More

    ಅಭಿವೃದ್ಧಿ ಕಾರ್ಯಕ್ಕೆ ಕರೊನಾ ನೆಪ ಸಲ್ಲದು

    ಕುಮಟಾ: ಕರೊನಾ ಸಮಸ್ಯೆ ಇದೆಯೆಂದು ಯಾವುದೇ ಅಭಿವೃದ್ಧಿ ಕಾರ್ಯ ನಿಲ್ಲಿಸಲಾಗದು. ಶಿಕ್ಷಣ ಹೊರತುಪಡಿಸಿ ಉಳಿದೆಲ್ಲ ವ್ಯವಸ್ಥೆಗಳು ಪ್ರಗತಿಯಲ್ಲಿರಲಿವೆ. ಮಳೆಗಾಲ ಆರಂಭವಾಗಿದ್ದು, ಆದ್ಯತೆ ಮೇರೆಗೆ ಕೆಲಸಗಳಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸೂಚಿಸಿದರು.

    ಇಲ್ಲಿನ ತಾಪಂ ಸಭಾಭವನದಲ್ಲಿ ಮಂಗಳವಾರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕೆಲವೇ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಕರೊನಾ ಮುಕ್ತವಾಗುವ ನಿರೀಕ್ಷೆ ಇದೆ. ಕ್ವಾರಂಟೈನ್ ಶಿಷ್ಟಾಚಾರ ಪಾಲನೆಯಾಗಬೇಕು ಎಂದರು.

    ಶಾಸಕ ದಿನಕರ ಶೆಟ್ಟಿ ಮಾತನಾಡಿ, ತಂಡ್ರಕುಳಿಯ ನಿವಾಸಿಗಳಿಗೆ ಬಾಡಿಗೆ ಹಣ ವಿತರಿಸಬೇಕು. ತಾಲೂಕಿನಲ್ಲಿ ಅಪಾರ ಪ್ರಮಾಣದ ಸಿಹಿ ಈರುಳ್ಳಿ ಬೆಳೆ ನಾಶವಾಗಿದ್ದು, ಪರಿಹಾರ ಕೊಡಿಸಬೇಕು. ತದಡಿಯಲ್ಲಿ ಬಾರ್ಜ್ ಸೇವೆ ಪುನರಾರಂಭಿಸಬೇಕು ಎಂದು ಕೋರಿದರು.

    ಪ್ರತಿಕ್ರಿಯಿಸಿದ ಸಚಿವರು, ಬಾಡಿಗೆ ವಿತರಣೆ ಕುರಿತು ರಾ.ಹೆ. ಪ್ರಾಧಿಕಾರ ಹಾಗೂ ಐಆರ್​ಬಿ ಮೇಲಧಿಕಾರಿ ಗಳೊಂದಿಗೆ ರ್ಚಚಿಸಲಾಗುವುದು. ಈರುಳ್ಳಿ ಬೆಳೆಗಾರರಿಗೆ ಪರಿಹಾರ ವಿತರಣೆಯಾಗಲಿದೆ. ಬಾರ್ಜ್ ಸೇವೆ ಶೀಘ್ರ ಆರಂಭವಾಗಲಿದೆ ಎಂದರು. ರಾಜೀವಗಾಂಧಿ ವಸತಿ ಯೋಜನೆಯಡಿ ಮನೆ ನಿರ್ವಣಕ್ಕೆ ಅವಕಾಶ ನೀಡಬೇಕು. ಉದ್ಯೋಗ ಖಾತ್ರಿಯಲ್ಲಿ ಕೃಷಿ, ಕೆರೆ, ಉದ್ಯೋಗ, ಶಾಲೆಗಳಿಗೆ ಆದ್ಯತೆ ಕೊಡಿ ಎಂದು ತಾಪಂ ಇಒ ಸಿ.ಟಿ. ನಾಯ್ಕ ಅವರಿಗೆ ಸೂಚಿಸಿದರು. ಬಿಇಒ ರಾಜೇಂದ್ರ ಭಟ್ಟ ಮಾತನಾಡಿ, ತಾಲೂಕಿನ 41 ವಿದ್ಯಾರ್ಥಿಗಳಿಗೆ ಬೇರೆ ಜಿಲ್ಲೆಯಲ್ಲಿ ಹಾಗೂ ಬೇರೆ ಜಿಲ್ಲೆಯ 11 ವಿದ್ಯಾರ್ಥಿಗಳು ನಮ್ಮ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು. ಸಚಿವರು ವಿವಿಧ ಇಲಾಖೆಯ ಪ್ರಗತಿ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಅಜಿತ್ ಎಂ.ರೈ, ಡಿವೈಎಸ್​ಪಿ ನಿಖಿಲ್, ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ತಹಸೀಲ್ದಾರ್ ಮೇಘರಾಜ ನಾಯ್ಕ, ಜಿಪಂ ಸದಸ್ಯ ಗಜಾನನ ಪೈ, ಪ್ರದೀಪ ನಾಯಕ ದೇವರಬಾವಿ ಇದ್ದರು.

    ಸಭೆಗೆ ಇನ್ಮುಂದೆ ಅಧಿಕಾರಿಗಳು ಗೈರಾದರೆ ಸಹಿಸುವುದಿಲ್ಲ…!
    ಉಪ್ಪಿನಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಗೈರು ಹಾಜರಾದ್ದರಿಂದ ಎಸಿಎಫ್ ಪ್ರವೀಣಕುಮಾರ ಬಸ್ರೂರು ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ‘ನಾನೇನೂ ಮೋಜಿಗಾಗಿ ಬಂದಿಲ್ಲ. ಜಿಲ್ಲಾ ಸಚಿವರ ಭೇಟಿ ಮೊದಲೇ ಗೊತ್ತಿರಲಿಲ್ವಾ? ಇದೇ ಕೊನೆ, ಇನ್ನೊಮ್ಮೆ ಹೀಗಾದರೆ ಸಹಿಸುವುದಿಲ್ಲ’ ಎಂದು ಎಚ್ಚರಿಸಿದರು. ‘ಅಭಿವೃದ್ಧಿ ಕೆಲಸಗಳಿಗೂ ಅಡ್ಡಿಯಾಗುತ್ತಿದ್ದೀರಿ. ನಿಮ್ಮದೇ ಇಲಾಖೆ ಕಟ್ಟಡಗಳನ್ನು ಅರಣ್ಯ ಪ್ರದೇಶದಲ್ಲಿ ಯಾವುದೆ ಅನುಮತಿ ಇಲ್ಲದೆ ಕಟ್ಟುತ್ತಿದ್ದೀರಿ. ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮುಂತಾದ ಅಭಿವೃದ್ಧಿ ವಿಚಾರದಲ್ಲಿ ಅರಣ್ಯ ಅಧಿಕಾರಿಗಳು ಸಹಕಾರ ಮರೆತು ತೊಂದರೆ ನೀಡಿದರೆ ಸಹಿಸುವುದಿಲ್ಲ, ನಿಮಗೂ ತೊಂದರೆ ತಪ್ಪಿದ್ದಲ್ಲ ಎಂದು ಗುಡುಗಿದರು. ಪುರಸಭೆಯ ಮುಖ್ಯಾಧಿಕಾರಿ ಎಂ.ಕೆ. ಸುರೇಶ ಕೂಡಾ ಸಭೆಯ ಆರಂಭದಲ್ಲಿ ಗೈರು ಹಾಜರಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

    ಇದು ನೀರು ಪೂರೈಕೆ ಯೋಜನೆ…
    ಕುಮಟಾ ತಾಲೂಕಿನ 6-7 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರಸ್ತಾವಿತ ಬಹುಗ್ರಾಮ ಯೋಜನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಉಪ್ಪಿನಪಟ್ಟಣದ ಅಘನಾಶಿನಿ ನದಿ ದಕ್ಕೆಯಲ್ಲಿ ಮಂಗಳವಾರ ಸ್ಥಳ ಪರಿಶೀಲಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರಿನ ತುಟಾಗ್ರತೆ ಅನುಭವಿಸುತ್ತಿರುವ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಇಲ್ಲಿನ ಚಂಡಿಕಾ ಹಾಗೂ ಅಘನಾಶಿನಿ ನದಿ ಸಂಗಮದ ಸ್ಥಳದಲ್ಲಿ ಪಿಕಪ್ ಡ್ಯಾಂ ಕಟ್ಟಿ ಕುಡಿಯುವ ನೀರು ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಸ್ಥಳೀಯ ಪಂಚಾಯಿತಿ ಹಾಗೂ ಸುತ್ತಮುತ್ತಲ ಜನರ ಅಹವಾಲನ್ನು ತಿಳಿದುಕೊಳ್ಳುವ ಉದ್ದೇಶವೂ ಇದೆ. ಈ ಯೋಜನೆಗೆ ಮೊದಲು ತಜ್ಞರಿಂದ ವರದಿ ಸಿದ್ಧಪಡಿಸಲಾಗುವುದು ಎಂದರು.

    ‘ನಮ್ಮ ಜಿಲ್ಲೆಯಲ್ಲಿ ಏನೇ ಮಾಡಲು ಹೋದರೂ ವದಂತಿಗಳು ಜನರಲ್ಲಿ ಗೊಂದಲ ಹುಟ್ಟಿಸಿ ಗಲಾಟೆಗೆ ಕಾರಣವಾಗುತ್ತದೆ. ಆದ್ದರಿಂದ ಇಲ್ಲಿ ಮಾಡಲು ಹೊರಟಿರುವುದು ಕುಡಿಯುವ ನೀರು ಪೂರೈಕೆ ಯೋಜನೆಯೇ ಹೊರತು ಇನ್ನೇನೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ನದಿಯಲ್ಲಿ ಸಿಹಿ ನೀರಿದೆ. ಕುಡಿಯುವ ನೀರಿಗೆ ತತ್ವಾರ ಇರುವ ಹಲವು ಪಂಚಾಯಿತಿ ವ್ಯಾಪ್ತಿಯ ಜನರಿಗೆ ಪೂರೈಸಬೇಕೆಂಬ ಒಂದೇ ಉದ್ದೇಶ ಯೋಜನೆಯಲ್ಲಿದೆ. ದೊಡ್ಡ ಡ್ಯಾಂ ಕಟ್ಟಿ ಮುಳುಗಡೆ ಮಾಡುವ ಯಾವ ಯೋಜನೆಯೂ ಇಲ್ಲಿಲ್ಲ. ಬೇಸಿಗೆಯಲ್ಲಿ ಸಿಹಿ ನೀರು ಸಂಗ್ರಹಣೆ ಮತ್ತು ಮಳೆಗಾಲದಲ್ಲಿ ಗೇಟ್ ತೆರೆದು ಬಿಡುವ ವ್ಯವಸ್ಥೆ ಇರಲಿದೆ. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲವೂ ಹೆಚ್ಚಲಿದೆ. ಕುಡಿಯುವ ನೀರಿನ ಸಮಸ್ಯೆಯೂ ಶಾಶ್ವತವಾಗಿ ನೀಗಲಿದೆ’ ಎಂದರು. ಅಳಕೋಡ ಪಂಚಾಯಿತಿ ಅಧ್ಯಕ್ಷ ಕೃಷ್ಣಾನಂದ ವೆರ್ಣೆಕರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts