More

    ಅಪೌಷ್ಟಿಕ ಮಕ್ಕಳ ಮೇಲೆ ನಿಗಾ ವಹಿಸಿ

    ಗದಗ: ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವ ಸಂಭವವಿದ್ದು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಹೇಳಿದರು.
    ನಗರದ ಜಿಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡಲೆ ಕಾರ್ಯಪ್ರವೃತ್ತವಾಗಬೇಕು. ಜಿಲ್ಲೆಯಲ್ಲಿನ ಮಕ್ಕಳ ಸಮೀಕ್ಷೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದರು.
    ಈಗಾಗಲೇ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ವಿಶೇಷವಾಗಿ ತೆರೆಯಲಾದ ಅಪೌಷ್ಟಿಕ ಸುಧಾರಣೆ ಶಿಬಿರಗಳಿಗೆ ದಾಖಲಾಗುವ ಸಂದರ್ಭದಲ್ಲಿನ ಮಕ್ಕಳ ತೂಕ ಹಾಗೂ 14 ದಿನಗಳ ಚಿಕಿತ್ಸೆ ನಂತರದ ತೂಕವನ್ನು ದಾಖಲಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
    ಈ ಶಿಬಿರಗಳಲ್ಲಿ ದಾಖಲಾಗುವ ಮಕ್ಕಳಿಗೆ ಇನ್​ಫ್ಲೂಯೆಂಜಾ ಲಸಿಕೆ ನೀಡುವುದರ ಜತೆಗೆ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒದಗಿಸಬೇಕು. ಪೋಷಕರೊಂದಿಗೆ 14 ದಿನಗಳ ಚಿಕಿತ್ಸೆಗೆ ದಾಖಲಾಗುವ ಮಕ್ಕಳಿಗೆ ಸುಧಾರಣೆ ಕೇಂದ್ರಗಳಲ್ಲಿ ಯಾವುದೇ ರೀತಿಯ ಅನಾನುಕೂಲವಾಗದಂತೆ ನಿಗಾ ವಹಿಸಬೇಕು. ಸುಧಾರಣೆ ಕೇಂದ್ರಗಳಿಗೆ ನಿಯಮಿತವಾಗಿ ಮಕ್ಕಳ ತಜ್ಞರು ಭೇಟಿ ನೀಡಿ ಚಿಕಿತ್ಸೆ ಒದಗಿಸಬೇಕು. ಈ ಕೇಂದ್ರಕ್ಕೆ ದಾಖಲಾಗುವ ಮಕ್ಕಳ ಪಾಲಕರಿಗೆ ಕೋವಿಡ್ ಲಸಿಕೆ ನೀಡಬೇಕು ಎಂದು ನಿರ್ದೇಶಿಸಿದರು.
    ಚಿಕಿತ್ಸೆ ನಂತರ ಮನೆಗೆ ತೆರಳುವ ಮಕ್ಕಳಿಗೆ ನಿಯಮಿತವಾಗಿ ಅಗತ್ಯದ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒದಗಿಸಬೇಕು. ಅಂಗನವಾಡಿ ಕೇಂದ್ರಗಳಿಂದ ಪೂರೈಸಲಾಗುವ ಆಹಾರ ಸಾಮಗ್ರಿಗಳನ್ನು ನಿಗದಿತ ಸಮಯದಲ್ಲಿ ಎಲ್ಲ ಮಕ್ಕಳಿಗೆ ಪೂರೈಸಬೇಕು ಎಂದು ಹೇಳಿದರು.
    ಈಗಾಗಲೇ ಕಾಲೇಜ್​ಗಳು ಆರಂಭವಾಗಿದ್ದು, ಜಿಲ್ಲೆಯಲ್ಲಿನ ಎಲ್ಲ ಕಾಲೇಜ್ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು. ಜು. 15ರೊಳಗೆ ಎಲ್ಲ ಕಾಲೇಜ್ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಬೇಕು ಎಂದರು.
    ಕೋವಿಡ್​ನಿಂದಾಗಿ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯನಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಧನ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರ್ಯದಲ್ಲಿ ಆರೋಗ್ಯ ಇಲಾಖೆ ಪಾತ್ರ ಮಹತ್ವದಾಗಿದ್ದು ಪರಿಹಾರ ಧನ ಪಾವತಿಸಲು ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ವಯ ಜಿಲ್ಲಾ ಆರೋಗ್ಯಾಧಿಕಾರಿಗಳು ದೃಢೀಕರಿಸಿ ವರದಿ ನೀಡಬೇಕು ಎಂದರು.
    ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಎಚ್​ಒ ಡಾ. ಸತೀಶ ಬಸರೀಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ತಾಪಂ ಇಒಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
    ಮನೆಗಳ ಪಟ್ಟಿ ತಯಾರಿಸಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಅಧಿಕ ಮಳೆ ಆಗುತ್ತಿದ್ದು ಇದರಿಂದಾಗಿ ಮನೆಗಳು ಹಾನಿಗೊಳಗಾಗುತ್ತಿವೆ. ತಾಪಂ ಇಒ, ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಹಾನಿಗೊಳಗಾದ ಮನೆಗಳ ಪಟ್ಟಿ ತಯಾರಿಸಿಟ್ಟುಕೊಳ್ಳಬೇಕು. ಅಧಿಕ ಮಳೆಯಿಂದಾಗಿ ಪ್ರವಾಹ ಉಂಟಾದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕಾಳಜಿ ಕೇಂದ್ರಗಳನ್ನು ಗುರುತಿಸಬೇಕು ಹಾಗೂ ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts