More

    ಅನರ್ಹರಿಗೆ ಸಿಗುವುದೇ ಮತದಾನ ಹಕ್ಕು?

    ಶಿರಸಿ: ಇಲ್ಲಿನ ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ಮತದಾನ ಹಕ್ಕಿನಿಂದ ವಂಚಿತರಾದವರ ಅರ್ಜಿಗೆ ಹೈಕೋರ್ಟ್ ಅಸ್ತು ನೀಡಿದರೆ ಹಲವರ ಗೆಲುವಿನ ಆಸೆ ತಲೆಕೆಳಗಾಗಲಿದೆ. ಇದು ಕಣದಲ್ಲಿರುವ ಸ್ಪರ್ಧಿಗಳ ಆತಂಕಕ್ಕೆ ಕಾರಣವಾಗಿದೆ.

    ಬ್ಯಾಂಕ್​ನ ಒಟ್ಟು 16 ಕ್ಷೇತ್ರಗಳ ಪೈಕಿ 6ರಲ್ಲಿ ಅವಿರೋಧ ಆಯ್ಕೆ ಹೊರತುಪಡಿಸಿ ಇನ್ನುಳಿದ 10 ಕ್ಷೇತ್ರಗಳಿಗೆ ನ. 11ರಂದು ಚುನಾವಣೆ ನಡೆಯಲಿದೆ. ಹೀಗಾಗಿ, ಕಣದಲ್ಲಿನ 23 ಸ್ಪರ್ಧಿಗಳು ಅರ್ಹ 287 ಮತದಾರರ ಹತ್ತಿರ ಎಡತಾಕುತ್ತಿದ್ದಾರೆ. ಆದರೆ, ಅರ್ಹ ಮತದಾರರಿಗಿಂತ ಅನರ್ಹರ ಪಟ್ಟಿಯೇ ದೊಡ್ಡದಿದೆ. ಬಹುತೇಕ ಅನರ್ಹ ಮತದಾರರು ಮತದಾನಕ್ಕೆ ಅವಕಾಶ ನೀಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಹಾಲಿ ಅರ್ಹ ಮತದಾರರ ಜತೆ ಸಂಬಂಧ ಬೆಸೆಯುತ್ತಿರುವ ಸ್ಪರ್ಧಿಗಳಿಗೆ ಯಾರತ್ತ ಹೋಗಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.

    ಅಸ್ತು ನೀಡಿದರೆ ಬದಲಾವಣೆ ನಿಶ್ಚಿತ: ಬ್ಯಾಂಕ್​ನ 3 ಸರ್ವ ಸಾಧಾರಣ ಸಭೆಗೆ ಹಾಜರಾಗದವರನ್ನು ಬೈಲಾ ಪ್ರಕಾರ ಮತದಾನ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಇಂಥ 250ಕ್ಕೂ ಹೆಚ್ಚು ಮತದಾರರು ಸದ್ಯ ಮತದಾನಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್​ಗೆ

    ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆಗೆ ಇನ್ನೊಂದೇ ದಿನ ಬಾಕಿಯಿದ್ದು, ಇವರ ಕೋರಿಕೆಗೆ ಕೋರ್ಟ್ ಅಸ್ತು ನೀಡಿದರೆ ಹಾಲಿ ಕಣದಲ್ಲಿರುವವರ ಚಿತ್ರಣ ಬದಲಾಗಲಿದೆ. ಜತೆಗೆ, ವಿವಿಧ ಕಾರಣ ನೀಡಿ ಮತದಾನದಿಂದ ವಂಚಿತವಾಗುವಂತೆ ಮಾಡಿದ್ದ ಈ ಹಿಂದಿನ ನಿರ್ದೇಶಕರಿಗೆ ಈ ಬೆಳವಣಿಗೆ ಮುಳುಗುವ ನೀರಾಗುವುದು ನಿಶ್ಚಿತವಾಗಲಿದೆ ಎಂಬುದು ಸದ್ಯ ಅನರ್ಹತೆ ಪಟ್ಟಿಯಲ್ಲಿರುವ ಮತದಾರರ ಅಭಿಪ್ರಾಯ.

    ಹೊಸಬರಿಗೆ ಅನುಕೂಲ: ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಮತಕ್ಷೇತ್ರದಲ್ಲಿ ಸದ್ಯ 71 ಅರ್ಹ ಮತದಾರರಿದ್ದು, 110 ಮತಗಳು ಅನರ್ಹತೆಯ ಪಟ್ಟಿಯಲ್ಲಿವೆ. ಹಾಲು ಉತ್ಪಾದಕರ/ಕಾರ್ವಿುಕರ/ ಕೂಲಿಕಾರರ/ ಇತರ ಸಹಕಾರಿ ಸಂಘಗಳ (ಫಾರ್ವಿುಂಗ್ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಲ್ಲಿ 53 ಮತದಾರರಿಗೆ ಮತದಾನದ ಅವಕಾಶವಿದ್ದು, 64 ಮತಗಳಿಗಾಗಿ ಕೋರ್ಟ್ ಮೆಟ್ಟಿಲೇರಲಾಗಿದೆ. ಗ್ರಾಹಕರ ಸಹಕಾರಿ ಸಂಘಗಳು ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ 11 ಅರ್ಹ ಮತಗಳಿದ್ದು, 13 ಮತಗಳ ಮಾನ್ಯತೆಗಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಔದ್ಯೋಗಿಕ ಸಹಕಾರಿ ಸಂಘಗಳ (ನೇಕಾರರ ಸಹಕಾರಿ ಸಂಘಗಳ ಸಹಿತ) ಮತಕ್ಷೇತ್ರದಲ್ಲಿ 14 ಅರ್ಹ ಮತಗಳಿದ್ದು, 13 ಅನರ್ಹ ಮತಗಳ ಮಾನ್ಯತೆಗೆ ಅವಕಾಶ ಕೋರಲಾಗಿದೆ. ಕುಮಟಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ 17 ಮತಗಳಿದ್ದು, 2 ಮತಗಳು ಅನರ್ಹ ಪಟ್ಟಿಯಲ್ಲಿವೆೆ. ಅಂಕೋಲಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಲ್ಲಿ 6 ಅನರ್ಹ ಮತಗಳಿವೆ. ಇನ್ನುಳಿದ ಕೆಲ ಕ್ಷೇತ್ರಗಳಲ್ಲೂ ಅನರ್ಹ ಮತದಾರರಿದ್ದು, ಅವರು ಕೂಡ ಹೈ ಕೋರ್ಟ್ ಮೂಲಕ ಮತದಾನಕ್ಕೆ ಅವಕಾಶ ಕೋರಿದ್ದಾರೆ. ಇವರೆಲ್ಲರಿಗೂ ಮತದಾನಕ್ಕೆ ಅವಕಾಶ ಸಿಕ್ಕರೆ ಹೊಸ ಸ್ಪರ್ಧಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಸ್ಪರ್ಧಿಗಳ ಲೆಕ್ಕಾಚಾರ.

    ಸರ್ವ ಸಾಧಾರಣ ಸಭೆಗೆ ಸರಿಯಾಗಿ ನೋಟಿಸ್ ಬಾರದ ಕಾರಣಕ್ಕೆ ಸಭೆಗೆ ಹೋಗಿರಲಿಲ್ಲ. ಆದರೆ, ಈ ವಿಷಯವನ್ನೇ ರಾಜಕೀಯಕ್ಕೆ ಬಳಸಿಕೊಂಡು ಮತದಾನ ಪ್ರಕ್ರಿಯೆಯಿಂದ ಹೊರಗಿಡುವ ಕಾರ್ಯವಾಗಿದೆ. ಮತದಾನಕ್ಕೆ ಅವಕಾಶ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅವಕಾಶ ನೀಡುವ ವಿಶ್ವಾಸವಿದೆ.
    | ಹೆಸರು ಹೇಳಲಿಚ್ಛಿಸದ ಅನರ್ಹ ಮತದಾರ

    ಪ್ರಸ್ತುತ ಬ್ಯಾಂಕ್ ಬೈಲಾ ಪ್ರಕಾರ ಚುನಾವಣೆಯಲ್ಲಿ ಅನರ್ಹ ಮತದಾರರಿಗೆ ಮತದಾನದ ಅವಕಾಶವಿಲ್ಲ. ಆದರೆ, ಅವರಿಗೆ ಕೋರ್ಟ್​ಗೆ ಹೋಗಲು ಅವಕಾಶವಿದ್ದು, ಒಂದೊಮ್ಮೆ ಹೈಕೋರ್ಟ್ ಅವಕಾಶ ನೀಡಿದರೆ ಮತದಾನಕ್ಕಾಗಿ ಅರ್ಜಿ ಸಲ್ಲಿಸಿದವರೆಲ್ಲ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
    | ಆಕೃತಿ ಬನ್ಸಾಲ್ ಚುನಾವಣಾಧಿಕಾರಿ (ಉಪವಿಭಾಗಾಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts