More

    ಅನಂತಪುರದಲ್ಲಿ ಕಸ ವಿಲೇವಾರಿ ಸಮಸ್ಯೆ

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಕಸ ವಿಲೇವಾರಿ ಸಮಸ್ಯೆಯಿಂದಾಗಿ ಗ್ರಾಮದ ಪ್ರಮುಖ ಸ್ಥಳ ಮತ್ತು ಬಡಾವಣೆಯ ಮುಖ್ಯರಸ್ತೆಗಳ ಪಕ್ಕದಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು, ಜನರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಅನಂತಪುರ ಗ್ರಾಮ ಒಟ್ಟು -8,120 ಜನಸಂಖ್ಯೆ ಹೊಂದಿದೆ. ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರ ನಿರ್ಲಕ್ಷ್ಯದಿಂದಾಗಿ ಗ್ರಾಮದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಗ್ರಾಮದ ಬಹುತೇಕ ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ರಾರಾಜಿಸುತ್ತಿದೆ.

    ಮಕ್ಕಳಿಗೂ ತಪ್ಪದ ಸಂಕಟ: ಗ್ರಾಮದ ಎಸ್‌ಸಿ, ಕಂಬಾರ ಬಡಾವಣೆಯ ಮುಖ್ಯ ರಸ್ತೆ, ನಾಡ ಕಚೇರಿ ತಡೆಗೊಡೆ ಪಕ್ಕ, ಸೋಮವಾರ ಪೇಟೆ ಸೇರಿದಂತೆ ಬಹುತೇಕ ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ಬಿದ್ದಿದ್ದು, ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಎಸ್‌ಸಿ ಬಡಾವಣೆಯ ರಸ್ತೆ ಪಕ್ಕ ಬಿದ್ದ ಕಸದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗಬ್ಬು ವಾಸನೆಯಲ್ಲಿಯೇ ಕುಳಿತು ಕಲಿಯುವಂತಾಗಿದೆ.

    ಇದ್ದೂ ಇಲ್ಲದಂತಾದ ವಾಹನ: ಕೆಲ ದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು, ಜನರು ತಂದು ಹಾಕಿರುವ ಕಸ ಮಳೆಯಲ್ಲಿ ನೆನೆದು ರಸ್ತೆಯ ತುಂಬಾ ಹರಡಿಕೊಂಡಿದೆ. ಇದರಿಂದಾಗಿ ಗ್ರಾಮದ ಕೆಲ ರಸ್ತೆಗಳಲ್ಲಿ ಮಳೆ ಬಂದ ನಂತರ ನಡೆದಾಡುವುದೇ ದುಸ್ತರವಾಗಿದೆ. ಗ್ರಾಮದಲ್ಲಿ ಕಸ ಸಂಗ್ರಹಣೆಗಾಗಿ ವಾಹನ ನೀಡಲಾಗಿದೆ. ಆದರೆ, ಕಸ ಸಂಗ್ರಹಕ್ಕೆ ವಾಹನ ಬರುತ್ತಿಲ್ಲ. ಇದರಿಂದಾಗಿ ಗ್ರಾಮದ ಜನರು ಕಸವನ್ನು ರಸ್ತೆಯ ಇಕ್ಕೆಲಗಳಲ್ಲಿ ತಂದು ಎಸೆಯುತ್ತಿದ್ದಾರೆ.

    ಗ್ರಾಮದ ಜನರು ತಂದು ಎಸೆಯುತ್ತಿರುವ ಕಸದಿಂದ ದುರ್ನಾತ ಬರುತ್ತಿದೆ. ನಮಗೆ ಪಾಠ ಕೇಳಲು ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮಕ್ಕೆ ಮುಂದಾಗಲಿ.
    |ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅನಂತಪುರ

    ಕಸವಿಲೇವಾರಿ ವಾಹನಕ್ಕೆ ಚಾಲಕ ಇಲ್ಲದ ಕಾರಣ ಸಮಸ್ಯೆಯಾಗಿದೆ. ಗ್ರಾಪಂ ಸದಸ್ಯರ ಸಭೆ ಕರೆದು ಕಸ ಸಂಗ್ರಹಿಸುವ ವಾಹನಕ್ಕೆ ಚಾಲಕನನ್ನು ನೇಮಿಸಲಾಗುವುದು.
    |ಕುಮಾರ ಹಬಗೊಂಡೆ ಗ್ರಾಪಂ ಅಧ್ಯಕ್ಷ ಅನಂತಪುರ

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪಿಡಿಒ, ಸದಸ್ಯರ ಸಭೆ ನಡೆಸಿ ಕಸ ಸಂಗ್ರಹ ಘಟಕ ನಿರ್ಮಿಸಿ ಗ್ರಾಮದಲ್ಲಿ ಸಂಗ್ರಹಗೊಂಡ ಕಸ ವಿಲೇವಾರಿ ಮಾಡಲು ಸೂಚಿಸಲಾಗುವುದು.
    | ಶೇಖರ ಕರಿಬಸಪ್ಪಗೋಳ ತಾಲೂಕು ಪಂಚಾಯಿತಿ ಇಒ ಅಥಣಿ

    | ಮೋಹನ ಪಾಟಣಕರ ಅಥಣಿ ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts