More

    ಅಪಪ್ರಚಾರ ಮಾಡಿದ್ದವರಿಗೆ ಜನತೆ ತಕ್ಕ ಉತ್ತರ

    ಪಾಂಡವಪುರ: ಕಳೆದ 2018ರ ಚುನಾವಣೆಯಲ್ಲಿ ಅಪಪ್ರಚಾರ ಮಾಡಿ ಗೆಲುವು ಸಾಧಿಸಿದವರಿಗೆ ಈ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ರೈತ ಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
    ಮೇಲುಕೋಟೆ ಕ್ಷೇತ್ರದ ದುದ್ದ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿರುಸಿನ ಮತಪ್ರಚಾರ ನಡೆಸಿ ಮಾತನಾಡಿದರು. ನಾನು ಕ್ಷೇತ್ರದಲ್ಲಿ ಇರುವುದಿಲ್ಲವೆಂದು ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿ ಗೆಲುವು ಸಾಧಿಸಿದ್ದರು. ಅವರ ಅಪಪ್ರಚಾರಕ್ಕೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ. ವಿರೋಧಿಗಳ ತಂತ್ರಗಾರಿಕೆಗೆ ನಾವು ಪ್ರತಿತಂತ್ರ ಎಣಿಯುತ್ತಿದ್ದೇವೆ. ಕ್ಷೇತ್ರದಲ್ಲಿನ ದಬ್ಬಾಳಿಕೆ, ಬೆದರಿಕೆಗೆ ಜನ ಭಯಪಡುವ ಅಗತ್ಯವಿಲ್ಲ. ತಂತ್ರಗಾರಿಕೆ ಭಾಗವಾಗಿ ಎದುರಾಳಿಗಳು ಮಾಡುತ್ತಿರುವ ಆರೋಪಗಳು ಶುದ್ಧ ಸುಳ್ಳು. ನನ್ನ ಹುಟ್ಟೂರು ಕ್ಯಾತನಹಳ್ಳಿಯಲ್ಲೇ ಇರುತ್ತೇನೆ. ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಇಲ್ಲೇ ಇದ್ದುಕೊಂಡು ತಂದೆ ಹಾಕಿಕೊಟ್ಟಿರುವ ಹಾದಿಯಲ್ಲಿ ನಡೆದು ಚಳವಳಿ ಮೂಲಕ ರೈತ ಸಂಘಟನೆ ಬಲಪಡಿಸುವುದಾಗಿ ಹೇಳಿದರು.
    ಚುನಾವಣೆಗೆ ಇನ್ನೆರಡು ದಿನ ಇರುವಂತೆ ಊರು ಬಿಡದಿದ್ದರೆ ಸಾಕು ಎಂದು ಎದುರಾಳಿಗಳು ನನ್ನ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಾನು ದೊಡ್ಡವರ ವಿರುದ್ಧ ಮಾತನಾಡಬಾರದೆಂದು ಮೌನವಾಗಿದ್ದೆ. ಇಂದು ಅವರ ಅಪಪ್ರಚಾರಕ್ಕೆ ಉತ್ತರ ನೀಡಬೇಕಾದ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ವ್ಯಕ್ತವಾಗುವ ಜನಾಭಿಪ್ರಾಯದಂತೆ ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಕ್ಷೇತ್ರದ ಪ್ರಬುದ್ಧ ಮತದಾರರು ಎದುರಾಳಿಗೆ ತಕ್ಕ ಉತ್ತರ ನೀಡಲಿದ್ದಾರೆ. ಚುನಾವಣೆ ನಂತರವೂ ಕ್ಯಾತನಹಳ್ಳಿಯಲ್ಲೇ ಇದ್ದು, ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ. ಬೇಕಾದರೆ ಅವರು ಬಂದು ಪರಿಶೀಲಿಸಲಿ ಎಂದು ಆರೋಪಗಳಿಗೆ ಉತ್ತರಿಸಿದರು.
    ಸಮಾಜ ಸೇವಕ ಬಿ.ರೇವಣ್ಣ ಮಾತನಾಡಿ, ಮೇಲುಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿ ಕಾಂಗ್ರೆಸ್ ನಾಯಕರೆಲ್ಲ ಒಗ್ಗೂಡಿ ದರ್ಶನ್ ಪುಟ್ಟಣ್ಣಯ್ಯ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಎಂದರೆ ಅದು ಕ್ಷೇತ್ರದ ಉಳಿವಿಗಾಗಿ ಎಂದು ಜನ ಅರ್ಥೈಸಿಕೊಳ್ಳಬೇಕು. ನಾವೇನೂ ಹಣ ಸಂಪಾದನೆಗಾಗಿ ರಾಜಕಾರಣಕ್ಕೆ ಬಂದಿಲ್ಲ. ದರ್ಶನ್ ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿ. 23 ದಿನಗಳ ಕಾಲ ಕ್ಷೇತ್ರದಲ್ಲಿ ನಡೆಸಿದ ಪಾದಯಾತ್ರೆ ಇತಿಹಾಸ ಪುಟ ಸೇರಲಿದೆ. ಜನರಿಗೆ ಅವರ ಸರಳತೆ ಬಗ್ಗೆ ಅರಿವಿದೆ. ಈ ಬಾರಿ ಹಣದಿಂದ ಮತದಾರರನ್ನು ಕೊಂಡುಕೊಳ್ಳಬಹುದು ಅಂದುಕೊಂಡರೆ ಅದು ಸಾಧ್ಯವಿಲ್ಲ ಎಂದರು.
    ಪ್ರತ್ಯೇಕ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸ್ಮಿತಾ ಪುಟ್ಟಣ್ಣಯ್ಯ ಮಾತನಾಡಿ, ಕಳೆದ ಚುನಾವಣೆಯ ಸೋಲಿನಿಂದ ನಮ್ಮ ಕುಟುಂಬ ನೋವುಂಡಿತ್ತು. ಈ ಬಾರಿ ಜನತೆ ಅದೇ ನೋವು ನೀಡಬೇಡಿ. ನನ್ನಣ್ಣ ದರ್ಶನ್ ವಿದೇಶದಲ್ಲಿನ ಕಂಪನಿ ಮಾರಾಟ ಮಾಡಿ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ಮರಳಿ ಬಂದಿದ್ದಾನೆ. ಯಾರೂ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳಬೇಡಿ. ಆಮಿಷಕ್ಕೆ ಒಳಗಾಗದೆ ಮುಂದಿನ ಭವಿಷ್ಯದ ದೃಷ್ಟಿಯಿಂದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿ ಎಂದು ಕೋರಿದರು.
    ಕೆಪಿಸಿಸಿ ಸದಸ್ಯ ನಾಗರಾಜು, ಕಾಂಗ್ರೆಸ್ ಮುಖಂಡರಾದ ರವಿಬೋಜೇಗೌಡ, ಎಚ್.ಮಂಜುನಾಥ್, ದರ್ಶನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts