More

    ಅನಧಿಕೃತ ಲೇಔಟ್​ಗಳ ತೆರವು ಕಾರ್ಯಾಚರಣೆ

    ಧಾರವಾಡ: ನಗರದ ಹೊಸಯಲ್ಲಾಪುರ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ವಿುಸಲಾಗಿದ್ದ ಲೇಔಟ್​ಗಳ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು. ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಅಧಿಕಾರಿಗಳು ಜೆಸಿಬಿ ಸಮೇತ ತೆರಳಿ, ಅನಧಿಕೃತ ಲೇಔಟ್​ದಾರರಿಗೆ ಬಿಸಿ ಮುಟ್ಟಿಸಿದರು.

    ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ 21 ಜಮೀನುಗಳಲ್ಲಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಅನಧಿಕೃತವಾಗಿ ವಿನ್ಯಾಸ ರಚಿಸಲಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದ ಹುಡಾ ಅಧಿಕಾರಿಗಳು, ಮಾಲೀಕರಿಗೆ 2 ಬಾರಿ ನೋಟಿಸ್ ನೀಡಿದ್ದರು. ವಿನ್ಯಾಸ ಅನುಮೋದನೆ ಪಡೆಯದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

    ರಾಜು ಘಾಟಗೆ ಎಂಬುವರ ರಿ.ನಂ. 141/1ರಲ್ಲಿ 16 ಗುಂಟೆ, ರೇಷ್ಮಾಬಾನು ಪೀರಜಾದೆ ಅವರ 141/5ರಲ್ಲಿ 11 ಗುಂಟೆ, ಶಿವಾನಂದ ಮಾನೆ ಹಾಗೂ ಇತರರ 150/2ರಲ್ಲಿ 2 ಎಕರೆ, ಫಕೀರಪ್ಪ ಮಡ್ಡಣ್ಣವರ ಅವರ 150/2ರ 4 ಎಕರೆ 12 ಗುಂಟೆ, ನೀಲವ್ವ ಗಾಮನಗಟ್ಟಿ, ಇತರರ 151/1ರಲ್ಲಿ 1 ಎಕರೆ 12 ಗುಂಟೆ, ಜೀನತ್ ಬಾವಾಖಾನ ಅವರ 151/2ರಲ್ಲಿ 21 ಗುಂಟೆ, ಬಸಪ್ಪ ಗಾಮನಗಟ್ಟಿ ಅವರ 151/4ರಲ್ಲಿ 1 ಎಕರೆ 15 ಗುಂಟೆ, ಸೋನಾಬಾಯಿ ಘೋರ್ಪಡೆ, ಇತರರು 151/5ರಲ್ಲಿ 3 ಎಕರೆ 1 ಗುಂಟೆ, ಕುಸುಮವ್ವ ಸವದತ್ತಿ ಅವರ 153/2ರ 37 ಗುಂಟೆ ಹಾಗೂ 153/4ರಲ್ಲಿನ 11 ಗುಂಟೆ, ಪುಟ್ಟವ್ವ ದುಂಡಿ ಅವರ 158/2ರಲ್ಲಿನ 32 ಗುಂಟೆಯಲ್ಲಿ ಅನಧಿಕೃತವಾಗಿ ವಿನ್ಯಾಸ ರಚಿಸಿದ್ದರು. ಈ ಎಲ್ಲ ಜಮೀನುಗಳಲ್ಲಿ ಹಾಕಿರುವ ನಿವೇಶನದ ಕಲ್ಲು, ಗಡಿ ಗುರುತು ಕಲ್ಲುಗಳನ್ನು ತೆಗೆದುಹಾಕಲಾಯಿತು. ಅಭಿವೃದ್ಧಿಪಡಿಸಿದ್ದ ಚರಂಡಿ ಹಾಗೂ ರಸ್ತೆಗಳನ್ನು ಜೆಸಿಬಿಯಿಂದ ತೆರವು ಮಾಡಲಾಯಿತು.

    ಇದೇ ಪ್ರದೇಶದಲ್ಲಿ ಇನ್ನು 10 ಅನಧಿಕೃತ ಲೇಔಟ್​ಗಳನ್ನು ಗುರುತಿಸಲಾಗಿದ್ದು, ಗುರುವಾರ ತೆರವು ಮಾಡಲಾಗುವುದು ಎಂದು ಹುಡಾ ಅಧಿಕಾರಿಗಳು ತಿಳಿಸಿದ್ದಾರೆ.

    ಈ ವೇಳೆ ಉಪಸ್ಥಿತರಿದ್ದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಅನಧಿಕೃತ ಲೇಔಟ್​ಗಳನ್ನು ನಿರ್ವಿುಸದಂತೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಹುಡಾದಿಂದ ವಿನ್ಯಾಸ ಅನುಮೋದನೆ ಪಡೆಯದೆ, ನಿಯಮಬಾಹಿರವಾಗಿ ವಿನ್ಯಾಸ ರಚಿಸಿದ್ದರು. ನೋಟಿಸ್ ನೀಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯು ನಗರದಲ್ಲಿ ಇನ್ನೆರಡು ದಿನ ಮುಂದುವರಿಯಲಿದೆ ಎಂದರು.

    ಹುಡಾ ನಿರ್ದೇಶಕ ಸುನೀಲ ಮೋರೆ, ಆಯುಕ್ತ ವಿನಾಯಕ ಪಾಲನಕರ ಹಾಗೂ ಅಧಿಕಾರಿ- ಸಿಬ್ಬಂದಿ ಉಪಸ್ಥಿತರಿದ್ದರು. ಮುಂಜಾಗ್ರತಾ ಕ್ರಮವಾಗಿ ಶಹರ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts