More

    ಅಪ್ಪೆಮಿಡಿ ಸಂಭ್ರಮ ಲಾಕ್​ಡೌನ್

    ರಮೇಶ ಹಾರ್ಸಿಮನೆ ಸಿದ್ದಾಪುರ

    ಪ್ರತಿವರ್ಷ ಏಪ್ರಿಲ್- ಮೇ ತಿಂಗಳು ಬಂತೆಂದರೆ ಮಲೆನಾಡಿನ ಜಿಲ್ಲೆಗಳಲ್ಲಿ ಘಮ ಘಮಿಸುವ ಉಪ್ಪಿನಕಾಯಿ ಮಿಡಿಗಳ ಸಂಭ್ರಮ ಮನೆ ಮಾಡುತ್ತದೆ. ಆದರೆ, ಈ ಬಾರಿ ಮಿಡಿ ಮಾವು ಇಳುವರಿ ಕಡಿಮೆಯಾಗಿದೆ. ಅಲ್ಲದೆ, ಲಾಕ್​ಡೌನ್ ಕಾರಣ ಮಾರುಕಟ್ಟೆಗೂ ಈ ಉತ್ಪನ್ನ ಬರುತ್ತಿಲ್ಲ. ಹೀಗಾಗಿ, ಮಿಡಿ ಉಪ್ಪಿನಕಾಯಿಗಾಗಿ ಮಿಡಿಯುವವರಿಗೆ ಮಂಕು ಕವಿದಂತಾಗಿದೆ.

    ಮಲೆನಾಡಿನ ಬಹುತೇಕ ಊರಿನ ಹೊಳೆ ಸಾಲಿನಲ್ಲಿ ನೂರಾರು ತಳಿಯ ಅಪ್ಪೆಮರದಲ್ಲಿ ಮಿಡಿಗಳ ಗೊಂಚಲುಗಳು ಈ ಬಾರಿ ಅಪರೂಪ ಎನ್ನುವಂತಾಗಿದೆ. ಹೀಗಾಗಿ, ಫಸಲನ್ನು ಕೊಯ್ದು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುವವರು ಈ ವರ್ಷ ಬರಿಗೈಯಲ್ಲಿ ಕುಳಿತಿದ್ದಾರೆ.

    ಅಪ್ಪೆ ಮಿಡಿ ಎಂದಾಕ್ಷಣ ಎಲ್ಲರೂ ಕೇಳುವುದು ಜೀರಿಗೆ ಮಿಡಿ ಇದೆಯಾ ಎಂದು. ಮಲೆನಾಡಿನ ಸುತ್ತಮುತ್ತ ಜೀರಿಗೆ ಮಿಡಿ, ದಪ್ಪ ಮಿಡಿ, ಅನಂತನ ಭಟ್ಟ, ಗಿಡ್ಡಪ್ಪೆ, ದಂಟ್ಕಲ್ ಅಪ್ಪೆ, ಉರುಟ ಮಿಡಿ, ಕರ್ಪರ ಅಪ್ಪೆ, ಕಂಚಪ್ಪೆ, ಗಿಳಿಸುಂಡಿ ಅಪ್ಪೆ… ಹೀಗೆ ನೂರಾರು ತಳಿಯ ಮಿಡಿಗಳು ಸಿಗುತ್ತವೆ. ಆದರೆ, ಈ ವರ್ಷ ಮಾವು ಇಳುವರಿ ಕುಸಿದಿದೆ. ಅಳಿದುಳಿದ ಫಸಲು ಮಾರಲು ಲಾಕ್​ಡೌನ್ ಬಿಡುತ್ತಿಲ್ಲ. ಹೀಗಾಗಿ, ಮಳೆಗಾಲದ ಪೂರ್ವದಲ್ಲಿ ಮಿಡಿಗಳನ್ನು ಸಂಸ್ಕರಿಸಿ ಸಂಗ್ರಹಿಸಿಡುತ್ತಿದ್ದ ಭರಣಿಗಳೆಲ್ಲ ಖಾಲಿ ಖಾಲಿ ಆಗಿವೆ.

    ಪ್ರತಿವರ್ಷ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ ವಿವಿಧ ತಾಲೂಕುಗಳಿಂದ ಪಟ್ಟಣಕ್ಕೆ ಅಪ್ಪೆ ಮಿಡಿ ತಂದು ಮಾರಾಟ ಮಾಡುತ್ತಿದ್ದರು. ಲಾಕ್​ಡೌನ್​ನಿಂದಾಗಿ ಮಿಡಿ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.

    ಅಪ್ಪೆಮಿಡಿ ಇಲ್ಲದೇ ಈ ವರ್ಷ ದಡ್ಲಿಕಾಯಿ, ಕವಳಿಕಾಯಿ, ಬಿಂಬಲಕಾಯಿ, ನಿಂಬೆಹಣ್ಣುಗಳನ್ನೇ ಉಪ್ಪಿನಕಾಯಿಗೆ ಅವಲಂಬಿಸಬೇಕಾಗಿದೆ. ಅಪ್ಪೆ ಮಿಡಿ ಇದ್ದರೆ ಮಾತ್ರ ಊಟಕ್ಕೆ ಒಂದು ರುಚಿ.
    | ಮಾದೇವಿ ನಾರಾಯಣ ಹೆಗಡೆ
    ಗುಂಜಗೋಡ ಮಾವಿನಸರ

    ಹೂ (ಕಸ್ತ್ರ) ಬಿಡುವ ಸಂದರ್ಭದಲ್ಲಿ ಬಿದ್ದ ಮಳೆಯಿಂದಾಗಿ ಹಾಗೂ ಹವಾಮಾನದ ವೈಪರೀತ್ಯದಿಂದ ಈ ವರ್ಷ ಅಪ್ಪೆ ಮಿಡಿಗಳು ಇಲ್ಲದಂತಾಗಿದೆ. ಇದು ಅಪ್ಪೆಮಿಡಿಗೆ ಮಾತ್ರ ಅಲ್ಲ ಎಲ್ಲ ಬೆಳೆಗಳಿಗೂ ಕಂಟಕವಾಗಿದೆ.
    | ಸುಬ್ರಾಯ ಹೆಗಡೆ ಬಕ್ಕೇಮನೆ
    ಪ್ರಗತಿಪರ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts