More

    ಅನ್ನದಾತರಿಗೆ ವರವಾಗದ ಏತ ನೀರಾವರಿ

    ರವಿ ಕೆ. ಬಡಿಗೇರ ಕಲಘಟಗಿ

    ತಾಲೂಕಿನ ದೇವಿಕೊಪ್ಪ ಗ್ರಾಪಂ ವ್ಯಾಪ್ತಿಯ ಗಲಗಿನಕಟ್ಟಿ ಗ್ರಾಮದ ಬಳಿ ಬೇಡ್ತಿ ಹಳ್ಳಕ್ಕೆ ಅಡ್ಡಲಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿರುವ ಏತ ನೀರಾವರಿ ಯೋಜನೆಯು ಆರಂಭವಾಗಿ 20 ವರ್ಷ ಗತಿಸಿದರೂ ಇದರ ಲಾಭ ಮಾತ್ರ ರೈತರಿಗೆ ತಲುಪಿಲ್ಲ.

    ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಬೇಡ್ತಿ ಹಳ್ಳದ ನೀರಾವರಿ ಯೋಜನೆಯಿಂದ ಸುತ್ತಲಿನ ಗಲಗಿನಕಟ್ಟಿ, ದೇವಿಕೊಪ್ಪ, ಇಚನಳ್ಳಿ, ಬೆಲವಂತರ, ಹನುಮಾಪೂರ ಮುಂತಾದ ಗ್ರಾಮಗಳ ಅಂದಾಜು 800 ಎಕರೆ ಜಮೀನಿಗೆ ನೀರು ಪೂರೈಕೆಯ ಉದ್ದೇಶ ಇತ್ತು. ಆದರೆ, ಈಗ ಕೇವಲ 130 ಎಕರೆ ಜಮೀನಿಗೆ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ, ಈ ಯೋಜನೆ ಇದ್ದೂ ಇಲ್ಲದಂತಾಗಿದೆ ಎಂಬುದು ಸುತ್ತಲಿನ ರೈತರ ದೂರು.

    ನೀರು ಹರಿಯುವ ಕಾಲುವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಕಾಲುವೆ ಅಲ್ಲಲ್ಲಿ ಕುಸಿದಿದ್ದು, ಹೂಳು ತುಂಬಿದೆ. ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ನೀರನ್ನು ಲಿಫ್ಟ್ ಮಾಡಲು ಆಗುತ್ತಿಲ್ಲ. ಬಾಂದಾರದಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಆದರೆ, ಆಗಾಗ ವಿದ್ಯುತ್ ಕೈಕೊಡುವುದರಿಂದ ನೀರೆತ್ತಲು ಆಗುತ್ತಿಲ್ಲ. ಏತ ನೀರಾವರಿ ಯೋಜನೆ ಪ್ರದೇಶದ ಪಕ್ಕದಲ್ಲೇ ಕಚೇರಿ ಇದ್ದರೂ ಒಮ್ಮೆಯೂ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿಗೆ ಬರುತ್ತಿಲ್ಲ. ಆದ್ದರಿಂದ ಮೇಲಧಿಕಾರಿಗಳು ಕಾಲುವೆ ಸ್ವಚ್ಛಗೊಳಿಸಿ ಯೋಜನೆ ವ್ಯಾಪ್ತಿಯ ರೈತರ ಹೊಲಗಳಿಗೆ ನೀರು ಹರಿಯುವಂತೆ ಮಾಡಬೇಕಿದೆ.

    ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ದೇವಿಕೊಪ್ಪ ತಾಪಂ ಕ್ಷೇತ್ರದ ಸದಸ್ಯ ಬಸವರಾಜ ಬಾವಕಾರ, ‘ನನ್ನ ಐದು ವರ್ಷದ ಅವಧಿ ಮುಗಿಯುತ್ತ ಬಂತು. ಆದರೆ, ಸಣ್ಣ ನೀರಾವರಿ ಇಲಾಖೆಯವರು ನಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ಮಾಹಿತಿಯನ್ನೇ ನೀಡಿಲ್ಲ’ ಎಂದು ಬೇಸರದಿಂದ ಹೇಳಿದರು.

    ಕಾಲುವೆ ದುರಸ್ತಿ ಮಾಡಬೇಕು. ಹೂಳು ತುಂಬಿಕೊಂಡಿದೆ. ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಬಲ ಮತ್ತು ಎಡದಂಡೆ ಕಾಲುವೆಗಳು ಹೂಳು ತುಂಬಿದ್ದು, ಕಳೆದ ಹತ್ತು ವರ್ಷಗಳಿಂದ ದುರಸ್ತಿ ಕಾರ್ಯ ನಡೆದಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಏತ ನೀರಾವರಿ ಯೋಜನೆಯ ನೀರು ಬಳಕೆದಾರರ ಸಂಘದ ಸದಸ್ಯ ದೇವಿಕೊಪ್ಪದ ಶಿವಪ್ಪ ನೂಲ್ವಿ, ಗಲಗಿನಗಟ್ಟಿ ರೈತ ಹುಗ್ಗಪ್ಪ ಆಚಮಟ್ಟಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

    ಒಮ್ಮೆಯೂ ಸಭೆಗೆ ಹಾಜರಾಗಿಲ್ಲ: ‘ನಮ್ಮ ಅಧಿಕಾರಾವಧಿ ಮುಗಿಯುತ್ತ ಬಂದಿದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಒಮ್ಮೆಯೂ ತಾಪಂ ಸಭೆಗೆ ಹಾಜರಾಗಿಲ್ಲ. ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ.

    ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಕಲಘಟಗಿ ತಾಲೂಕಿನಲ್ಲಿ ಕೆರೆಗಳ ಅತಿಕ್ರಮಣ ತೆರುವುಗೊಳಿಸುವುದು, ಕೆರೆ ತುಂಬಿಸುವ ಯೋಜನೆ, ಕೆರೆಗಳ ಅಭಿವೃದ್ಧಿ, ಅದರಿಂದ ರೈತರಿಗಾಗುವ ನೀರಾವರಿ ಸೌಲಭ್ಯಗಳ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಗಲಗಿನಕಟ್ಟಿ ಏತ ನೀರಾವರಿ ಅಭಿವೃದ್ಧಿ ಕುರಿತು ಕ್ರಮ ಕೈಗೊಂಡಿದ್ದೇನೆ.
    | ಸಿ.ಎಂ. ನಿಂಬಣ್ಣವರ ಶಾಸಕ

    ಕಲಘಟಗಿ ತಾಲೂಕಿನ ಗಲಗಿನಕಟ್ಟಿ ಬಳಿಯ ಬೇಡ್ತಿ ಹಳ್ಳಕ್ಕೆ ಏತ ನೀರಾವರಿ ಯೋಜನೆಯಿಂದ 800 ಎಕರೆ ರೈತರ ಜಮೀನಿಗೆ ನೀರು ನೀಡುವ ಉದ್ದೇಶವಿತ್ತು. ಸಮರ್ಪಕ ವಿದ್ಯುತ್ ಇಲ್ಲದಿರುವುದು ಹಾಗೂ ಕಾಲುವೆಯು ಕಚ್ಚಾ ಇರುವುದರಿಂದ ನೀರನ್ನು ಸರಿಯಾಗಿ ಬಳಸಿಕೊಳ್ಳಲು ಆಗಿಲ್ಲ. ಅಲ್ಲಲ್ಲಿ ಕಾಲುವೆಗಳನ್ನು ಒಡೆದು ನೀರು ಬಳಸಲಾಗಿದೆ. ಕಾಲುವೆ ಹೂಳು ತುಂಬಿರುವುದರಿಂದ ಹೆಚ್ಚಿನ ರೈತರಿಗೆ ನೀರು ತಲುಪುತ್ತಿಲ್ಲ. ಕಾಂಕ್ರೀಟ್ ಕಾಲುವೆ ನಿರ್ವಿುಸಿದರೆ ಉದ್ದೇಶಿತ ಜಮೀನಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ.
    | ಎಸ್.ಟಿ. ಹೊರ್ತಿಕರ್ಸ ಣ್ಣ ನೀರಾವರಿ ಇಲಾಖೆ ಶಾಖಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts