More

    ಅಧಿಕಾರಿಗಳ ಮುಂದೆ ಹಾಡಿಜನರ ಗೋಳು

    ಎಚ್.ಡಿ.ಕೋಟೆ: ಬಹುತೇಕ ಹಾಡಿಗಳಲ್ಲಿ ಕುಡಿಯಲು ನೀರಿಲ್ಲ. ಕರೆಂಟ್ ಇಲ್ಲ. ಚರಂಡಿ ವ್ಯವಸ್ಥೆಯೂ ಇಲ್ಲ. ಜೋತು ಬಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ವಾಸಿಸಲು ಯೋಗ್ಯವಾದ ವಾಸದ ಮನೆ ಇಲ್ಲ ಸೇರಿದಂತೆ ಹಲವು ಸಮಸ್ಯೆಗಳನ್ನು ಹಾಡಿ ಜನರು ಅಧಿಕಾರಿಗಳು ತೋಡಿಕೊಂಡರು.

    ತಾಲೂಕಿನ ಕೇರಳ ಗಡಿ ಭಾಗವಾದ ಗಿರಿಜನರೇ ಹೆಚ್ಚು ವಾಸ ಮಾಡುತ್ತಿರುವ ಉದ್ಬೂರು ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ತಹಸೀಲ್ದಾರ್ ರತ್ನಾಂಬಿಕಾ ಅಧ್ಯಕ್ಷತೆಯಲ್ಲಿ ನಡೆಯಿತು.

    ಉದ್ಬೂರು ಹಾಡಿಯ ಲೋಹಿತ್ ಮಾತನಾಡಿ, ಸೀಗೂರು, ಬಾವಿ ಕೆರೆ ಹಾಡಿಗಳಲ್ಲಿ ಕುಡಿಯುವ ನೀರಿಗೆ ಕಬಿನಿ ಹಿನ್ನೀರಿನ ಹೊಳೆಗೆ ಹೋಗಬೇಕು. ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಇದ್ದು ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ ನೀರಿನ ಬವಣೆ ತಪ್ಪಿಸಬೇಕು. ಜತೆಗೆ ಹಾಡಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಚೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಸರಿಯಾದ ಮಾಹಿತಿ ನೀಡುವುದಿಲ್ಲ ಎಂದು ದೂರಿದರು. ಲೈನ್‌ಮನ್ ಕೃಷ್ಣಮೂರ್ತಿ ಹಾಡಿಯ ಜನರಿಗೆ ತುಂಬ ತೊಂದರೆ ನೀಡುತ್ತಿದ್ದಾರೆ . ದಯಮಾಡಿ ಅವರನ್ನು ಬೇರೆಕಡೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.

    ಎಸ್ಸಿ,ಎಸ್ಟಿ ಸಮುದಾಯದವರಿಗೆ ತಿಂಗಳಿಗೆ 75 ಯೂನಿಟ್ವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹೇಳಿದೆ. ಆದರೆ ಇಲ್ಲಿನ ಅಧಿಕಾರಿಗಳನ್ನು ಕೇಳಿದರೆ ಆ ಬಗ್ಗೆ ಗೊತ್ತಿಲ್ಲ. ಬಿಲ್ ಪಾವತಿಸಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದುದೂರಿದರು.

    ತಹಸೀಲ್ದಾರ್ ರತ್ನಾಂಬಿಕಾ ಮಾತನಾಡಿ, ಸೀಗೂರು ಹಾಡಿ ಹಾಗೂ ಬಾವಿ ಕೆರೆ ಹಾಡಿಗೆ ಖುದ್ದಾಗಿ ನಾನೇ ಭೇಟಿ ನೀಡಿ ಸಮಸ್ಯೆ ಆಲಿಸಿ, ಹಾಡಿಯಲ್ಲಿ ಬೋರ್‌ವೆಲ್ ಕೊರೆಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕಾಡಾನೆ ಹಾವಳಿ ತಡೆಗೆ ಆನೆ ಕಂದಕ ತೋಡುವಂತೆ ಸೂಚಿಸಲಾಗಿದೆ ಎಂದರು.

    ಇಓ ರಾಜೇಶ್ ಜೆರಾಲ್ಡ್ ಮಾತನಾಡಿ, ಸೆಸ್ಕ್ ಅಧಿಕಾರಿಗಳ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರೆ ಎಲ್ಲರೂ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ನೀವು ಆ ಕೆಲಸ ಮಾಡಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಸಿಬ್ಬಂದಿ ಮೂಲಕ ಮಾಹಿತಿ ತಲುಪಿಸುವ ಕೆಲಸ ಮಾಡಿ ಎಂದು ಸೂಚಿಸಿದರು.

    ಹಾಡಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಉತ್ತೀರ್ಣರಾದ ಸಾಕಷ್ಟು ವಿದ್ಯಾವಂತರಿದ್ದು, ಅವರಿಗೆ ಅರಣ್ಯ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸಲು ಕ್ರಮ ವಹಿಸಬೇಕು ಎಂದು ಸೀಗೂರು ಹಾಡಿಯ ಶಾರದಾ ಮನವಿ ಮಾಡಿದರು. ಉದ್ಬೂರು ಹಾಡಿಯ ಸಿದ್ದರಾಜು ಮಾತನಾಡಿ, ಗ್ರಾಮದಲ್ಲಿ ಸ್ಮಶಾನಕ್ಕೆ ಸಂಬಂಧಿಸಿದ ದಾಖಲೆ ಇಲ್ಲ. ಸರ್ವೇ ಮಾಡಿ ಜಾಗ ಗುರುತು ಮಾಡಿಲ್ಲ. ಹೀಗಾಗಿ ಶವಸಂಸ್ಕಾರಕ್ಕೆ ತೊಂದರೆ ಆಗಿದೆ ಎಂದು ದೂರಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ ಈಗಾಗಲೇ ಸ್ಮಶಾನ ಜಾಗವನ್ನು ಸರ್ವೇ ಮಾಡಿ ಗುರುತು ಮಾಡಿದ್ದು, ಆರ್‌ಟಿಸಿ ಕಾಲಂಗೆ ಸೇರಿಸಬೇಕಾಗಿದೆ. ಆರ್‌ಟಿಸಿ ಬಂದ ನಂತರ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.

    ಬಸ್ ಘಟಕ ವ್ಯವಸ್ಥಾಪಕ ತ್ಯಾಗರಾಜ್ ಮಾತನಾಡಿ, ಕಾರ್ಮಿಕ ಇಲಾಖೆ ಹಾಗೂ ಸಾರಿಗೆ ಸಂಸ್ಥೆ ವತಿಯಿಂದ ಕಾರ್ಮಿಕರಿಗೆ 45 ಕಿ.ಮೀ. ವರೆಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ನೋಂದಾಯಿತ ಕಾರ್ಮಿಕರು ಆನ್‌ಲೈನ್ ಮೂಲಕ ದಾಖಲಾತಿ ಸಲ್ಲಿಸಿ ಉಚಿತ ಬಸ್‌ಪಾಸ್ ಪಡೆಯಲು ತಿಳಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts