More

    ಅಭಿವೃದ್ಧಿಯಾಗದ ಕಲ್ಸಂಕ ರಸ್ತೆ

    ಕುಮಟಾ: ಪಟ್ಟಣದ ಚಿತ್ರಿಗಿ ವಾರ್ಡ್​ನ ಕಲ್ಸಂಕದಲ್ಲಿ 400 ಮೀಟರ್​ನಷ್ಟು ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯರು ಕಳೆದ 2014ರಿಂದ ಮಾಡುತ್ತಿರುವ ನಿರಂತರ ಪ್ರಯತ್ನಕ್ಕೆ ಈವರೆಗೆ ಫಲ ಸಿಕ್ಕಿಲ್ಲ.

    ಕಲ್ಸಂಕದ ಕುಂಟಜಟಗ ದೇವಸ್ಥಾನದಿಂದ ಶೇಸುದಾಸಕೇರಿಗೆ ಹೋಗುವಲ್ಲಿ ಕೆರೆಯ ಹತ್ತಿರದ ರಸ್ತೆಯ ದುಸ್ಥಿತಿ ನೋಡುವ ಹಾಗಿಲ್ಲ. ಚಿಕ್ಕ ರಸ್ತೆಯಾದರೂ ಇಲ್ಲಿ 25ಕ್ಕೂ ಹೆಚ್ಚು ಸುಶಿಕ್ಷಿತ ಕುಟುಂಬಗಳಿದ್ದು, ಅಧ್ಯಾಪಕರು ಇದ್ದಾರೆ. ಇಲ್ಲಿ ಸ್ವಸಹಾಯ ಸೇವಾ ಸಂಘಗಳಿವೆ, ಹೊಲಿಗೆ ಇತರ ತರಬೇತಿ ನಡೆಯುತ್ತವೆ. ಇಲ್ಲಿಂದ ಕುಮಟಾ ಪುರಸಭೆ ಕಾರ್ಯಾಲಯ ಕೆಲವೇ ನೂರು ಮೀಟರ್ ದೂರದಲ್ಲಿದೆ. ಆದರೂ ರಸ್ತೆಯ ಕನಿಷ್ಠ ನಿರ್ವಹಣೆಯೂ ಇಲ್ಲದೇ ಪಾಳು ಬಿದ್ದಂತಾಗಿದೆ.
    ರಸ್ತೆಗೆ ಡಾಂಬರು ಹಾಕಿ, ಇಲ್ಲವೇ ಕಾಂಕ್ರೀಟ್ ಮಾಡಿ, ಅವಕಾಶವಿದಲ್ಲಿ ಟೈಲ್ಸ್ ಅಳವಡಿಸಬಹುದು ಎಂದು ಮೊದಲ ಮನವಿಯನ್ನು 2014ರ ಜುಲೈ 8ರಂದು, ಎರಡನೇ ಮನವಿಯನ್ನು 2018ರ ಫೆಬ್ರವರಿ 15ರಂದು ಪುರಸಭೆಗೆ ನೀಡಲಾಗಿತ್ತು. ಬಳಿಕ 2018ರ ಮಾರ್ಚ್ 16 ರಂದು ಅಂದಿನ ಶಾಸಕಿ ಶಾರದಾ ಶೆಟ್ಟಿ ಅವರಿಗೂ ಮನವಿ ಕೊಡಲಾಯಿತು. ಆದರೆ, ಒಳಚಂರಂಡಿ ಕಾಮಗಾರಿ ಆರಂಭವಾದ ಬಳಿಕ ಇದ್ದ ಕಚ್ಚಾ ರಸ್ತೆಯೂ ನಿರ್ಲಕ್ಷ್ಯ್ಕೆ ಒಳಗಾಗಿ ಮತ್ತೆಂದೂ ದುರಸ್ತಿ ಕಾಣಲೇ ಇಲ್ಲ. 2019ರ ಫೆಬ್ರವರಿ 3ರಂದು ಶಾಸಕ ದಿನಕರ ಶೆಟ್ಟಿ ಅವರಿ ಮನವಿ ಸಲ್ಲಿಸಲಾಗಿದೆ. ಆದರೆ, ಅವರಿಂದಲೂ ಉತ್ತರ ಬಂದಿಲ್ಲ.
    ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಎನ್. ಆರ್. ಕಾಮತ, 400 ಮೀ. ರಸ್ತೆಗಾಗಿ ಇಷ್ಟೊಂದು ಕಾಲದಿಂದ ಅಂಗಲಾಚುವ ಪರಿಸ್ಥಿತಿ ಬಹುಶಃ ಇನ್ನೆಲ್ಲೂ ಇಲ್ಲ. ಪುರಸಭೆಗೆ ತೀರಾ ಹತ್ತಿರದಲ್ಲಿರುವ ಈ ರಸ್ತೆ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ನಮ್ಮ ವಾರ್ಡಿನ ಸದಸ್ಯ ರಾಜೇಶ ಪೈ ಅವರಿಗೂ ಸಮಸ್ಯೆ ಗೊತ್ತಿದೆ. ರಸ್ತೆಗೆ ಡಾಂಬರು, ಕಾಂಕ್ರೀಟ್ ಅಥವಾ ಟೈಲ್ಸ್ ಅಳವಡಿಸಿದರೆ ಇನ್ನೂ ಉತ್ತಮ ಎಂದು ತಿಳಿಸಿದರು.
    ಜನರ ತೆರಿಗೆಯ ದುಡ್ಡನ್ನು ಎಲ್ಲೆಲ್ಲೋ ಬೇಕಾಬಿಟ್ಟಿ ಹಾಕಿ ಜನರ ಕಣ್ಣೊರೆಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಒಮ್ಮೆ ನಮ್ಮ ಕೇರಿಗೆ ಬಂದು ನೋಡಲಿ, ಜನರ ಮನವಿಗೆ ಕೂಡಲೇ ಸ್ಪಂದಿಸುವಂತಾಗಲಿ ಎಂದು ಕಲ್ಸಂಕ ನಿವಾಸಿಗಳಾದ ವಿಶ್ವನಾಥ ಬಾಬು ಶಾನಭಾಗ, ಎಂ. ಅನ್ವರ್ ಶೇಖ್, ನಾರಾಯಣ ಕೆ. ನಾಯಕ, ಭಿಕ್ಕು ನಾರಾಯಣ ಪೈ, ಯಶ್ವಂತ ಶಾನಭಾಗ, ಮೋಹನ ದೇವಾಡಿಗ, ಕೃಷ್ಣ ದೇವಾಡಿಗ, ಮಧುಸೂಧನ ದೇವಾಡಿಗ, ಮಾರುತಿ ಭಂಡಾರಿ ಇತರರು ಆಗ್ರಹಿಸಿದ್ದಾರೆ.

    ಕಲ್ಸಂಕ ಶೇಸುದಾಸ ಕೇರಿ ರಸ್ತೆ ಅಭಿವೃದ್ಧಿ ಬಗ್ಗೆ ಜನರ ಬೇಡಿಕೆ ಗಮನದಲ್ಲಿದೆ. ಒಳಚರಂಡಿ ಕಾಮಗಾರಿಯಿಂದ ರಸ್ತೆ ಇನ್ನಷ್ಟು ಹಾಳಾಗಿರುವುದು ಸತ್ಯ. ಮಳೆಗಾಲ ಮುಗಿಯುತ್ತಿದ್ದಂತೆ ಕಲ್ಸಂಕ ರಸ್ತೆಯ ಅಭಿವೃದ್ಧಿಗೆ ಆದ್ಯತೆ ಕೊಟ್ಟು ಸ್ಥಳೀಯರ ಬೇಡಿಕೆ ಈಡೇರಿಸಲಾಗುವುದು.
    | ಎಂ. ಕೆ. ಸುರೇಶ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts