More

    ಅಧ್ವಾನವಾಗಿರುವ ರಸ್ತೆ ಸರಿಪಡಿಸಿ

    ಹನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಡಿ.12ರಂದು ಹನೂರು ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸೂಚಿಸಿದರು.


    ಅಗತ್ಯ ಸಿದ್ಧತೆ ಕುರಿತು ಭಾನುವಾರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿ.8ರೊಳಗೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.


    ಕ್ರಮವಹಿಸುವಂತೆ ಸೂಚನೆ: ಸತ್ತೇಗಾಲ-ಧನಗೆರೆ, ಹನೂರಿನಿಂದ ಮ.ಬೆಟ್ಟ ಹಾಗೂ ಸಾಲೂರು ಮಠಕ್ಕೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಅಧ್ವಾನಗೊಂಡಿದೆ. ಇದರಿಂದ ಸಾರ್ವಜನಿಕರು ಸಂಚರಿಸಲು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಅಗತ್ಯ ಕ್ರಮವಹಿಸಿ ದುರಸ್ತಿಪಡಿಸಬೇಕು. ಜತೆಗೆ ಮ.ಬೆಟ್ಟದ ಹೆಲಿಪ್ಯಾಡ್ ರಸ್ತೆಯನ್ನೂ ಸರಿಪಡಿಸಬೇಕು ಎಂದು ಪಿಡಬ್ಯುಡಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.


    ಇನ್ನು ಮ.ಬೆಟ್ಟದಲ್ಲಿ ಮುಡಿಸೇವೆ ನೀಡುವ ಸ್ಥಳ ಅನೈರ್ಮಲ್ಯದಿಂದ ಕೂಡಿದೆ. ಹಾಗಾಗಿ ಸ್ವಚ್ಛತೆ ಕಾಪಾಡಬೇಕು. ಯುಜಿಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ದಾಸೋಹ ಭವನದಲ್ಲಿ ಊಟ ಮಾಡುವ ಸ್ಥಳದಲ್ಲಿ ದಾಸ್ತಾನು ಮಾಡಿರುವ ಗ್ಯಾಸ್ ಸಿಲಿಂಡರ್‌ಗಳನ್ನು ತೆರೆವುಗೊಳಿಸಬೇಕು. ಜತೆಗೆ ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


    ಶೀಘ್ರ ಇತ್ಯರ್ಥಪಡಿಸಿ: ತಾಳುಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸೇವೆಗೆ ಲಭ್ಯವಾಗಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಡಿವೈಎಸ್ಪಿ ಚರ್ಚಿಸಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಬೇಕು. ಈ ಕೆಲಸ ಆದಷ್ಟು ಬೇಗ ಅಗಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಖಡಕ್ ಸೂಚನೆ ನೀಡಿದರು.


    ನಾನಿರೋ ತನಕ ಆಗೋದಕ್ಕೆ ಬಿಡಲ್ಲ: ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಸರ್ಕಾರ ರೂಪಿಸಲು ನಿರ್ಧರಿಸುವ ಯೋಜನೆಯ ಬಗ್ಗೆ ನನ್ನ ವಿರೋಧ ಇದೆ. ಹಾಗಾಗಿ ಈ ಯೋಜನೆಯನ್ನು ಕೈ ಬಿಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಅಲ್ಲದೆ ಈ ಬಗ್ಗೆ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಆದ್ದರಿಂದ ನಾನು ಅಧಿಕಾರದಲ್ಲಿ ಇರುವ ತನಕ ಈ ಯೋಜನೆಯನ್ನು ಜಾರಿಗೆ ತರಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ವಿಜಯವಾಣಿಗೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದರು.


    ಸಭೆಗೂ ಮುನ್ನ ಸಚಿವರು ಅಂತರಗಂಗೆ, ಮುಡಿಸೇವೆ ನೀಡುವ ಸ್ಥಳ, ಹೆಲಿಪ್ಯಾಡ್, ದಾಸೋಹ ಭವನ ಹಾಗೂ ಪ್ರಗತಿಯಲ್ಲಿರುವ 108 ಅಡಿ ಎತ್ತರದ ಶ್ರೀ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಬಳಿಕ ಶಾಸಕ ಆರ್.ನರೇಂದ್ರ ಜತೆಗೆ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆದರು.

    8 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ
    ಮ.ಬೆಟ್ಟ ತಪ್ಪಲಿನ 8 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ. ಇದರಿಂದ ಇಲ್ಲಿನ ಜನರು ತುಂಬ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ವಿದ್ಯುತ್ ಸೌಕರ್ಯ ಕಲ್ಪಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಅರಣ್ಯ ಇಲಾಖೆ ಇದೀಗ ಅನುಮತಿ ದೊರಕಿದೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು.


    ಇದರಿಂದ 8 ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ ಸಿಕ್ಕಿದಂತಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಕಾರ್ಯಕ್ಕೆ ಚಾಲನೆ ನೀಡುವಂತೆ ಸಚಿವ ವಿ. ಸೋಮಣ್ಣ ಅವರಲ್ಲಿ ಮನವಿ ಮಾಡಿದರು.
    ಗಮನಹರಿಸುವಂತೆ ಮನವಿ: ತಾಲೂಕು ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಲ ಜೀವನ ಮಿಷನ್ ಅನುಷ್ಠಾನಗೊಂಡಿದೆ. ಹಾಗಾಗಿ ಸಿಸಿ ರಸ್ತೆಯನ್ನು ಅಗೆದು ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ ಜವಾಬ್ದಾರಿ ಹೊತ್ತವರು ಸರಿಯಾಗಿ ಸಿಮೆಂಟ್‌ನಿಂದ ತೇಪೆ ಹಾಕುತ್ತಿಲ್ಲ. ಇದರಿಂದ ರಸ್ತೆಯೂ ಹಾಳಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕ ಅರ್.ನರೇಂದ್ರ ಸಚಿವರಲ್ಲಿ ಮನವಿ ಮಾಡಿದರು.


    ಜಿಲ್ಲಾಧಿಕಾರಿ ಡಿ.ಎಸ್ ರಮೇಶ್, ಜಿಪಂ ಸಿಇಒ ಕೆ.ಎಂ ಗಾಯತ್ರಿ, ಎಸ್ಪಿ ಶಿವಕುಮಾರ್, ಡಿವೈಎಸ್ಪಿ ನಾಗರಾಜು, ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪಕಾರ್ಯದರ್ಶಿ ಬಸವರಾಜು, ಡಿಎಚ್‌ಒ ಡಾ.ವಿಶ್ವೇಶ್ವರಯ್ಯ, ತಹಸೀಲ್ದಾರ್ ಆನಂದಯ್ಯ, ತಾಪಂ ಇಒ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಮೂರ್ತಿ, ವಿವಿಧ ಇಲಾಖೆಯ ಇಂಜನಿಯರ್‌ಗಳಾದ ಸದಾನಂದಮೂರ್ತಿ, ಶಂಕರ್, ಗಂಗಾಧರ್, ಶ್ರೀಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts