More

    ಅಪ್ಪನ ಆರೋಗ್ಯದಲ್ಲಿ ಚೇತರಿಕೆ, ಮಗನಿಗೆ ಸೋಂಕು ದೃಢ

    ಹುಬ್ಬಳ್ಳಿ: ಇಲ್ಲಿನ ಶಾಂತಿನಗರದ ವ್ಯಕ್ತಿಯಲ್ಲಿ (ಪಿ-589) ಕಂಡು ಬಂದಿದ್ದ ಸೋಂಕು ಮಗನಿಗೂ (ಪಿ-1124) ತಗುಲಿರುವುದು 16 ದಿನಗಳ ನಂತರ ಖಚಿತವಾಗಿದ್ದು, ಮತ್ತಷ್ಟು ಆತಂಕ ಮನೆ ಮಾಡಿದೆ. ಸೋಂಕಿನಿಂದ ತಂದೆ ಗುಣಮುಖವಾಗುವ ಹಂತದಲ್ಲಿದ್ದಾಗ 16 ವರ್ಷದ ಮಗನೂ ಕಿಮ್್ಸ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಕ್ವಾರಂಟೈನ್​ನಲ್ಲಿದ್ದ ಬಾಲಕನನ್ನು ಶನಿವಾರ ರಾತ್ರಿಯೇ ಕಿಮ್ಸ್​ನ ಸೂಪರ್ ಸ್ಪೆಷಾಲಿಟಿಗೆ ಕರೆ ತರಲಾಗಿದೆ. ಮಗನನ್ನು ಕ್ವಾರಂಟೈನ್​ನಲ್ಲಿಟ್ಟಿರುವುದು ತಂದೆಗೆ ಗೊತ್ತಿತ್ತು. ಆದರೆ, ಸೋಂಕು ನನ್ನಿಂದ ಮತ್ಯಾರಿಗೂ ಹಬ್ಬದಿರಲಿ ಎಂದುಕೊಂಡಿದ್ದ ತಂದೆಗೆ, ಮಗನಿಗೇ ಪಾಸಿಟಿವ್ ಬಂದಿರುವುದನ್ನು ತಿಳಿದು ಗದ್ಗದಿತರಾದರು. ‘ನನ್ನ ಮಗನಿಗೂ ಸೋಂಕು ಬಂತಾ..?’ ಎಂದು ಬಿಕ್ಕಿ ಬಿಕ್ಕಿ ಅತ್ತಾಗ, ಅಲ್ಲಿದ್ದ ವೈದ್ಯರು, ‘ರೋಗ ಲಕ್ಷಣಗಳಿದ್ದ ನಿಮಗೇ ಹೆಚ್ಚು ಸಮಸ್ಯೆಯಾಗಿಲ್ಲ. ನಿಮ್ಮ ಮಗನಿಗೆ ಏನೂ ರೋಗ ಲಕ್ಷಣವಿಲ್ಲ. ಆದರೂ ಪಾಸಿಟಿವ್ ಕಂಡುಬಂದಿದೆ. ಹೆದರುವ ಅಗತ್ಯವಿಲ್ಲ. ಚಿಕಿತ್ಸೆಯಿಂದ ಗುಣವಾಗುತ್ತದೆ ’ ಎಂದು ಸಮಾಧಾನ ಪಡಿಸಿದ್ದಾರೆ.

    ‘ನನಗೇನೂ ಆಗಲ್ಲ’ ಎಂದು ಮಗನೂ ಸಂದೇಶ ರವಾನಿಸಿದಾಗ ಸೋಂಕಿತ ತಂದೆ ಆತಂಕದಿಂದ ಮುಕ್ತರಾಗಿದ್ದಾರೆ ಎಂದು ತಿಳಿದುಬಂದಿದೆ.

    ಸಮುದಾಯಕ್ಕೆ ವಿಸ್ತರಣೆ?:

    ಸೋಂಕಿತ ವ್ಯಕ್ತಿ (ಪಿ-589) ಹುಬ್ಬಳ್ಳಿ ಬಹುತೇಕ ಕಡೆ ಓಡಾಡಿದ್ದು, ಜನರಿಗೆ ಇನ್ನೂ ಆತಂಕವಿದೆ. ಅಲ್ಲದೆ, ತನಗೆ ಹೇಗೆ ಸೋಂಕು ಬಂದಿದೆ ಎಂಬುದೂ ಗೊತ್ತಾಗಿಲ್ಲ ಎಂದು ತನ್ನ ಟ್ರಾವೆಲ್ ಹಿಸ್ಟರಿಯಲ್ಲಿ ಹೇಳಿಕೊಂಡಿದ್ದಾನೆ. ಹಾಗಾಗಿ ಸೋಂಕು ಸಮುದಾಯ ತಲುಪಿತೇ ? ಎಂಬ ಪ್ರಶ್ನೆ ಹರಿದಾಡುತ್ತಿದೆ.

    ಜಿಲ್ಲೆಯಲ್ಲಿ 461 ಶಂಕಿತರು ಪತ್ತೆ

    ಧಾರವಾಡ: ನಗರದಲ್ಲಿ ಹೊಸ ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ಸಮಯದಲ್ಲೇ ಶಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಾಣುತ್ತಿರುವುದು ಜನರಲ್ಲಿ ಆತಂಕಕಾರಿಯಾಗಿದೆ.

    ಜಿಲ್ಲೆಯಲ್ಲಿ ಶನಿವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 461 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾ ವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶನಿವಾರ ಇದ್ದ (ಒಟ್ಟು) 8725 ನಿಗಾವಹಿಸಿದವರ ಸಂಖ್ಯೆ ಭಾನುವಾರ 9187ಕ್ಕೆ ಏರಿಕೆಯಾಗಿದೆ.

    ಈವರೆಗೆ ಜಿಲ್ಲೆಯಲ್ಲಿ 8,533 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 7321 ಜನರ ವರದಿ ನೆಗೆಟಿವ್ ಬಂದಿವೆ. 26 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 19 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 1,193 ವರದಿಗಳು ಬರಬೇಕಿದೆ. ಶನಿವಾರ ಬಾಕಿ ಇದ್ದ 1,145 ವರದಿಗಳ ಪೈಕಿ 49 ವರದಿಗಳು ನೆಗೆಟಿವ್ ಬಂದಿವೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 9,187 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 4,967 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡ್​ಗಳಲ್ಲಿ 20 ಜನ ದಾಖಲಾಗಿದ್ದಾರೆ. 2,598 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 1,602 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಕಾರು ಕಳುಹಿಸಿ ಕರೊನಾ ಕರೆಸಿಕೊಂಡ ಭಾವ!

    ಹುಬ್ಬಳ್ಳಿ: ಮುಂಬೈನಲ್ಲಿ ಒಬ್ಬಂಟಿಯಾಗಿದ್ದ ಬಾಮೈದನನ್ನು ಕಾರಿನಲ್ಲಿ ಕರೆಸಿಕೊಂಡಿರುವ ಇಲ್ಲಿನ ಹಳೇ ಹುಬ್ಬಳ್ಳಿ ನ್ಯೂ ಅಯೋಧ್ಯನಗರ ಪ್ರದೇಶದ ವ್ಯಕ್ತಿಯೊಬ್ಬನಿಗೆ ಭಾನುವಾರ ಕರೊನಾಘಾತ ಉಂಟಾಗಿದೆ.

    ಕೆಲ ವರ್ಷಗಳ ಹಿಂದೆ ಮುಂಬೈ ಮೂಲದ ಯುವತಿಯನ್ನು ಇಲ್ಲಿನ ಹಳೇ ಹುಬ್ಬಳ್ಳಿಯ ನ್ಯೂ ಅಯೋಧ್ಯನಗರದ ವ್ಯಕ್ತಿಗೆ ವಿವಾಹ ಮಾಡಿಕೊಡಲಾಗಿದೆ. ಆಕೆಯ ಸಹೋದರ ಮುಂಬೈನಲ್ಲೇ ವಾಸವಾಗಿದ್ದಾರೆ. ಆತನ ತಾಯಿ, ಪತ್ನಿ, ಮಕ್ಕಳು ತವರಿಗೆ ತೆರಳಿದ್ದರು. ಹೀಗಾಗಿ ಮುಂಬೈನಲ್ಲಿ ಒಂಟಿಯಾಗಿ ವಾಸವಾಗಿದ್ದ. ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆ ತಾನೂ ಊರಿಗೆ ಹೋಗಲು ಯೋಚಿಸಿದ್ದ. ಅಷ್ಟರಲ್ಲಿ ಹುಬ್ಬಳ್ಳಿಯ ಭಾವ, ‘ಕಾರು ಕಳುಹಿಸಿಕೊಡುತ್ತೇನೆ, ಅದರಲ್ಲಿ ಹುಬ್ಬಳ್ಳಿಗೆ ಬಂದುಬಿಡು’ ಎಂದು 12ರಂದೇ ಕರೆಸಿಕೊಂಡಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

    ಕಾರಿನಲ್ಲಿ ಬಂದಿದ್ದ ಮುಂಬೈ ಮೂಲದ ವ್ಯಕ್ತಿಯ ಗಂಟಲ ದ್ರವ ಪಡೆದಿದ್ದ ಜಿಲ್ಲಾಡಳಿತ, ಛಾಪಾ ಹಾಕಿ ಹೋಂ ಕ್ವಾರಂಟೈನ್​ಗಾಗಿ ಕಳುಹಿಸಿತ್ತು. ಭಾನುವಾರ ಆತನ ವರದಿ ಪಾಸಿಟವ್ ಬಂದಿದೆ. ಇದರಿಂದಾಗಿ, ಇಡೀ ಕುಟುಂಬಕ್ಕೆ ಆಘಾತವಾಗಿದೆ.

    ಸೀಲ್​ಡೌನ್: ಹಳೇ ಹುಬ್ಬಳ್ಳಿಯ ನ್ಯೂ ಅಯೋಧ್ಯ ನಗರದಲ್ಲಿ ಕರೊನಾ ಪೀಡಿತ ಕ್ವಾರಂಟೈನ್​ದಲ್ಲಿದ್ದ ಮನೆಯ ಸುತ್ತಲಿನ 100 ಮೀ. ವ್ಯಾಪ್ತಿಯಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸೀಲ್​ಡೌನ್ ಮಾಡಿದ್ದಾರೆ. ಅಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಜನ ಹೊರಗೆ ಬಾರದಂತೆ ಹದ್ದಿನ ಕಣ್ಣಿಟ್ಟಿದ್ದಾರೆ. ಕರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಕುಟುಂಬದ 8 ಜನರ ಗಂಟಲ ದ್ರವ ಸಂಗ್ರಹಿಸಿರುವ ಜಿಲ್ಲಾಡಳಿತ, ಅವರನ್ನು ಪ್ರತ್ಯೇಕ ಕ್ವಾರಂಟೈನ್ ಮಾಡಿರುವುದಾಗಿ ತಿಳಿದು ಬಂದಿದೆ.

    ಕ್ವಾರಂಟೈನ್​ನಲ್ಲಿ ಸುಪಾರಿ ಕಿಲ್ಲರ್ ಸಲೀಂ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ನೇಕಾರ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ ಧರ್ಮದೇಟು ತಿಂದು, ಕಸಬಾಪೇಟ ಠಾಣೆ ಪೊಲೀಸರ ಅತಿಥಿಯಾಗಿದ್ದ ಸುಪಾರಿ ಕಿಲ್ಲರ್ ಸಲೀಂ ಬಳ್ಳಾರಿಯ ಗಂಟಲ ದ್ರವ ಪಡೆದು ಹೋಟೆಲ್ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಸಲೀಂ ವಿರುದ್ಧ ಬೆಂಡಿಗೇರಿ, ಘಂಟಿಕೇರಿ, ವಿದ್ಯಾನಗರ, ಹುಬ್ಬಳ್ಳಿ ಗ್ರಾಮೀಣ, ಕಲಬುರಗಿ ಸೇರಿ ರಾಜ್ಯದ ವಿವಿಧೆಡೆ ಸುಲಿಗೆ, ದರೋಡೆ, ಮನೆ ಕಳವು, ಕೊಲೆ ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ತನಿಖೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts