More

    ಅಪಪ್ರಚಾರ ಬಿಟ್ಟು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ

    ನಾಗಮಂಗಲ: ಎಲ್.ಆರ್.ಶಿವರಾಮೇಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರಿಂದ ನನಗೆ ಸೋಲಾಯಿತು ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಸುರೇಶ್‌ಗೌಡ ಆರೋಪಿಸಿದ್ದಾರೆ. ಆದರೆ ನನ್ನ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಹಿರಂಗ ಸವಾಲು ಹಾಕಿದರು.

    ಪಟ್ಟಣದ ಟಿಬಿ ಬಡಾವಣೆಯಲ್ಲಿನ ತಮ್ಮ ನಿವಾಸದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಬುಧವಾರ ಆಯೋಜಿಸಿದ್ದ ಆತ್ಮವಲೋಕನಾ ಸಭೆಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಸುರೇಶ್‌ಗೌಡ ಮನೆಯಲ್ಲಿ ಸುಮ್ಮನೆ ಕುಳಿತುಕೊಂಡರೆ ಸರಿ. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಅವರಿಗೆ ತಾಕತ್ತಿದ್ದರೆ ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಸನ್ನಿಧಿಗೆ ಬಂದು ಚಲುವರಾಯಸ್ವಾಮಿಗೆ ನಾನು ಬೆಂಬಲ ನೀಡಿರುವುದಕ್ಕೆ ಸಾಕ್ಷಿಗಳಿದ್ದರೆ ಬಂದು ಪ್ರಮಾಣ ಮಾಡಲಿ. ನಾನು ಕೂಡ ನನ್ನ ಪತ್ನಿ ಗೆಲುವಿಗಾಗಿ ಹೋರಾಟ ಮಾಡಿರುವುದಾಗಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

    ನನಗೆ ಮತ ಕಡಿಮೆಯಾಗಿರುವುದಕ್ಕೆ ಬೇಸರವಿದೆಯೇ ಹೊರತು ಸೋತಿರುವುದಕ್ಕೆ ಬೇಸರವಿಲ್ಲ. ಆದರೆ ನನ್ನದೇ ಆದಂತಹ 30 ರಿಂದ 40 ಸಾವಿರ ಮತಗಳಿದ್ದವು. ಜತೆಗೆ ಬಿಜೆಪಿಯ 10 ರಿಂದ 15 ಸಾವಿರ ಮತಗಳಿದ್ದವು. ಈ ಎಲ್ಲ ಮತಗಳು ಎಲ್ಲಿಗೆ ಹೋದವು ಎಂಬುದು ನನಗೆ ಯಕ್ಷ ಪ್ರಶ್ನೆಯಾಗಿದೆ. ಸುರೇಶ್‌ಗೌಡ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಕ್ಕೆ ಪ್ರಮಾಣ ಮಾಡಲಿ. ಇಲ್ಲವಾದರೆ ತಪ್ಪಾಗಿ ಹೇಳಿಕೆ ನೀಡಿದ್ದೇನೆ ಎಂದು ಕ್ಷಮಾಪಣೆ ಕೋರಲಿ ಎಂದು ಆಗ್ರಹಿಸಿದರು.

    ಈ ಬಾರಿಯ ಚುನಾವಣೆಯಲ್ಲಿ ಸಂಪನ್ಮೂಲ ಕೊಡುವುದರಲ್ಲಿಯೂ ನಾನು ಹಿಂದೆ ಬಿದ್ದಿಲ್ಲ. ಸಾಲ ಮಾಡಿ ಸಕಾಲದಲ್ಲಿ ಸಂಪನ್ಮೂಲವನ್ನು ತಲುಪಿಸಿದ್ದೇನೆ. ಆದರೂ ನಾನು ಏನು ತಪ್ಪು ಮಾಡಿದ್ದೀನೋ ಗೊತ್ತಿಲ್ಲ. ನನ್ನ ಪತ್ನಿಗೆ ಕಡಿಮೆ ಮತ ಬಂದಿವೆ. ನಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾವಿರಾರು ಜನರಿಗೆ ಜಮೀನು ಮಂಜೂರು ಮಾಡಿಕೊಟ್ಟಿದ್ದೆ. ನೂರಾರು ಜನರಿಗೆ ಕೆಲಸ ಕೊಡಿಸಿದ್ದೆ. ಆದರೆ ಅವರು ಕೂಡ ಕೃತಜ್ಞತಾ ಮನೋಭಾವದಿಂದ ಮತ ಹಾಕದಿರುವುದು ಬೇಸರ ತಂದಿದೆ ಎಂದು ಎಲ್.ಆರ್.ಶಿವರಾಮೇಗೌಡ ಕಣ್ಣೀರು ಹಾಕುವ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದರು.

    ನನ್ನ ಮಗ ಎಲ್.ಎಸ್.ಚೇತನ್‌ಗೌಡ ಬಿಂಡಿಗನವಿಲೆ ಕ್ಷೇತ್ರದಿಂದ ಜಿಪಂ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಜಿಪಂ ಚುನಾವಣೆಯಲ್ಲಿ ಎಲ್.ಎಸ್.ಚೇತನ್‌ಗೌಡ ಸ್ಪರ್ಧೆ ಮಾಡಲ್ಲ. ಮುಂದಿನ ಬಾರಿಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾನೆ. ಆ ನಿಟ್ಟಿನಲ್ಲಿ ಬಿಜೆಪಿಯನ್ನು ಸಂಘಟಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

    ತಾಪಂ ಮಾಜಿ ಸದಸ್ಯ ಹೇಮರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಟಿ.ಕೃಷ್ಣಪ್ಪ, ಮಂಜೇಗೌಡ, ಕರಿಯಣ್ಣ, ಮಂಜುನಾಥ್, ಟಿ.ಕೆ.ರಾಮೇಗೌಡ, ಸಿದ್ದಲಿಂಗಸ್ವಾಮಿ ಸೇರಿದಂತೆ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts