More

    ಅನಧಿಕೃತ ಧಾರ್ವಿುಕ ಕಟ್ಟಡ ತೆರವಿಗೆ ಚರ್ಚೆ

    ಹುಬ್ಬಳ್ಳಿ: ಹು-ಧಾ ಅವಳಿ ನಗರದ ಸಾರ್ವಜನಿಕ ಸ್ಥಳದಲ್ಲಿರುವ ಅನಧಿಕೃತ ಧಾರ್ವಿುಕ ಕಟ್ಟಡಗಳ ತೆರವುಗೊಳಿಸುವ ಕುರಿತು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ನಗರದಲ್ಲಿ ಸೋಮವಾರ ಸಂಜೆ ಸಭೆ ನಡೆಸಿದರು.

    ಪಾಲ್ಗೊಂಡ ಪ್ರಮುಖರು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನೊಳಗೊಂಡ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

    ಸಭೆಯ ಬಳಿಕ ವಿಜಯವಾಣಿ ಜತೆ ಮಾತನಾಡಿದ ಆಯುಕ್ತ ಡಾ. ಸುರೇಶ ಇಟ್ನಾಳ, ಅವಳಿ ನಗರದಲ್ಲಿ ರಸ್ತೆ, ಉದ್ಯಾನ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ನಿರ್ವಿುಸಿರುವ ಧಾರ್ವಿುಕ ಕಟ್ಟಡಗಳ ತೆರವಿಗೆ ಸವೋಚ್ಚ ನ್ಯಾಯಾಲಯದ ನಿರ್ದೇಶನದಂತೆ 2009ರಲ್ಲಿಯೇ ಪಟ್ಟಿ ಮಾಡಲಾಗಿದೆ. ಅದರಂತೆ 209 ಕಟ್ಟಡಗಳಿವೆ. ಆಗ 5 ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಹೊಸದಾಗಿ 7 ಕಟ್ಟಡಗಳು ಸೇರ್ಪಡೆಯಾಗಿವೆ. ಹಂತ ಹಂತವಾಗಿ ಎಲ್ಲ ಕಟ್ಟಡಗಳನ್ನು ತೆರವುಗೊಳಿಸುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದೇವೆ. ಈ ಸಂಬಂಧ ಮತ್ತೆ ಸಾರ್ವಜನಿಕ ಸಭೆ ಕರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ರಸ್ತೆ, ಉದ್ಯಾನ, ಸಾರ್ವಜನಿಕ ಸ್ಥಳದಲ್ಲಿ ನಿರ್ವಿುಸಿರುವ ಧಾರ್ವಿುಕ ಕಟ್ಟಡಗಳಿಗೆ ಪಾಲಿಕೆಯಿಂದ ಹಾಗೂ ಶಾಸಕರ ನಿಧಿಯಿಂದ ಅನುದಾನ ನೀಡಿದ ಉದಾಹರಣೆಗಳಿವೆ. 2009ರ ಬಳಿಕವೂ ಆರ್ಥಿಕ ನೆರವು ನೀಡಲಾಗಿದೆ. ಈಗ ತೆರವುಗೊಳಿಸುತ್ತೇವೆಂದರೆ ಹೇಗೆ? ಎಂದು ಮಾಜಿ ಉಪ ಮೇಯರ್ ವೆಂಕಟೇಶ ಮೇಸ್ತ್ರಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

    ಇಂದಿನ ಸಭೆಯನ್ನು ಮುಂದೂಡಿ. ಧಾರ್ವಿುಕ ಕೇಂದ್ರಗಳ ಸಮಿತಿಯ ಮುಖ್ಯಸ್ಥರನ್ನು ಕರೆದು ಮಾತನಾಡಿ. ಕರೊನಾ ಸೋಂಕು ಭೀತಿ ಇರುವುದರಿಂದ ತೆರವು ಕಾರ್ಯಾಚರಣೆ ನಡೆಸಬೇಡಿ ಎಂದು ಸಾರ್ವಜನಿಕರು ಆಗ್ರಹಿಸಿದರು.

    ಮಾಹಿತಿ ನೀಡಲು ಇಂದಿನ ಸಭೆಯನ್ನು ಕರೆದಿದ್ದೇವೆ. ತಾವಾಗಿಯೇ ತೆರವುಗೊಳಿಸಿದರೆ ಉತ್ತಮ. ನಿರ್ದಿಷ್ಟ ಅನಧಿಕೃತ ಧಾರ್ವಿುಕ ಕೇಂದ್ರಗಳ ಸಮಿತಿ ಪದಾಧಿಕಾರಿಗಳನ್ನು ಕರೆದು ಮಾತನಾಡುತ್ತೇವೆ. ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂದು ಆಯುಕ್ತ ಡಾ. ಇಟ್ನಾಳ ಹೇಳಿದರು.

    ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಅನ್ವರ್ ಮುಧೋಳ, ಪಾಲಿಕೆ ಮಾಜಿ ಸದಸ್ಯರಾದ ಗಣೇಶ ಟಗರಗುಂಟಿ, ಅಲ್ತಾಫ್ ಕಿತ್ತೂರ, ಬಶೀರ ಅಹ್ಮದ್ ಗುಡಮಾಲ, ಕನ್ನಡ ಪರ

    ಸಂಘಟನೆಯ ಸಂಜೀವ ದುಮ್ಮಕನಾಳ, ಗುರುನಾಥ ಉಳ್ಳಿಕಾಶಿ, ಇತರರು ಪಾಲ್ಗೊಂಡಿದ್ದರು. ಡಿಸಿಪಿ ಪಿ. ಕೃಷ್ಣಕಾಂತ, ಎಸಿಪಿ ಎಂ.ವಿ. ಮಲ್ಲಾಪುರ, ಬಿಆರ್​ಟಿಎಸ್ ಅಧಿಕಾರಿ ಬಸವರಾಜ ಕೇರಿ ಇದ್ದರು.

    ಕರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಜನ ಸೇರುವ ಸಭೆ, ಸಮಾರಂಭ ನಡೆಸಕೂಡದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಈ ಸಭೆಯಲ್ಲಿ 100ಕ್ಕೂ ಹೆಚ್ಚು ಜನ ಹಾಜರಿದ್ದರು. ಮೇಲಾಗಿ ಪಾಲಿಕೆ ಕಚೇರಿ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts