More

    ಅನುಕಂಪ ತೋರದೆ ಅವಕಾಶ ಕೊಡಿ

    ಧಾರವಾಡ: ಬುದ್ಧಿಮಾಂದ್ಯರು, ಅಂಧರು, ವಾಕ್ ಶ್ರವಣ ತೊಂದರೆಯುಳ್ಳ ಮಕ್ಕಳು ಅಡ್ಡಿಯಲ್ಲ. ಅಂಥ ಮಕ್ಕಳ ಪಾಲಕರು, ಪೋಷಕರು ಧೈರ್ಯದಿಂದ ಇರಬೇಕು. ಅನುಕಂಪ ತೋರಿಸದೆ ಅವಕಾಶ ಕೊಟ್ಟು ನೋಡಬೇಕು ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ನಗರದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಜೆಎಸ್​ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ 2 ದಿನಗಳ ವಿಭಿನ್ನ ಸಾಮರ್ಥ್ಯದ ಮಕ್ಕಳು: ಅವರೊಂದಿಗೆ ವ್ಯವಹರಿಸುವ ಪಾಲಕರು, ಪೋಷಕರು ಮತ್ತು ಶಿಕ್ಷಕರಿಗೆ ಬಹು ಆಯಾಮದ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

    ತಮ್ಮ ಮಕ್ಕಳಿಗೆ ಇಂಥ ಸ್ಥಿತಿ ಏಕೆ ಬಂತು ಎಂದು ಚಿಂತಿಸಿ ಫಲವಿಲ್ಲ. ಪಾಲಕರು ಎದೆಗುಂದದೆ ಎಲ್ಲರಂತೆ ಸಮಾಜದಲ್ಲಿ ಬದುಕುವುದನ್ನು ಕಲಿಸಬೇಕು. ಅವರನ್ನು ಮನೆಯಲ್ಲಿ ಕೂಡಿ ಹಾಕುವುದು ಸರಿಯಲ್ಲ. ಇಂಥ ಕಾರ್ಯಾಗಾರಗಳು ಹೆಚ್ಚೆಚ್ಚು ಜರುಗಿ ಪಾಲಕರಿಗೆ ಧೈರ್ಯ ಹೇಳುವ ಕೆಲಸ ಆಗಬೇಕು. ಮಕ್ಕಳ ಆರೋಗ್ಯ ಸರಿಪಡಿಸುವುದಾಗಿ ನಂಬಿಸಿ ಹಣ ಪೀಕುವವರಿಂದ ಎಚ್ಚರ ವಹಿಸಬೇಕು ಎಂದರು.

    ಮುಖ್ಯ ಅತಿಥಿ, ಕವಿವಿ ಪ್ರಭಾರ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಮಾತನಾಡಿ, ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ವ್ಯತಿರಿಕ್ತವಾಗಿ ನೋಡುವ ಹಾಗೂ ತಮ್ಮ ಮಕ್ಕಳಂತೆಯೇ ನೋಡುವ ಜನರಿದ್ದಾರೆ. ಆನುವಂಶೀಯತೆ, ಬುದ್ಧಿಭ್ರಮಣೆ, ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಮಕ್ಕಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವೈಜ್ಞಾನಿಕ ರಂಗದಲ್ಲಿ ಶೋಧಗಳು ನಡೆಯುತ್ತಲೇ ಇದ್ದರೂ ಅನೇಕ ವೈರುಧ್ಯದ ಸಂಗತಿಗಳು ಜರುಗುತ್ತಿವೆ. ಗ್ರಹಣದ ಸಂದರ್ಭದಲ್ಲಿ ಮಕ್ಕಳನ್ನು ಮಣ್ಣಿನಲ್ಲಿ ಹೂಳುವುದು, ಬುಟ್ಟಿಯಲ್ಲಿ ಇಡುವ ಪ್ರಯೋಗ ಸರಿಯಲ್ಲ. ಪಾಲಕರು ಇಂಥ ಮೂಢನಂಬಿಕೆಗಳಿಂದ ದೂರ ಇರಬೇಕು ಎಂದರು. ಕವಿವಿ ವಿಶ್ರಾಂತ ಕುಲಪತಿ ಡಾ. ಪ್ರಮೋದ ಗಾಯಿ, ಡಾ. ಸುಷ್ಮಾ ಅಪ್ಪಯ್ಯ ಹಾಗೂ ಡಾ. ಜಿಮ್ ಎಲಿಯಟ್ ಅಂಗವಿಕಲ ಮಕ್ಕಳ ಪಾಲನೆ ಕುರಿತು ಉಪನ್ಯಾಸ ನೀಡಿದರು.

    ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ಬಿ. ಗುಡಸಿ ಸ್ವಾಗತಿಸಿದರು. ವಿಜ್ಞಾನ ಕೇಂದ್ರದ ಸಿಬ್ಬಂದಿ, ಬುದ್ಧಿಮಾಂದ್ಯ ಮತ್ತು ವಾಕ್ ಶ್ರವಣ ತೊಂದರೆಯುಳ್ಳ ಮಕ್ಕಳು ಪಾಲಕರು ಉಪಸ್ಥಿತರಿದ್ದರು.

    ಪ್ರತಿಯೊಬ್ಬ ಮನುಷ್ಯನಿಗೆ ಸಮಾಜಮುಖಿ ಚಿಂತನೆ ಇರಬೇಕು. ಇಂಥ ಮಕ್ಕಳಲ್ಲಿ ಒಂದೊಂದು ವಿಶೇಷತೆ ಇದ್ದು, ಅದನ್ನು ಮೊದಲು ಪಾಲಕರು ಒಪ್ಪಬೇಕು. ಅವರಿಗೆ ಪ್ರತ್ಯೇಕ ಶಾಲೆಯ ಬದಲು ಮುಖ್ಯವಾಹಿನಿಯಲ್ಲೇ ಶಿಕ್ಷಣ ಸಿಗಬೇಕು. ಇಂಥ ಮಕ್ಕಳಿಗಾಗಿ 35 ವರ್ಷದಿಂದ ಕೆಲಸ ಮಾಡುತ್ತಿದ್ದು, ಮಕ್ಕಳ ಮತ್ತು ಪಾಲಕರ ನೋವು, ನಲಿವು ಗೊತ್ತು. ಅವರನ್ನು ಕಂಡು ಪಾಪ, ಅಯ್ಯೋ ಎನ್ನದೆ ಎಲ್ಲರಂತೆ ಅವಕಾಶ ಸಿಗುವಂತಾಗಬೇಕು. | ಡಾ. ಆನಂದ ಪಾಂಡುರಂಗಿ ಮನಶಾಸ್ತ್ರಜ್ಞ

    =========

    <p

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts