More

    ಅಪಾಯಕಾರಿಯಾಗಿದೆ ರಸ್ತೆ ಕಾಮಗಾರಿ

    ಕುಮಟಾ: ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಸಂಚಾರಕ್ಕೆ ಅನುಕೂಲ ಆಗಬೇಕು. ಆದರೆ, ಇಲ್ಲಿ ಮಾತ್ರ ಇದ್ದ ರಸ್ತೆ ಹದಗೆಟ್ಟಿದೆ. ಅಲ್ಲದೆ, ಹಲವು ವಾಹನ ಅಪಘಾತಗಳಿಗೂ ಕಾರಣವಾಗಿದೆ!

    ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಮೂರೂರು ರಸ್ತೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯ ದುಸ್ಥಿತಿ ಇದು.

    ಅಂದಾಜು 7.81 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರೂರು ಕ್ರಾಸ್​ನಿಂದ ಮೂರೂರಿನ ಜೋಗಿಮನೆಕೇರಿ ಬಳಿಯ ದಡ್ನಭಟ್ ಸೇತುವೆವರೆಗೆ 7.10 ಕಿಮೀ ಉದ್ದದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆಯಂತೆ ರಸ್ತೆಯನ್ನು ಮೂರೂರು ಕ್ರಾಸ್​ನಿಂದ ಹವ್ಯಕ ಸಭಾಭವನದವರೆಗೆ 8 ಮೀಟರ್ ಹಾಗೂ ಮುಂದೆ 5.5 ಮೀಟರ್ ವಿಸ್ತರಣೆ ಮಾಡಬೇಕು.

    ಕಾಮಗಾರಿಯನ್ನು ಭೂಮಿ ಪೂಜೆಗೆ ಮೊದಲೇ ಕೆಲಸ ಆರಂಭಿಸಿ ಆರಂಭ ಶೂರತ್ವ ಪ್ರದರ್ಶಿಸಿದ ಗುತ್ತಿಗೆದಾರರಾದ ಭಟ್ಕಳದ ಪಿಬಿಐ ಕನ್​ಸ್ಟ್ರ್ಷನ್ ಕಂಪನಿಯವರು ಇದ್ದ ರಸ್ತೆಯನ್ನು ಅಗೆದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

    ಮೂರೂರು ಗುಡ್ಡದ ಮೇಲೆ ಕಾಗಾಲ ಮಾನೀರವರೆಗೆ ರಸ್ತೆಯ ಒಂದು ಅಂಚನ್ನು ಅಗೆದು ಕಾಲುವೆಯಂತೆ ತಗ್ಗು ಮಾಡಿಟ್ಟು ಕೆಲಸ ಸ್ಥಗಿತಗೊಳಿಸಿದ್ದಾರೆ. ಅಂಚು ಕತ್ತರಿಸಿದ ಕಡೆಗೆ ಯಾವುದೇ ಸಿಗ್ನಲ್ ಇಲ್ಲ. ಸುರಕ್ಷಾ ತಡೆಯಿಲ್ಲ. ಹೀಗಾಗಿ, ತಿರುವುಗಳಲ್ಲಿ ಎದುರಿನಿಂದ ದೊಡ್ಡ ವಾಹನಗಳು ಬಂದ ಸಂದರ್ಭದಲ್ಲಿ ರಸ್ತೆಯ ಅಂಚಿಗೆ ಗಡಿಬಿಡಿಯಲ್ಲಿ ಸಾಗಿ ಅಪಘಾತಗಳು ಉಂಟಾಗುತ್ತಿವೆ.

    ಅರೆಬರೆ ಕಾಮಗಾರಿ ಮಾಡಿದ್ದಾರೆ. ಇದ್ದ ರಸ್ತೆ ಅಗೆದು ಅಪಾಯಕಾರಿಯಾಗುವಂತೆ ಮಾಡಿದ್ದಾರೆ. ಈಗ ಎರಡು ತಿಂಗಳಾದರೂ ಕೆಲಸ ಮುಂದುವರಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಸ್ತೆ ಅಗೆದ ಕಾರಣದಿಂದಾಗಿ ದ್ವಿಚಕ್ರ ವಾಹನಗಳು ಬಿದ್ದು ಗಾಯ ಮಾಡಿಕೊಂಡ 20ಕ್ಕೂ ಹೆಚ್ಚು ಪ್ರಕರಣಗಳು ಘಟಿಸಿವೆ. ಮೂರೂರು ಗುಡ್ಡದ ಮೇಲೆ ರಾತ್ರಿ ಸಮಯದಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ರಾಜ್ಯ ಹೆದ್ದಾರಿ ವಿಭಾಗ ಹಾಗೂ ಗುತ್ತಿಗೆ ಕಂಪನಿಯ ನಿರ್ಲಕ್ಷ್ಯ್ಕೆ ಸಾರ್ವಜನಿಕರು ಬೆಲೆ ತೆರಬೇಕಾಗಿದೆ. ಕೂಡಲೇ ರಸ್ತೆ ಕೆಲಸ ಆರಂಭಿಸಬೇಕು ಇಲ್ಲವೇ ರಸ್ತೆಯ ಅಂಚಿನ ತಗ್ಗನ್ನಾದರೂ ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಎರಡು ತಿಂಗಳಿಂದ ಮೂರೂರು ರಸ್ತೆ ಕಾಮಗಾರಿ ಮಾಡದೇ ನಿಲ್ಲಿಸಿರುವ ಕಾರಣ ಏನು? ರಸ್ತೆಯ ಅಂಚಿಗೆ ಬಿದ್ದು ಎಷ್ಟೋ ಜನ ಪೆಟ್ಟು ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಹೊಣೆ ಯಾರು? ಬೇಜವಾಬ್ದಾರಿತನ ಬಿಟ್ಟು ಸಂಬಂಧಪಟ್ಟ ಇಲಾಖೆ ಕೂಡಲೇ ರಸ್ತೆ ಕೆಲಸ ಮಾಡಿಸದಿದ್ದರೆ ಮೂರೂರು ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ. | ಬಾಲಕೃಷ್ಣ ನಾಯ್ಕ ತಾಪಂ ಸದಸ್ಯರು, ಮೂರೂರು

    ಮೂರೂರು ರಸ್ತೆ ಕಾಮಗಾರಿ ನಡೆಸದೇ ಇರುವ ಬಗ್ಗೆ ಗುತ್ತಿಗೆದಾರ ಮೊಹಮ್ಮದ್ ಶಾಹೀನ್ ಅವರಿಗೆ ನೋಟೀಸ್ ನೀಡಿದ್ದೇವೆ. ಮಾ. 16ಕ್ಕೆ ಕೆಲಸ ಶುರು ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿಗೂ ಕಾಮಗಾರಿ ಶುರು ಮಾಡದಿದ್ದರೆ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡುತ್ತೇವೆ.| ರಾಜು ಶಾನಭಾಗ ಪಿಡಬ್ಲ್ಯುಡಿ ಇಂಜಿನಿಯರ್ ಕುಮಟಾ

    ಮುಕ್ತಾಯಕ್ಕೆ ಆಗಸ್ಟ್ ಕಾಲಮಿತಿ: 2019ರ ಸೆಪ್ಟೆಂಬರ್ 20ರಿಂದ 2020ರ ಆಗಸ್ಟ್ 10ರ ಅವಧಿಯಲ್ಲಿ ಕಾಮಗಾರಿ ಮುಗಿಸಲು ಟೆಂಡರ್​ನಲ್ಲಿ ಷರತ್ತು ವಿಧಿಸಲಾಗಿದೆ. ಆದರೆ, ಇದುವರೆಗೂ ಶೇ. 10ರಷ್ಟು ಕಾಮಗಾರಿ ಕೂಡ ಆಗಿಲ್ಲ. ಹೀಗಾಗಿ, ಕಾಲಮಿತಿಯೊಳಗೆ ಕಾಮಗಾರಿ ಮುಗಿಯುವ ಸಾಧ್ಯತೆಗಳು ಕಡಿಮೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts