More

    ಅನೈತಿಕ ಚಟುವಟಿಕೆ ತಾಣವಾದ ಕೆಳಸೇತುವೆ, ರಾಷ್ಟ್ರೀಯ ಹೆದ್ದಾರಿ ದಾಟಲು ನಿರ್ಮಿಸಿರುವ ಅಂಡರ್‌ಪಾಸ್,  ನಿರ್ವಹಣೆಗೆ ಜಾಸ್ ಟೋಲ್ ಕಂಪನಿಯ ನಿರ್ಲಕ್ಷ್ಯ

    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ರಾಷ್ಟೀಯ ಹೆದ್ದಾರಿ 48ರ ತುಮಕೂರು-ನೆಲಮಂಗಲ ಮಾರ್ಗದಲ್ಲಿ ರಸ್ತೆ ದಾಟಲು ಜನರಿಗೆ ಅನುಕೂಲವಾಗಲಿ ಎಂದು ಕೆಳಸೇತುವೆ (ಅಂಡರ್‌ಪಾಸ್) ನಿರ್ಮಿಸಲಾಗಿದೆ. ಆದರೆ, ಜನರು ಇದನ್ನು ಬಳಸುತ್ತಿಲ್ಲ. ಪರಿಣಾಮವಾಗಿ ಇದೊಂದು ಅನೈತಿಕ ಚಟುವಟಿಕೆಯ ತಾಣವಾಗಿಯೂ, ಬಯಲು ಶೌಚಗೃಹವಾಗಿಯೂ ಮಾರ್ಪಟ್ಟಿದೆ.
    ಕೆಳಸೇತುವೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದ್ದ ಜಾಸ್ ಟೋಲ್ ಕಂಪನಿ ಜವಾಬ್ದಾರಿ ಮರೆತಿದೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದನ್ನು ಗಮನಿಸಿದರೂ ಅದನ್ನು ತಡೆಯಲು ಜಾಣಕುರುಡು ತೋರುತ್ತಿದೆ.

    ಮೂರು ಕಡೆಯೂ ಇದೇ ಸ್ಥಿತಿ: ನೆಲಮಂಗಲದಿಂದ ಕ್ಯಾತ್ಸಂದ್ರದ ಟೋಲ್‌ವರೆಗೆ 3 ಕಡೆ ಕೆಳಸೇತುವೆ ನಿರ್ಮಿಸಲಾಗಿದೆ. ಈ ಮೂರು ಸೇತುವೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಕೆಲತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಸೇತುವೆಗಳಲ್ಲಿ ನೀರು ತುಂಬಿ ಗಬ್ಬು ನಾರುವ ಜತೆಗೆ ಸೊಳ್ಳೆ ಉತ್ಪತ್ತಿ ತಾಣವಾಗಿವೆ. ಬಳಕೆಗೆ ಯೋಗ್ಯವಿಲ್ಲದ ನಿರುಪಯುಕ್ತ ಕೆಳಸೇತುವೆಗಳ ನಿರ್ಮಾಣಕ್ಕೆ ಸಾರ್ವಜನಿಕ ಹಣ ಪೋಲು ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

    ಕೆಂಗಲ್-ಕೆಂಪೋಹಳ್ಳಿ ಬಳಿ ಕೆಳಸೇತುವೆ ನಿರ್ಮಿಸಿ 20 ವರ್ಷಗಳಾಗಿವೆ. ಆದರೆ, ನಿರ್ವಹಣೆಯ ಕೊರತೆಯಿಂದಾಗಿ ಬಳಕೆಯೋಗ್ಯವಾಗಿಲ್ಲ. ಜತೆಗೆ ಜನರಿಗೆ ಅನುಕೂಲವಾಗದ ಕಡೆ ಕೆಳಸೇತುವೆ ನಿರ್ಮಿಸಿರುವುದರಿಂದ, ಜನರು ಯಾರೂ ಇದನ್ನು ಬಳಸುವುದಿಲ್ಲ.
    ಮುರಳೀಧರ ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ

    ಎಡೇಹಳ್ಳಿಯ ಜಿಂದಾಲ್ ಬಳಿ ನಿತ್ಯ ಸಾವಿರಾರು ಕಾರ್ಮಿಕರು ಕೈಗಾರಿಕಾ ಪ್ರದೇಶಕ್ಕೆ ತೆರಳಲು ರಸ್ತೆ ದಾಟುತ್ತಾರೆ. ಅಲ್ಲಿ ಕೆಳಸೇತುವೆ ನಿರ್ಮಿಸಿ, ಅನುಕೂಲ ಮಾಡಿಕೊಡಬೇಕಿತ್ತು. ಅದನ್ನು ಬಿಟ್ಟು ಅವಶ್ಯಕತೆ ಇಲ್ಲದ ಕಡೆ ನಿರ್ಮಿಸಿ, ನಿರ್ವಹಣೆಯನ್ನೂ ಮಾಡದೆ ಸಾರ್ವಜನಿಕ ಹಣ ಪೋಲು ಮಾಡಲಾಗಿದೆ. ಇದಕ್ಕೆ ಜಾಸ್ ಟೋಲ್ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಣೆಯಾಗಿವೆ.
    ತೀರ್ಥಪ್ರಸಾದ್, ಎಡೇಹಳ್ಳಿ ಗ್ರಾಮಸ್ಥ

    ಜಾಸ್ ಟೋಲ್‌ನಿಂದ ನಿಯಮಿತವಾಗಿ ಅಂಡರ್‌ಪಾಸ್ ಸ್ವಚ್ಛಗೊಳಿಸಲಾಗುತ್ತಿದೆ. ಆದರೂ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಯ ತಾಣವಾಗಿಸಿಕೊಂಡಿದ್ದಾರೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಂಡರ್ ಪಾಸ್ ಮುಚ್ಚಲಾಗಿದೆ.
    ಶ್ರೀನಿವಾಸ್, ಜಾಸ್‌ಟೋಲ್ ಅಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts