More

    ಅಪೌಷ್ಟಿಕ ಮಕ್ಕಳಿಗೆ ಪುಷ್ಟಿ ಕಿಟ್

    ಗದಗ: ಕರೊನಾ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ತಜ್ಞರು ವರದಿ ನೀಡಿ ಎಚ್ಚರಿಸಿದ್ದಾರೆ. ಹೀಗಾಗಿ, ವಿಶೇಷವಾಗಿ ಅಪೌಷ್ಟಿಕ ಮಕ್ಕಳತ್ತ ವಿಶೇಷ ಗಮನ ಹರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ. ಗ್ರಾಮೀಣ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

    ಸದ್ಯ ಜಿಲ್ಲೆಯಲ್ಲಿ 6 ವರ್ಷದೊಳಗಿನ ಮಕ್ಕಳಲ್ಲಿ 12, 000 ಮಕ್ಕಳು ಸಾಧಾ ರಣ ಅಪೌಷ್ಟಿ ಕತೆ ಹೊಂದಿರು ವುದಾಗಿ ಹಾಗೂ 243 ಮಕ್ಕಳು ತೀವ್ರ ಅಪೌಷ್ಟಿಕತೆ ಹೊಂದಿದ್ದಾಗಿ ಗುರುತಿಸಲಾಗಿದೆ.

    ಅಂಗನವಾಡಿ ಕಾರ್ಯಕರ್ತೆಯರು ಇಂತಹ ಮಕ್ಕಳ ಮನೆಮನೆಗೆ ತೆರಳಿ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಅಪೌಷ್ಟಿಕ ಮಕ್ಕಳ ವಯಸ್ಸಿಗೆ ಅನು ಗುಣವಾಗಿ ಪೋಷಕಾಂಶಯುಕ್ತ ‘ಪುಷ್ಟಿ’ ಕಿಟ್ (ರೆಡಿ ಮೇಡ್ ಪಾಕೆಟ್) ನೀಡಲಾಗುತ್ತಿದೆ. ಈ ಕಿಟ್​ನಲ್ಲಿ ಹೆಸರು, ಪುಟಾಣಿ, ಸೋಯಾಬಿನ್, ಬೆಲ್ಲ, ಚಿಕ್ಕಿ, ಸಕ್ಕರೆ, ಮೊಟ್ಟೆ ಹಾಗೂ ಇತರೆ ಪೌಷ್ಟಿಕಾಂಶಯುಕ್ತ ಸಾಮಗ್ರಿ ನೀಡಲಾಗುತ್ತಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ 51, ಮುಂಡರಗಿ 26, ಗದಗ 68, ರೋಣ 51, ನರಗುಂದದಲ್ಲಿ 47 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

    ಆರು ವರ್ಷದೊಳಗಿನ ಸಾಮಾನ್ಯ ಮಕ್ಕಳಿಗಿಂತ ತೆಳ್ಳಗೆ ಇರುವ, ಬೆಳವಣಿಗೆ ಕಾಣದ ಮತ್ತು ಪದೇಪದೆ ಆರೋಗ್ಯ ಸಮಸ್ಯೆ, ಕಡಿಮೆ ತೂಕ, ಬೆಳವಣಿಗೆಯಲ್ಲಿ ಕುಂಠಿತ, ನಿಷ್ಕ್ರಿಯತೆ ಹಾಗೂ ಆಟ- ಪಾಠಗಳಲ್ಲಿ ಹಿನ್ನಡೆ ಇರುವವರನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಲಾಗುತ್ತದೆ.

    ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯುಳ್ಳ 243 ಮಕ್ಕಳನ್ನು ಗುರುತಿಸಲಾಗಿದೆ. ಸದ್ಯ ಎಲ್ಲರೂ ಅವರವರ ಮನೆಯಲ್ಲಿದ್ದಾರೆ. ಅವರಿಗೆ ಇಲಾಖೆಯಿಂದ ‘ಪುಷ್ಟಿ ಕಿಟ್’ ನೀಡಲಾಗುತ್ತಿದೆ. ಕರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಮಂಗಳವಾರದಿಂದ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಆರಂಭಿಸಲಾಗಿದ್ದು, ಮೂರು ದಿನಗಳ ಕಾಲ ತಪಾಸಣೆ ಕಾರ್ಯದ ನಂತರ ಇದರಲ್ಲಿ ಯಾವ ಮಕ್ಕಳಿಗೆ ಹೆಚ್ಚಿನ ಅಗತ್ಯವಿದೆ ಎಂಬುದು ಗೊತ್ತಾಗಲಿದೆ. ಚಿಕಿತ್ಸೆ ಮತ್ತು ಆರೈಕೆ ಬೇಕಿರುವ ಮಕ್ಕಳನ್ನು ಎನ್​ಆರ್​ಸಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಇಲ್ಲಿವರೆಗೆ ಕರೊನಾ ಸೋಂಕಿನಿಂದ ಅಪೌಷ್ಟಿಕತೆವುಳ್ಳ ಯಾವ ಮಗುವೂ ಮೃತಪಟ್ಟಿಲ್ಲ.

    | ಉಸ್ಮಾನ್ ಎ.

    ಉಪ ನಿರ್ದೇಶಕ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಗದಗ

    ಹತ್ತು ಹಲವು ಕಾರಣ

    ಗರ್ಭಿಣಿಯರಿದ್ದಾಗ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸ ದಿರುವುದು, ಗರ್ಭಾವಸ್ಥೆಯಲ್ಲಿ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಪಡೆಯದಿರುವುದು, ಪೋಷಕಾಂಶಗಳ ಕೊರತೆ, ಜನಿಸುವ ಮಕ್ಕಳ ಮಧ್ಯೆ ಸೂಕ್ತ ಅಂತರವಿಲ್ಲದಿರುವುದು, ಕೊಳಚೆ ಪ್ರದೇಶದ ಮಕ್ಕಳು, ಮಕ್ಕಳ ಆರೋಗ್ಯದ ಬಗ್ಗೆ ನಿಷ್ಕಾಳಜಿ, ಬಡತನ ಮುಂತಾದ ಕಾರಣಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತದೆ. ಆನುವಂಶಿಯತೆ, ವಿವಿಧ ಸೋಂಕುಗಳಿಗೆ ತುತ್ತಾಗಿರುವುದು, ಅವಧಿಗೂ ಮೊದಲೇ ಜನನ, ಬೆಳವಣಿಗೆ ಸಮಸ್ಯೆ, ವಿಕಲತೆ, ಪಾಲಕರ ನಿರ್ಲಕ್ಷ್ಯತನ ಮೊದಲಾದವು ಅಪೌಷ್ಟಿಕತೆಗೆ ಪ್ರಮುಖ ಕಾರಣಗಳಾಗಿವೆ.

    ಎನ್​ಆರ್​ಸಿಗೆ ದಾಖಲು

    ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳು ಮನೆಮನೆಗೆ ಭೇಟಿ ನೀಡಿ ಮಕ್ಕಳ ತೂಕ ತಪಾಸಣೆ ಮಾಡಿ ಪತ್ತೆ ಹಚ್ಚುತ್ತಾರೆ. ತೀವ್ರ ಅಪೌಷ್ಟಿಕತೆ ಕಾಣಿಸಿದ್ದರೆ ಎನ್​ಆರ್​ಸಿಗೆ (ನ್ಯೂಟ್ರಿಶನ್ ರಿಹ್ಯಾಬಿಲಿಟೇಶನ್ ಸೆಂಟರ್) ದಾಖಲಿಸಲಾಗುತ್ತದೆ. ಇಲ್ಲಿ ಮಗುವಿನೊಂದಿಗೆ ತಾಯಿಗೂ ಇರಲು ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಗದಗ ಹೆರಿಗೆ ಆಸ್ಪತ್ರೆ, ನರಗುಂದ, ರೋಣ ತಾಲೂಕು ಆರೋಗ್ಯ ಕೇಂದ್ರದಲ್ಲಿ ಎನ್​ಆರ್​ಸಿಗಳಿವೆ. ಪ್ರತಿ ಎನ್​ಆರ್​ಸಿಗಳಲ್ಲಿ ಅಪೌಷ್ಟಿಕ ಮಕ್ಕಳ ಚಿಕಿತ್ಸೆ ಮತ್ತು ಆರೈಕೆಗಾಗಿ 10 ಬೆಡ್​ಗಳನ್ನು ಪ್ರತ್ಯೇಕಿಸಲಾಗಿದೆ.

    2402 ಮಕ್ಕಳಿಗೆ ಕರೊನಾ ಸೋಂಕು

    ಜಿಲ್ಲೆಯಲ್ಲಿ 2402 ಮಕ್ಕಳಿಗೆ ಕರೊನಾ ಸೋಂಕಿಗೆ ಬಾಧಿತರಾಗಿ ದ್ದಾರೆ. ಸದ್ಯ 40 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣವಾಗಿದ್ದಾರೆ. 2020ರಲ್ಲಿ 18 ವರ್ಷದೊಳಗಿನ ಮಕ್ಕಳಲ್ಲಿ ಶೇ. 3.4 ರಷ್ಟಿದ್ದ ಸೋಂಕಿನ ಪ್ರಮಾಣವು 2021ರಲ್ಲಿ ಶೇ. 2.9 ರಷ್ಟಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಬೆಡ್ ಮಕ್ಕಳ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಕೋವಿಡ್ ಸೋಂಕಿನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಂಭವವಿದೆ. ಜಿಲ್ಲೆಯ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಿಶೇಷ ಕಾಳಜಿಗೆ ಒತ್ತು ನೀಡಲಾಗಿದೆ. ಮಕ್ಕಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು.

    | ಸಿ.ಸಿ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts