More

    ಅಧಿವೇಶನದಲ್ಲಿ ಸಂತ್ರಸ್ತರ ಸಮಸ್ಯೆಗಳು ಚರ್ಚಿಸಿ

    ಬಾಗಲಕೋಟೆ: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬಾಗಲಕೋಟೆ ಸಂತ್ರಸ್ತರ ಬಗ್ಗೆ ಚರ್ಚೆಯಾಗಬೇಕು. ಬಾಗಲಕೋಟೆ ಸಂತ್ರಸ್ತರಿಗೆ ರಾಷ್ಟ್ರೀಯ ಪುನರ್‌ವಸತಿ ನೀತಿಯ ಅನ್ವಯ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಆಗ್ರಹಿಸಿದರು.
    ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗಾಗಿ ಸರ್ಕಾರ ಈವರೆಗೆ ಕಾರ್ಯಕಾರಿ ಆದೇಶಗಳ ಮೂಲಕವೇ ಪರಿಹಾರ ನೀಡುತ್ತಲೇ ಬಂದಿದೆ. ಸದ್ಯ ಯೋಜನೆಯಡಿ ನಡೆಯುತ್ತಿರುವ ನೀರಾವರಿ ಯೋಜನೆ ಮತ್ತು ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗಳು ತೃಪ್ತಿದಾಯಕವಾಗಿ ನಡೆಯುತ್ತಿಲ್ಲ. ಆಲಮಟ್ಟಿ ಅಣೆಕಟ್ಟು ಎತ್ತರವನ್ನು ೫೨೪ ಮೀ.ಗೆ ಏರಿಸುವುದರಿಂದ ಮುಳುಗಡೆಯಾಗುವ ಹಳ್ಳಿಗಳ ಮತ್ತು ಭಾಗಶಃ ಬಾಗಲಕೋಟೆಯ ಪ್ರದೇಶಗಳ ಜನರಿಗೆ ರಾಷ್ಟ್ರೀಯ ಪುನರ್ ವಸತಿ ನೀತಿಯ ಪ್ರಕಾರ ಸೌಲಭ್ಯ ಕಲ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
    ಎತ್ತಿನ ಹೊಳೆ ಯೋಜನೆಯಲ್ಲಿ ಅನುಸರಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಗಳಲ್ಲಿ ಜಮೀನು ಕಳೆದುಕೊಳ್ಳುವ ಸಂತ್ರಸ್ತರಿಗೆ ಪರ್ಯಾಯವಾಗಿ ಜಮೀನು ಹಂಚಲು ಭೂ ಬ್ಯಾಂಕ್ ಸ್ಥಾಪನೆಯಾಗಬೇಕು. ಬೆಳಗಾವಿ ಅಧಿವೇಶನದಲ್ಲಿ ಸಂತ್ರಸ್ತರ ಬೇಡಿಕೆ, ಬದುಕು, ಸಮಸ್ಯೆ ಕುರಿತು ಅರ್ಥಪೂರ್ಣ ಪಕ್ಷಾತೀತ ಚರ್ಚೆ ಮಾಡಬೇಕು. ೨೦೧೪ ರಲ್ಲಿ ಸರ್ಕಾರ ಘೋಷಿಸಿದ ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಅನುದಾನ ಘೋಷಣೆ ಮಾಡಬೇಕು. ನೇಕಾರ ಸಮ್ಮಾನ ಯೋಜನೆಯನ್ನು ವಿದ್ಯುತ್ ಮಗ್ಗ ನೇಕಾರರ ಜೊತೆಗೆ ಅದರ ಪೂರಕ ವೃತ್ತಿ ಅವಲಂಬಿತರಿಗೂ ಅನ್ವಯಿಸುವಂತಾಗಬೇಕು ಎಂದು ಒತ್ತಾಯಿಸಿದರು.
    ಮುಖಂಡ ನಾಗರಾಜ ಹೊಂಗಲ್ಲ ಮಾತನಾಡಿ, ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ತರವಲ್ಲ. ದಕ್ಷಿಣ ಕರ್ನಾಟಕದ ಎತ್ತಿಹೊಳೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಭೂಮಿಯನ್ನೇ ನೀಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಧನ ಮಾತ್ರ ನೀಡಲಾಗುತ್ತಿದೆ. ಇದೇ ರೀತಿ ಅನೇಕ ವಿಷಯಗಳಲ್ಲಿ ಉ-ಕ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸಂತ್ರಸ್ತರಲ್ಲಿ ಸರ್ಕಾರ ಈ ರೀತಿ ತಾರತಮ್ಯ ಮಾಡುವುದು ದುರಂತ ಸಂಗತಿ. ಇದಕ್ಕೆಲ್ಲ ರಾಷ್ಟ್ರೀಯ ಪುನರ್ ವಸತಿ ನೀತಿ ಮಾತ್ರ ಪರಿಹಾರ ಎಂದರು.
    ಎಎಪಿ ಉಪಾಧ್ಯಕ್ಷ ಕೆ.ಎಂ. ಕಲಾದಗಿ, ಮುಖಂಡರಾದ ಮಾಧವಿ ರಾಠೋಡ, ವಿಠ್ಠಲ ಲಮಾಣಿ, ಸಲೀಂ ಜಮಾದಾರ, ಮಂಜು ಪವಾರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts