More

    ಅಪಾಯ ಆಹ್ವಾನಿಸುವ ಮ್ಯಾನ್‌ಹೋಲ್‌ಗಳು

    ಕೆ.ಆರ್.ನಗರ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಲಾಗಿರುವ ಮ್ಯಾನ್‌ಹೋಲ್‌ಗಳು ಕಳಪೆ ಕಾಮಗಾರಿಯಿಂದಾಗಿ ಪದೇ ಪದೆ ಕುಸಿದು ಬೀಳುತ್ತಿದ್ದು ರಕ್ಕಸನಂತೆ ಅನಾಹುತಕ್ಕೆ ಬಾಯ್ತೆರೆದು ಕಾದು ಕುಳಿತಿರುವುದು ಒಂದೆಡೆಯಾದರೆ, ಅದರಿಂದ ಹೊರಬರುತ್ತಿರುವ ದುರ್ನಾತದಿಂದ ಅಕ್ಕಪಕ್ಕ ನಿವಾಸಿಗಳು ಮತ್ತು ಪಾದಚಾರಿಗಳಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.

    ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ 6 ವರ್ಷಗಳ ಹಿಂದೆ 14.50 ಕೋಟಿ ರೂ. ವೆಚ್ಚದಲ್ಲಿ 1, 2, 3, 12, 17, 22 ಮತ್ತು 23ನೇ ವಾರ್ಡ್‌ಗಳಿಗೆ ಎರಡನೇ ಹಂತದ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿದೆ. ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾದ ಒಳಚರಂಡಿಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರದೆ ಕಳಪೆಯಾಗಿದೆ ಎಂಬುದಕ್ಕೆ ಆಗಾಗ ಅಲ್ಲಲ್ಲೇ ಕುಸಿದು ಬೀಳುತ್ತಿರುವ ಮ್ಯಾನ್‌ಹೋಲ್‌ಗಳೇ ಉದಾಹರಣೆಯಾಗಿವೆ.

    ಮುಸ್ಲಿಂ ಬಡಾವಣೆಯ ಜಾಮಿಯ ಮಸೀದಿ ರಸ್ತೆಯ ಕರ್ನಾಟಕ ಬೇಕರಿ ಮುಂಭಾಗ, ಆದಿಶಕ್ತಿ ಬಡಾವಣೆಯ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹಾಗೂ 2ನೇ ವಾರ್ಡಿನಿಂದ ಪಿಎಲ್‌ಡಿ ಬ್ಯಾಂಕ್ ಕಡೆಗೆ ಹೋಗುವ ರಸ್ತೆಯಲ್ಲಿ ತೇವಬಾವಿ ಸಮೀಪ ನಿರ್ಮಾಣ ಮಾಡಲಾಗಿರುವ ಒಳಚರಂಡಿ ರಸ್ತೆ ಮಧ್ಯದಲ್ಲಿಯೇ ಇರುವ ಮ್ಯಾನ್‌ಹೋಲ್ ಕುಸಿದು ಬಿದ್ದಿದ್ದು ಮಲಿನ ನೀರು ರಸ್ತೆಗೆ ಹರಿಯುತ್ತಿದೆ. ತಿಂಗಳುಗಳೇ ಕಳೆದರೂ ಪುರಸಭೆ ಸರಿಪಡಿಸಲು ಮುಂದಾಗದೇ ಇರುವುದರಿಂದ ವಾಹನ ಸವರಾರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿಡಿದು ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ರಸ್ತೆಗಳಲ್ಲಿ ದಿನನಿತ್ಯ ಸಾವಿರಾರು ವಾಹನಗಳು, ಪಾದಚಾರಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಅಲ್ಲದೆ, ಹೊಸದಾಗಿ ಅಳವಡಿಸಲಾದ ಒಳಚರಂಡಿಯ ಮ್ಯಾನ್‌ಹೋಲ್‌ಗಳು ಸ್ಥಳಾವಕಾಶದ ಕೊರತೆಯಿಂದಲೋ ಅಥವಾ ಅವೈಜ್ಞಾನಿಕ ರೂಪು-ರೇಷೆಗಳಿಂದಲೋ ರಸ್ತೆ ಮಧ್ಯದಲ್ಲೇ ನಿರ್ಮಾಣವಾಗಿರುವುದಲ್ಲದೆ, ರಸ್ತೆಗಳಿಗಿಂತ ಅರ್ಧ ಅಡಿ ಎತ್ತರವಾಗಿವೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಮತ್ತು ಸಣ್ಣಪುಟ್ಟ ವಾಹನಗಳು ಎತ್ತರವಾಗಿರುವ ಮ್ಯಾನ್‌ಹೋಲ್‌ಗಳನ್ನು ತಪ್ಪಿಸಿ ಸಂಚರಿಸುವುದು ದುಸ್ತರವಾಗಿದೆ.

    ಜತೆಗೆ, ರಸ್ತೆಗಳು ಕಿರಿದಾಗಿದ್ದು ಏಕಕಾಲದಲ್ಲಿ ಎರಡು ವಾಹನಗಳು ಸಂಚರಿಸುವುದು ಕಷ್ಟಸಾಧ್ಯವಾಗಿದೆ. ಭಾರಿ ವಾಹನಗಳು ವಿಧಿ ಇಲ್ಲದೆ ಮ್ಯಾನ್‌ಹೋಲ್ ಮೇಲೆ ಸಂಚರಿಸಿದರೆ ಪಾದಚಾರಿಗಳು ಸಂಚರಿಸಲು ಫುಟ್‌ಪಾತ್ ಇಲ್ಲದೆ ರಸ್ತೆ ಮಧ್ಯದಲ್ಲೇ ಸಂಚರಿಸಬೇಕಾಗಿದ್ದು ದಿನನಿತ್ಯ ವಾಹನ-ವಾಹನಗಳ ನಡುವೆ, ವಾಹನ-ಪಾದಚಾರಿಗಳ ನಡುವೆ ಅಪಘಾತಗಳು ಸಂಭವಿಸುತ್ತಿವೆ.

    ಇಷ್ಟೆಲ್ಲ ಅವಾಂತರಗಳು ನಡೆದು ಮ್ಯಾನ್‌ಹೋಲ್ ಮುಚ್ಚಳ ನಿರ್ಮಾಣವಾದಾಗಿನಿಂದ ಈ ಭಾಗದಲ್ಲೇ ಅನೇಕ ಬಾರಿ ಕುಸಿಯುತ್ತಿದ್ದು, ತಿಂಗಳುಗಟ್ಟಲೇ ಇವೆಯಲ್ಲದೆ ಸರಿಪಡಿಸುವಾಗ ಮತ್ತೊಮ್ಮೆ ಕುಸಿಯದಂತೆ ಗುಣಮಟ್ಟದಿಂದ ನಿರ್ಮಿಸದೆ ಪದೇ ಪದೆ ಕುಸಿದು ಬೀಳುವ ಮ್ಯಾನ್‌ಹೋಲ್ ಮುಚ್ಚಳ ಸಮಸ್ಯೆ ಮತ್ತು ಅಪಘಾತಗಳಿಂದ ಸ್ಥಳಿಯರಿಗೆ ಕಿರಿಕಿರಿ ಜತೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಆಕ್ರೋಶಗೊಳ್ಳುವಂತೆ ಮಾಡುತ್ತಿದೆ.

    ಇನ್ನಾದರೂ ಈ ಒಳಚರಂಡಿ ಗುಂಡಿಯ ಮುಚ್ಚಳವನ್ನು ಗುಣಮಟ್ಟದಿಂದ ನಿರ್ಮಿಸಿ ಸರ್ಕಾರದ ಹಣ ದುಂದುವೆಚ್ಚವಾಗದಂತೆ ಮತ್ತು ಸಾರ್ವಜನಿರಿಗೆ ಹಾಗೂ ಸ್ಥಳೀಯರಿಗೆ ಆಗುತ್ತಿರುವ ಕಿರಿಕಿರಿ, ಪರದಾಟ ಹಾಗೂ ಅಪಘಾತಗಳಿಗೆ ಮುಕ್ತಿ ಆಡಲಿ ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

    ಹಿಂದೆ ಒಳಚರಂಡಿ ನಿರ್ಮಾಣ ಸಂದರ್ಭದಲ್ಲಿ ಮ್ಯಾನ್‌ಹೋಲ್‌ಗಳ ನಿರ್ಮಾಣ ಸಮಯದಲ್ಲಿ ಕಳಪೆಯಾಗಿರುವುದರಿಂದ ಪದೇ ಪದೆ ಮುಚ್ಚಳಗಳು ಕುಸಿದು ಬೀಳುತ್ತಿದ್ದು ಈಗಾಗಲೇ ಚೀರ‌್ನಹಳ್ಳಿ ರಸ್ತೆ, ಮಧುವನಹಳ್ಳಿ ರಸ್ತೆ ಸೇರಿದಂತೆ ಹಲವು ಕಡೆ ಮ್ಯಾನ್ ಹೋಲ್‌ಗಳನ್ನು ಸರಿಪಡಿಸಲಾಗಿದ್ದು ಸಮಸ್ಯೆ ಕಂಡ ತಕ್ಷಣ ಸಾರ್ವಜನಿಕರು ನಮ್ಮ ಗಮನಕ್ಕೆ ತನ್ನಿ. ಶೀಘ್ರವೇ ಸಮಸ್ಯೆ ಪರಿಹರಿಸುತ್ತೇವೆ.
    > ಡಾ.ಜಯಣ್ಣ, ಪುರಸಭಾ ಮುಖ್ಯಾಧಿಕಾರಿ, ಕೆ.ಆರ್.ನಗರ

    ಪಟ್ಟಣದ ಕೆಲವೆಡೆ ಒಳಚರಂಡಿ ನಿರ್ಮಾಣವಾದಗಿನಿಂದ ಪದೇ ಪದೆ ಮ್ಯಾನ್‌ಹೋಲ್‌ಗಳು ಕುಸಿದು ಬೀಳುತ್ತಿವೆ. ಅಲ್ಲದೆ ಸರಿ ಪಡಿಸಿದ ಎರಡ್ಮೂರು ದಿನಕ್ಕೆ ಕುಸಿಯುತ್ತಿವೆ. ಇಲ್ಲಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ದೂರು ಹೇಳಿದರೂ ಶೀಘ್ರವಾಗಿ ಸರಿಪಡಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ಹೆಚ್ಚಿನ ಅನಾಹುತಗಳು ಆಗುವುದನ್ನು ತಪ್ಪಿಸಲಿ.
    > ಚಂದ್ರಶೇಖರ್, ಅಧ್ಯಕ್ಷ, ಅಖಿಲ ಭಾರತ ಜೈ ಭೀಮ್ ಸಂಘಟನೆ ತಾಲೂಕು ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts