More

    ಅನುದಾನ ಇಲ್ಲದಿದ್ದರೂ ಭೂಮಿ ಪೂಜೆ: ಸಂಸದ ಪ್ರಜ್ವಲ್ ರೇವಣ್ಣ

    ಹಾಸನ: ಯಾವ ಅನುದಾನ ಇಲ್ಲದಿದ್ದರೂ ಹಿಂದಿನ ಅವಧಿಯ ಶಾಸಕರು ಸುಮ್ಮನೆ ರಸ್ತೆ ಕೆರೆದು ಗುದ್ದಲಿ ಪೂಜೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಸ್ಥಳೀಯ ಶಾಸಕರ ಜತೆ ಅಭಿವೃದ್ಧಿ ಕೆಲಸ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.

    ನಗರದ ಹೊಸಲೈನ್ ರಸ್ತೆ ಬಳಿ ಇರುವ ಇಮ್‌ದಾದಿಯಾ ಮದರಸ ಮತ್ತು ಮಸೀದಿ ಮತ್ತು ಪೆನ್ಷನ್ ಮೊಹಲ್ಲಾದ ಪೊಲೀಸ್ ಠಾಣೆ ಬಳಿ ಇರುವ ಬಾರ್‌ಲೇನ್ ಮಸೀದಿಗೆ ಸಂಸದ ಪ್ರಜ್ವಲ್ ರೇವಣ್ಣ ಅವರು ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್ ಜತೆ ಶುಕ್ರವಾರ ಆಗಮಿಸಿ ಮುಸಲ್ಮಾನರಿಗೆ ಕೃತಜ್ಞತೆ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಸ್ತೆಗಳನ್ನು ಪರಿಶೀಲಿಸಲಾಗುತ್ತಿದ್ದು, ಕೆಲವು ಭಾಗಗಳಲ್ಲಿ ಸುಮ್ಮನೆ ಏಕಾಏಕಿ ರಸ್ತೆಗಳಿಗೆ ಭೂಮಿ ಮಾಡಿದ್ದಾರೆ. ಆದರೆ, ಅದಕ್ಕೆ ಯಾವ ಅನುದಾನವಿಲ್ಲ. ಚನ್ನಾಗಿ ಇರುವಂತಹ ರಸ್ತೆಗಳನ್ನು ಕೂಡ ಕೆರೆದು ಹೋಗಿರುವುದು ದುರಂತದ ವಿಚಾರ ಎಂದರು.

    ವರ್ಷದ 365 ದಿನಗಳ ಕಾಲ ಜನರ ಜತೆ ಸಂಪರ್ಕದಲ್ಲಿದ್ದುಕೊಂಡು ಜನರ ಸಮಸ್ಯೆಯಲ್ಲಿ ಭಾಗಿಯಾಗುತ್ತಾ ಬಂದಿದ್ದೇನೆ. ಲೋಕಾಸಭೆ ಚುನಾವಣೆ ಇನ್ನು 8ರಿಂದ 9 ತಿಂಗಳು ಇದೆ. ಅದರ ಬಗ್ಗೆ ಯಾವ ಯೋಚನೆ ಮಾಡುತ್ತಿಲ್ಲ. ಹಾಸನ ತಾಲೂಕಿನಲ್ಲಿ ಅದ್ಧೂರಿಯಾದ ಗೆಲುವನ್ನು ತಂದುಕೊಟ್ಟಿದ್ದಾರೆ. ಎಲ್ಲ ಸಮಯದಲ್ಲೂ ಹಾಸನದ ಜನತೆ ನಮ್ಮ ಕೈ ಹಿಡಿದಿದ್ದಾರೆ. ಅವರಿಗೆಲ್ಲರಿಗೂ ಕೂಡ ಕೃತಜ್ಞತೆ ಹೇಳಿ ಆಶೀರ್ವಾದ ಪಡೆದು ಮತ್ತೊಮ್ಮೆ ಅವರ ವಿಶ್ವಾಸ ಗಳಿಸಲಾಗುವುದು ಎಂದರು.

    ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮುಸಲ್ಮಾನ ಮುಖಂಡರು ಮತ್ತು ಗುರುಗಳನ್ನು ಭೇಟಿ ಆಗಿರಲಿಲ್ಲ. ಕಳೆದ ಚುನಾವಣೆಯಲ್ಲಿ ಹಾಸನ ತಾಲೂಕಿನ ಚುನಾವಣೆ ಒಂದು ಹೋರಾಟದಂತೆ ಇತ್ತು. ಅಂತಹ ಸಂದರ್ಭದಲ್ಲಿ ಮುಸಲ್ಮಾನ ಬಾಂಧವರು ಆಶೀರ್ವಾದ ಮಾಡಿ ಸ್ವರೂಪ್ ಅವರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಎಲ್ಲಾ ಮುಖಂಡರನ್ನು ಭೇಟಿ ಮಾಡಿ ಅವರಿಗೆ ಏನಾದರೂ ಸಮಸ್ಯೆಗಳು ಇದ್ದರೆ ಪರಿಹರಿಸುವ ಸಲುವಾಗಿ ಹಾಗೂ ಅವರ ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದರು.

    ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ನಾನು ಚುನಾವಣೆಯಲ್ಲಿ ಗೆಲ್ಲಲು ಕಾರಣರಾದ ಎಲ್ಲಾ ಮುಸಲ್ಮಾನರು ಮತ್ತು ಹಾಸನದ ಜನತೆಗೆ ಮತ್ತೊಮ್ಮೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ. ಜನರಿಗೆ ಯಾವುದೇ ಸಮಸ್ಯೆಗಳು ಇದ್ದರೂ ಆ ಬಗ್ಗೆ ಮನವಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪರಿಹರಿಸುವ ಕೆಲಸವನ್ನು ಮಾಡುತ್ತೇವೆ. ಮಾಜಿ ಸಚಿವ ಎಚ್.ಡಿ. ರೇವಣ್ಣನವರ ನೇತೃತ್ವದಲ್ಲಿ ಎಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.

    ಈ ವೇಳೆ ಯುವ ಜನತಾ ದಳ ರಾಜ್ಯ ಉಪಾಧ್ಯಕ್ಷ ಸಮೀರ್ ಖಾನ್, ನಗರಸಭಾ ಸದಸ್ಯರಾದ ಸಯ್ಯದ್ ಅಕ್ಬರ್, ಸಿ.ಆರ್. ಶಂಕರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಿಂಗೇಗೌಡ, ನಗರಸಭೆ ಮಾಜಿ ಸದಸ್ಯ ಗೋಪಾಲ್, ಮುಖಂಡರಾದ ಮೊಹಮದ್ ರಫೀಕ್, ಆಮಿರ್ ಜಾನ್, ಅಕ್ಮಲ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts