂಭಿಸಿ: ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಆರಂಭಿಸಬೇಕು. ಕಬ್ಬು ಕಟಾವು ನಂತರ ಮಾರ್ಕಿಂಗ್ ಮತ್ತಿತರ ಪ್ರಕ್ರಿಯೆ ಚುರುಕುಗೊಳಿಸಬೇಕು. ಇಲಾಖೆಗಳ ಸಮನ್ವಯ ಕೊರತೆಯಿಂದ ಯಾವ ಕಾಮಗಾರಿಯೂ ವಿಳಂಬವಾಗಬಾರದು ಎಂದು ತಾಕೀತು ಮಾಡಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಬೆಳಗಾವಿ- ಕಿತ್ತೂರು ಮಧ್ಯೆ ಭೂಸ್ವಾಧೀನ ಆರಂಭಿಸಲಾಗಿದೆ. ಬಾಗಲಕೋಟೆ-ಕುಡಚಿ ಮಾರ್ಗಕ್ಕೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದರು. ಬೆಳಗಾವಿಯಲ್ಲಿ 37 ಸಾವಿರ ಎಲ್‌ಇಡಿ ದೀಪ ಅಳವಡಿಸಲಾಗುತ್ತಿದೆ. ಆದರೆ, ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಅದನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಚಳಿಗಾಲದ ಅಧಿವೇಶನ ಸಮೀಪಿಸುತ್ತಿರುವುದರಿಂದ ರಸ್ತೆ, ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು ಎಂದೂ ಸೂಚಿಸಿದರು. ಸ್ಮಾರ್ಟ್‌ಸಿಟಿ ಎಂಡಿ ಡಾ.ಪ್ರವೀಣ ಬಾಗೇವಾಡಿ, ಡಿಸಿಪಿ ರವೀಂದ್ರ ಗಡಾದಿ, ಎಡಿಸಿ ಅಶೋಕ ದುಡಗುಂಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts