More

    ಅನ್ನದಾತನ ಮೇಲೆ ವರುಣಾಘಾತ

    ಶಿರಸಿ: ಎಡೆಬಿಡದೆ ಸುರಿದ ಭಾರಿ ಮಳೆಯ ಕಾರಣ ಇಲ್ಲಿನ ಗದ್ದೆಗಳಲ್ಲಿನ ಶುಂಠಿ ಬೆಳೆಯು ಹಳದಿ ಕೊಳೆ ರೋಗಕ್ಕೆ ತುತ್ತಾಗಿದೆ. ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಕಳೆದ ಕೃಷಿ ಹಂಗಾಮಿನಲ್ಲಿ ಶುಂಠಿಗೆ ಉತ್ತಮ ಬೆಲೆ ಬಂದ ಕಾರಣ ಅರೆ ಮಲೆನಾಡಾದ ಬನವಾಸಿ ಹೋಬಳಿಯಾದ್ಯಂತ 650 ಎಕರೆಗೂ ಹೆಚ್ಚು ಕ್ಷೇತ್ರದಲ್ಲಿ ಸಾವಿರಾರು ರೈತರು ಶುಂಠಿಯನ್ನು ಹೆಚ್ಚಾಗಿ ನಾಟಿ ಮಾಡಿದ್ದಾರೆ. ಆರಂಭದಲ್ಲಿ ಉತ್ತಮ ಮಳೆಯಾಗಿ ನಾಟಿ ಮಾಡಿದ ಶುಂಠಿಗಳು ಸಮೃದ್ಧವಾಗಿ ಬೆಳೆದವು. ಕಾರಣ ಬೆಳೆಗಾರರು ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ, ವಾರದಿಂದ ಬಿದ್ದ ನಿರಂತರ ಮಳೆಯಿಂದಾಗಿ ಶುಂಠಿ ಕ್ಷೇತ್ರದಲ್ಲಿ ನೀರು ನಿಂತು ಹಳದಿ ಕೊಳೆರೋಗ ಕ್ಷೇತ್ರದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಮಳೆ ಹೆಚ್ಚಾದ ಕಾರಣ ಬ್ಯಾಕ್ಟಿರೀಯಲ್ ವಿಲ್ಟ್, ಪಿಜೋರಿಯಂ ವಿಲ್ಟ್ ಎಂಬ ಕೀಟಾಣುಗಳ ದಾಳಿಯಿಂದ ಬೆಳೆ ಕೊಳೆಯಲು ಆರಂಭಿಸಿದೆ. ಬನವಾಸಿ, ಅಂಗಡಿ, ಸಂತೊಳ್ಳಿ, ವದ್ದಲ, ಕಾಳಂಗಿ, ಮಧುರವಳ್ಳಿ ಸೇರಿ ಹೋಬಳಿಯ ಬಹುತೇಕ ಕಡೆ ಶೇ. 30ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಕೊಳೆ ರೋಗಕ್ಕೆ ತುತ್ತಾಗಿದ್ದು, ಹಂತ ಹಂತವಾಗಿ ಇಡೀ ಶುಂಠಿ ಬೆಳೆಯನ್ನು ಈ ರೋಗ ಆಕ್ರಮಿಸುತ್ತಿರುವುದು ರೈತರನ್ನು ಹೈರಾಣಾಗಿಸಿದೆ.

    ಕೀಟನಾಟಕ ದುಬಾರಿ: ಶುಂಠಿಗೆ ತಗುಲಿರುವ ಕೊಳೆ ರೋಗಕ್ಕೆ ಸ್ಥಳೀಯವಾಗಿ ಕ್ವಿನಾಲ್ ಫಾಸ್ಟ್, ಮಾನೋಕ್ಟೇರಿ ಫಾಸ್ಟ್​ಲಿಂಡನ್ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಇದರ ಬೆಲೆ ದುಬಾರಿ ಕೂಡ. ಆದರೆ, ಮಳೆ ಬಿಡುವು ನೀಡದೆ ಸುರಿಯುತ್ತಿರುವ ಕಾರಣ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಬೆಳೆಗಾರರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಶುಂಠಿಗೆ ಕೊಳೆ ರೋಗ ಬಂದರೆ ಅದು ಇಡೀ ಗದ್ದೆಯನ್ನೇ ಆಕ್ರಮಿಸುತ್ತದೆ. ಕೊಳೆ ರೋಗದಿಂದ ಶುಂಠಿಯ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ, ಶುಂಠಿಯ ಗಡ್ಡೆಗಳು ಬೆಳವಣಿಗೆಯನ್ನೇ ಹೊಂದುವುದಿಲ್ಲ.

    ಗಾಯದ ಮೇಲೆ ಬರೆ: ಕರೊನಾ ಕಾರಣಕ್ಕೆ ಕಾರ್ವಿುಕರ ಕೊರತೆಯ ನಡುವೆಯೂ ದುಪ್ಪಟ್ಟು ವೇತನ ನೀಡಿ ಕಾರ್ವಿುಕರನ್ನು ಕರೆತಂದು ನಿಗದಿತ ಸಮಯದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಶುಂಠಿ ಬಿತ್ತನೆಯ ದಿನದಿಂದಲೂ ನಿರ್ವಹಣೆ, ಕೂಲಿ ವೇತನ, ಕೀಟನಾಶಕ ಹೀಗೆ ಹೆಚ್ಚು ಹಣ ವ್ಯಯಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕೊಳೆ ರೋಗ ಬಂದಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    20 ಎಕರೆ ಮೆಕ್ಕೆಜೋಳ ನೀರುಪಾಲು: ಸಿದ್ದಾಪುರ: ಒಂದು ವಾರದಿಂದ ನಿರಂತರವಾಗಿ ಬೀಸಿದ ಗಾಳಿ ಹಾಗೂ ಸುರಿದ ಮಳೆಯಿಂದಾಗಿ ತಾಲೂಕಿನ ಕಾನಗೋಡಿನ 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆ ಜೋಳ ನೆಲಸಮಗೊಂಡಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರಾಗಿರುವ ಶಿವರಾಯ ಜಟ್ಯ ನಾಯ್ಕ, ರಾಮ ತಿಮ್ಮ ವರ್ಕನ್, ರಾಮ ಕನ್ನ ಗಣಪ ನಾಯ್ಕ, ಈಶ್ವರ ಮೈಲಾ ನಾಯ್ಕ, ಈಶ್ವರ ಹನುಮಾ ನಾಯ್ಕ ಮತ್ತಿತರ ರೈತರು ಬೆಳೆದ ಮೆಕ್ಕೆ ಜೋಳ ಉತ್ತಮವಾಗಿ ಬೆಳೆದು ತೆನೆ ಹೊರಬರುವಂತಿತ್ತು. ಆದರೆ, ಗಾಳಿ-ಮಳೆಗೆ ಎಲ್ಲವೂ ಮುರಿದು ಹೋಗಿದೆ. ಕೆಲವು ಕಡೆ ನೀರು ನುಗ್ಗಿ ನೆಲಸಮಗೊಂಡು ಮಣ್ಣಿನಲ್ಲಿ ಹೂತು ಹೋಗಿದೆ. ಭತ್ತದ ಬೆಳೆಯೊಂದಿಗೆ ಮೆಕ್ಕೆ ಜೋಳವನ್ನು ಇಲ್ಲಿಯ ರೈತರು ಬೆಳೆಯುತ್ತಿದ್ದು ಭತ್ತದ ಗದ್ದೆಯಲ್ಲಿಯೂ ನೀರು ನಿಂತಿದೆ. ನೀರು ಇಳಿದ ಮೇಲೆಯೇ ಎಷ್ಟು ಹಾನಿ ಉಂಟಾಗಿದೆ ಎಂದು ತಿಳಿದುಬರಲಿದೆ ಎಂದು ರೈತರು ಹೇಳುತ್ತಾರೆ.

    ಶುಂಠಿ ಮಡಿಗಳಲ್ಲಿ ನೀರು ನಿಲ್ಲದಂತೆ ವ್ಯವಸ್ಥಿತ ಕ್ರಮವನ್ನು ತುರ್ತಾಗಿ ಮಾಡಬೇಕು. ರೋಗ ನಿಯಂತ್ರಣಕ್ಕಾಗಿ ರಿಡೋಮಿಲ್ ಅನ್​ರೆಡ್ 2 ಮಿ.ಗ್ರಾಂ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಕೊಳೆರೋಗ ಬಂದ ಗಿಡದ ಬುಡಗದಲ್ಲಿ ಹಾಕಬೇಕು. ಉಳಿದೆಡೆ ಬ್ಲೈಟಾಕ್ಸ್ ಕಾಪರ್​ಆಕ್ಸಿಕ್ಲೋರೈಡ್ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಗದ್ದೆಯಲ್ಲಿನ ಶುಂಠಿಯ ಗಡ್ಡೆಯ ಬುಡಕ್ಕೂ ಸಿಂಪಡಿಸಬೇಕು. | ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts