More

    ಅಬಲರಿಗೆ ಅಂಗನವಾಡಿ ಅಮ್ಮನ ಕೈತುತ್ತು

    ಧಾರವಾಡ: ಕರೊನಾ 2ನೇ ಅಲೆಯ ಅಬ್ಬರ ಈಗಷ್ಟೇ ಕೊಂಚ ತಗ್ಗಿದೆ. ಈ ನಡುವೆಯೇ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ, ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕಾದ ಅನಿವಾರ್ಯತೆ ಇದ್ದು, ಅದರಲ್ಲೂ ಅಪೌಷ್ಟಿಕ ಮಕ್ಕಳ ಆರೋಗ್ಯದತ್ತ ನಿಗಾ ವಹಿಸುವುದು ಅಗತ್ಯ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯೋನ್ಮುಖವಾಗಿದೆ.

    ಅಪೌಷ್ಟಿಕತೆಯು ಮಕ್ಕಳ ಬೆಳವಣಿಗೆಗೆ ಶಾಪವಾಗಿ ಪರಿಣಮಿಸಿದೆ. ಕರೊನಾದಂಥ ಕಠಿಣ ಸಂದರ್ಭದಲ್ಲಿ 20 ವರ್ಷಕ್ಕೂ ಮೇಲ್ಪಟ್ಟವರು ಕೋವಿಡ್​ಗೆ ಬಲಿಯಾಗಿರುವ ನಿದರ್ಶನಗಳಿವೆ. ಮುಂದಿನ ದಿನಗಳಲ್ಲಿ 18 ವರ್ಷದೊಳಗಿನವರಿಗೂ ಕೋವಿಡ್ ಬಾಧೆಯ ತೂಗುಗತ್ತಿ ನೇತಾಡುತ್ತಿದೆ. ವಿಶೇಷವಾಗಿ ಅಪೌಷ್ಟಿಕ ಮಕ್ಕಳತ್ತ ವಿಶೇಷ ಗಮನ ಹರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಲಾಕ್​ಡೌನ್​ನಂಥ ಕಠಿಣ ಸಂದರ್ಭದಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

    2020ರ ಡಿಸೆಂಬರ್​ನಲ್ಲಿ ಜಿಲ್ಲೆಯಲ್ಲಿ 19,000 ಸಾಧಾರಣ ಹಾಗೂ 224 ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿತ್ತು. ಸೆಮಿಲಾಕ್​ಡೌನ್​ನಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಇಂಥ ಮಕ್ಕಳ ಮನೆಮನೆಗೆ ತೆರಳಿ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ವಯಸ್ಸಿಗೆ ಅನುಗುಣವಾಗಿ ಪೋಷಕಾಂಶಯುಕ್ತ ರವೆ ಉಂಡಿ, ಶೇಂಗಾ ಉಂಡಿ, ಬಾಳೆಹಣ್ಣು, ಮೊಟ್ಟೆಗಳನ್ನು ನೀಡಲಾಗುತ್ತಿದೆ. ಪೋಷಕರ ಬದಲು ಅಂಗನವಾಗಿ ಅಮ್ಮಂದಿರೇ ಕೈತುತ್ತು ನೀಡಿ ಉಣಬಡಿಸುತ್ತಿದ್ದಾರೆ.

    ತೀವ್ರ ಅಪೌಷ್ಟಿಕ ಮಕ್ಕಳು 75: ಆರು ವರ್ಷದೊಳಗಿನ ಸಾಮಾನ್ಯ ಮಕ್ಕಳಿಗಿಂತ ತೆಳ್ಳಗೆ ಇರುವ, ಬೆಳವಣಿಗೆ ಕಾಣದ ಮತ್ತು ಪದೇಪದೆ ಆರೋಗ್ಯ ಸಮಸ್ಯೆಗೆ ತುತ್ತಾಗುವ, ಕಡಿಮೆ ತೂಕ, ಕುಬ್ಜತೆ, ಬೆಳವಣಿಗೆಯಲ್ಲಿ ಕುಂಠಿತ, ಕಡಿಮೆ ಆಹಾರ ಸೇವನೆ ಮಾಡುವ, ನಿಷ್ಕ್ರಿಯ ಹಾಗೂ ಆಟ- ಪಾಠಗಳಲ್ಲಿ ಹಿನ್ನಡೆ ಇರುವವರನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಲಾಗುತ್ತದೆ. ಸದ್ಯ ಜಿಲ್ಲೆಯಲ್ಲಿ 6 ವರ್ಷದೊಳಗಿನ ಸಾಧಾರಣ 15,548 ಹಾಗೂ ತೀವ್ರ ಅಪೌಷ್ಟಿಕತೆಯ 75 ಮಕ್ಕಳನ್ನು ಗುರುತಿಸಲಾಗಿದೆ. ಹಿಂದಿನ ಅಂಕಿ- ಅಂಶಗಳನ್ನು ಅವಲೋಕಿಸಿದಾಗ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

    ಕಾರಣಗಳು ಹಲವು: ಗರ್ಭಿಣಿಯರಿದ್ದಾಗ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದಿರುವುದು, ಗರ್ಭಾವಸ್ಥೆಯಲ್ಲಿ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಪಡೆಯದಿರುವುದು, ಪೋಷಕಾಂಶಗಳ ಕೊರತೆ ಇರುವುದು, ಜನಿಸುವ ಮಕ್ಕಳ ಮಧ್ಯೆ ಅಂತರವಿಲ್ಲದಿರುವುದು, ಕೊಳಚೆ ಪ್ರದೇಶದಲ್ಲಿರುವುದು, ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದು, ಬಡತನ ಮುಂತಾದ ಕಾರಣಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತದೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಭಾಗದಲ್ಲೇ ಅಪೌಷ್ಟಿಕ ಮಕ್ಕಳು ಹೆಚ್ಚಾಗಿದ್ದಾರೆ. ನಗರಗಳ ಕೊಳಚೆ ಪ್ರದೇಶ, ತಂದೆ- ತಾಯಿಗೆ ದುಡಿಯುವ ಅನಿವಾರ್ಯತೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವವರು ಇಲ್ಲದಿರುವುದು ಮೊದಲಾದ ಕಾರಣಗಳಿಂದಾಗಿ ಹೀಗಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಸದ್ಯ ಜಿಲ್ಲೆಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮಕ್ಕಳ ಪೋಷಣೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಸ್ವತಃ ಊಟೋಪಚಾರ ಮಾಡುತ್ತಿದ್ದಾರೆ. ಸಾಮಾನ್ಯ ಮಕ್ಕಳಿಗೆ ವಾರಕ್ಕೆ 3 ದಿನ ಮೊಟ್ಟೆ ನೀಡಿದರೆ, ಅಪೌಷ್ಟಿಕ ಮಕ್ಕಳಿಗೆ 6 ಮೊಟ್ಟೆಗಳನ್ನು ನೀಡಲಾಗುತ್ತಿದೆ.

    | ಭಾರತಿ ಶೆಟ್ಟರ್

    ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ

    ನ್ಯೂಟ್ರಿಶನ್ ರಿಹ್ಯಾಬಿಲಿಟೇಶನ್ ಸೆಂಟರ್

    ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ಮನೆಮನೆಗೆ ಭೇಟಿ ನೀಡಿ ಮಕ್ಕಳ ತೂಕ ತಪಾಸಣೆ ಮಾಡಿ ಪತ್ತೆ ಹಚ್ಚುತ್ತಾರೆ. ತೀವ್ರ ಅಪೌಷ್ಟಿಕತೆ ಕಾಣಿಸಿದ್ದರೆ ಎನ್​ಆರ್​ಸಿಗೆ (ನ್ಯೂಟ್ರಿಶನ್ ರಿಹ್ಯಾಬಿಲಿಟೇಶನ್ ಸೆಂಟರ್) ದಾಖಲಿಸಲಾಗುತ್ತದೆ. ಇಲ್ಲಿ ಮಗುವಿನೊಂದಿಗೆ ತಾಯಿಗೂ ಇರಲು ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಹುಬ್ಬಳ್ಳಿಯ ಕಿಮ್್ಸ, ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ನವಲಗುಂದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಎನ್​ಆರ್​ಸಿಗಳಿವೆ. ಲಾಕ್​ಡೌನ್ ಆರಂಭವಾದಾಗಿನಿಂದ ಎನ್​ಆರ್​ಸಿಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾ.ಪಂ. ಸದಸ್ಯರು ಪೋಷಕಾಂಶಯುಕ್ತ ಊಟ, ಮಾತ್ರೆ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts