More

    ಅಧಿಕಾರಿಗಳ ಬೆವರಿಳಿಸಿದ ಶಾಸಕ

    ಹನೂರು: ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ತಿಳಿಸಿದ್ದೇನೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಮೊದಲು ಸರಿಯಾಗಿ ಕೆಲಸ ಮಾಡಿ. ಜನರ ಕಷ್ಟಗಳಿಗೆ ಸ್ಪಂದಿಸಿ ಎಂದು ಶಾಸಕ ಆರ್.ನರೇಂದ್ರ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಗರಂ ಆದರು.

    ತಾಲೂಕಿನ ಕೆ.ಎಸ್. ದೊಡ್ಡಿ ಗ್ರಾಮದ ಮಿಣ್ಯಂ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹೂಗ್ಯಂ ಗ್ರಾಮದ ಸರ್ವೇ ನಂ.239 ರಲ್ಲಿ ಸುಮಾರು 500ಕ್ಕೂ ಹೆಚ್ಚು ರೈತರು 2700 ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಜಮೀನಿನ ಮಿತಿಯಲ್ಲಿ ವ್ಯತ್ಯಾಸವಿದೆ. ಹಾಗಾಗಿ ಅಳತೆ ಕಾರ್ಯ ನಡೆಸಿ ತಿದ್ದುಪಡಿ ಮಾಡಿ ಸಾಗುವಳಿ ನೀಡಬೇಕಿದೆ. ಹಾಗೆಯೇ ನಾಗಣ್ಣನಗರದಲ್ಲಿ ಬಹುತೇಕ ಜಮೀನುಗಳಲ್ಲಿ ಸ್ವಾಧೀನದಲ್ಲಿದ್ದುಕೊಂಡು ಕೃಷಿ ಮಾಡುತ್ತಿರುವುದು ಒಬ್ಬರಾದರೆ ಖಾತೆ ಇರುವುದು ಮತ್ತೊಬ್ಬರ ಹೆಸರಿನಲ್ಲಿ. ಇದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ತಿದ್ದುಪಡಿ ಆಗಬೇಕಿದ್ದು, ಖಾತೆ ನೀಡಬೇಕಿದೆ. ಜತೆಗೆ ಎಲ್‌ಪಿಎಸ್ ಪ್ರಾಜೆಕ್ಟ್‌ನಲ್ಲಿ 20 ವರ್ಷಗಳ ಹಿಂದೆ ರೈತರಿಗೆ ಅರಣ್ಯ ಇಲಾಖೆಯಿಂದ ಕೃಷಿ ಮಾಡಲು ಜಮೀನು ನೀಡಲಾಗಿದೆ. ಇದುವರೆಗೂ ಆರ್‌ಟಿಸಿ ನೀಡಿಲ್ಲ. ಇದರಿಂದ ರೈತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

    ಕಳೆದ 6 ವರ್ಷಗಳಿಂದ ಆಗಾಗ್ಗೆ ಸಭೆ ಕರೆದು ತಿಳಿಸುತ್ತಾ ಬಂದಿದ್ದೇನೆ. ಆದರೆ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಇತ್ತ ಕಲ್ಪಿಸುವ ಸಲುವಾಗಿ ನಿರ್ಮಿಸಿರುವ ಸಿಸಿ ರಸ್ತೆಯನ್ನು ಅಗೆದು ಕಾಮಗಾರಿ ಮುಗಿದ ಬಳಿಕ ಮಣ್ಣು ತುಂಬಿ ಸಿಮೆಂಟ್‌ನಿಂದ ತೇಪೆ ಹಾಕಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕರು ಕಿಡಿ ಕಾರಿದರು.

    ಗ್ರಾಪಂ.ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ಮಹದೇವ, ಸದಸ್ಯರಾದ ಪ್ರಭುಸ್ವಾಮಿ, ಮಾದರಾಜು, ರಾಮಕೃಷ್ಣ, ಮಹೇಶ್ವರಿ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಡಿಎಚ್‌ಒ ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ತಾಲೂಕು ನಿರ್ದೇಶಕ ನವೀನ್ ಮಠದ್, ತಹಸೀಲ್ದಾರ್ ಆನಂದಯ್ಯ, ತಾಪಂ ಇಒ ಶ್ರೀನಿವಾಸ್, ಬಿಇಒ ಶಿವರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ, ಕೃಷಿ ಅಧಿಕಾರಿ ವೆಂಕಟನಾಯಕ, ಪಿಡಿಒ ಮಾದೇಶ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts