More

    ಅಧಿಕಾರಿಗಳ ಅದೇ ರಾಗ-ಹಾಡು

    ಹುಬ್ಬಳ್ಳಿ: ಉಣಕಲ್ಲ ಕೆರೆ ಹಾಗೂ ತೋಳನಕೆರೆ ಸೇರುವ ಕೊಳಚೆಗೆ ವರ್ಷವಾದರೂ ಇನ್ನೂ ಮುಕ್ತಿ ಸಿಕ್ಕಿಲ್ಲ! ಇನ್ನೆರಡು ತಿಂಗಳಲ್ಲಿ ಕೊಳಚೆ ಸೇರುವುದನ್ನು ಬಂದ್ ಮಾಡುತ್ತೇವೆ ಎಂದು ಕಳೆದೊಂದು ವರ್ಷದಿಂದ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಹೇಳಿದರು.
    ಇಲ್ಲಿಯ ಕನ್ನಡ ಭವನದಲ್ಲಿ ಬುಧವಾರ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲೂ ಕೆರೆಗಳ ಸ್ವಚ್ಛತೆ ಬಗ್ಗೆ ಚರ್ಚೆಯಾಯಿತು. ಒಳಚರಂಡಿ ಕೊಳಚೆ ನಿಂತಿಲ್ಲ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಂಡರು.
    ಉಣಕಲ್ಲ ಕೆರೆ ಪಕ್ಕ ವೆಟ್​ವೆಲ್ ನಿಮಾಣ ಪೂರ್ಣವಾಗಿಲ್ಲ. ಸಂಗೊಳ್ಳಿ ರಾಯಣ್ಣ ನಗರ ಬಳಿ ಪೈಪ್ ತುಂಡಾಗಿ ಕೊಳಚೆ ಬರುತ್ತಿದೆ. ಅತಿ ಶೀಘ್ರದಲ್ಲಿ ಕೊಳಚೆ ಬಂದ್ ಮಾಡಲಾಗುವುದು ಎಂದು ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್ ಹೇಳಿದರು.
    ಕೋಟ್ಯಂತರ ರೂಪಾಯಿಗಳನ್ನು ಕೆರೆಗೆ ಖರ್ಚು ಮಾಡಲಾಗುತ್ತಿದೆ. ಸಮಸ್ಯೆ ಇದ್ದಲ್ಲಿ ಕರೆದುಕೊಂಡು ಹೋಗಿ ಸರಿಯಾಗಿ ಹೇಳುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು.
    ತೋಳನಕೆರೆಗೆ ರಾಮನಗರದಿಂದ ಕೊಳಚೆ ನೀರು ಬರುತ್ತದೆ. ಅದನ್ನು ಸಹ ತಡೆಯಬೇಕು. ಕೊಳಚೆ ಸಂಸ್ಕರಣ ಘಟಕದ ಜತೆಗೆ ಅದನ್ನು ಡೈವರ್ಟ್ ಮಾಡಿ ಎಂದು ಹೇಳಿಹೇಳಿ ಸಾಕಾಗಿದೆ. ಪರಿಹಾರಕ್ಕೆ ಇನ್ನೂ ಎಷ್ಟು ದಿನ ಬೇಕು? ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
    ವಿವಿಧ ಯೋಜನೆಗಳ ಅಡಿ ಮಹಾನಗರ ಪಾಲಿಕೆ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾಹಿತಿ ನೀಡಿದರು. ಇ-ಟಾಯ್ಲೆಟ್ ಪರಿಕಲ್ಪನೆ ಬೇಡ. ಅದನ್ನು ಯಾರೂ ಬಳಕೆ ಮಾಡುತ್ತಿಲ್ಲ. ಸುಲಭ ಶೌಚಗೃಹ ನಿರ್ವಿುಸಿ ಎಂದು ಶೆಟ್ಟರ್ ಸಲಹೆ ನೀಡಿದರು.
    ಆರ್ಯಭಟ ಟೆಕ್ ಪಾರ್ಕ್: ನವನಗರ ಬಳಿಯ ಆರ್ಯಭಟ ಟೆಕ್ ಪಾರ್ಕ್ ನಲ್ಲಿ 25 ಎಕರೆ ಪೈಕಿ 10 ಎಕರೆ ಉಳಿದಿದೆ. ಏಳೆಂಟು ವರ್ಷದಿಂದ ಆಸಕ್ತ ಐಟಿ ಕಂಪನಿಗಳಿಗೆ ಹಂಚಿಕೆ ಪ್ರಕ್ರಿಯೆ ಆಗಿಲ್ಲ. ಒಂದು ಎಕರೆಗೆ 55 ಲಕ್ಷ ರೂ. ನಿಗದಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶೆಟ್ಟರ್ ಗಮನ ಸೆಳೆದರು.
    ಈ ಕುರಿತ ಕಡತ ಹಣಕಾಸು ಇಲಾಖೆಗೆ ಹೋಗಿದೆ. 2016ರಿಂದ ಬಾಕಿ ಇದೆ. ಆಕ್ಶನ್ (ಟೆಂಡರ್) ಮಾಡಿ ಏಕೆ ಹಂಚಿಕೆ ಮಾಡಬಾರದು ಎಂದು ಕೇಳಿದ್ದಾರೆ ಎಂದು ಆಯುಕ್ತರು ತಿಳಿಸಿದರು. ನಾಲ್ಕೈದು ವರ್ಷಗಳಿಂದ ಆಕಾಂಕ್ಷಿಗಳು ಕಾಯುತ್ತಿದ್ದಾರೆ. ಜಾಗ ಸಿಗದಿದ್ದರೆ ಅವರು ವಾಪಸ್ ಹೋಗುತ್ತಾರೆ. ಹಣಕಾಸು ಇಲಾಖೆಗೆ ಏಕೆ ಕಳಿಸಿದ್ದೀರಿ? ಶೀಘ್ರ ಇತ್ಯರ್ಥಪಡಿಸಿ ಹಂಚಿಕೆ ಮಾಡಿ ಎಂದು ಶೆಟ್ಟರ್ ಹೇಳಿದರು. ಇದಕ್ಕೆ ಭೈರತಿ ಅವರು ಧ್ವನಿಗೂಡಿಸಿದರು.
    ಜಿಲ್ಲಾ ಉಸ್ತುವಾರಿ ಮಂತ್ರಿ ಅಸಮಾಧಾನ: ವಿವಿಧ ಇಲಾಖೆಗಳ ಮಧ್ಯೆ ಪರಸ್ಪರ ಸಹಕಾರ ಇರದೇ ರಸ್ತೆ ಮಾಡಿದ ಮಾರನೇ ದಿನವೇ ಇನ್ನೊಂದು ಇಲಾಖೆ ಅಗೆಯಲು ನಿಲ್ಲುತ್ತದೆ. ಒಬ್ಬರ ಮಾತು ಇನ್ನೊಬ್ಬರು ಕೇಳುವುದಿಲ್ಲ ಎಂದು ಸಚಿವ ಶೆಟ್ಟರ್ ಹಾಗೂ ಶಾಸಕ ಅಬ್ಬಯ್ಯ ಸಚಿವರ ಗಮನಕ್ಕೆ ತಂದರು. ಬೆಂಗಳೂರಲ್ಲಿ ರಸ್ತೆ ಕೆಲಸ ನಡೆದದ್ದೇ ಗೊತ್ತಾಗುವುದಿಲ್ಲ. ಆದರೆ, ಇಲ್ಲಿ ನೆಲ ಅಗೆದು ಮಣ್ಣು ಅಲ್ಲೇ ಬಿಡುತ್ತಾರೆ. ಐದಾರು ತಿಂಗಳಾದರೂ ಅಲ್ಲೇ ಇರುತ್ತದೆ. ಇದರಿಂದ ಸಾರ್ವಜನಿಕರು ತೊಂದರೆ ಎದುರಿಸುತ್ತಾರೆ. ದಾಜಿಬಾನಪೇಟೆ, ದುರ್ಗದಬೈಲ್ ಮುಂತಾದೆಡೆ ಮಳೆ ಬಂದಾಗ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಭೆ ನಡೆಸಬೇಕು. ಪರಸ್ಪರ ಸಮನ್ವಯ ಸಾಧಿಸಬೇಕು ಎಂದು ಬಸವರಾಜ ಸೂಚಿಸಿದರು.
    ಮತ್ತೆ ಗಡುವು ನೀಡಿದರು… : ಸ್ಮಾರ್ಟ್​ಸಿಟಿ ಯೋಜನೆಯಡಿ ತೋಳನಕೆರೆ, ಇಂದಿರಾ ಗಾಜಿನಮನೆ ಸೇರಿ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮತ್ತೆ ಗಡುವು ನೀಡಿದ್ದಾರೆ. ಈ ಹಿಂದೆ ನಗರಕ್ಕೆ 5 ಸಲ ಭೇಟಿ ನೀಡಿದ್ದ ಸಚಿವರು, ಆ ಸಂದರ್ಭದಲ್ಲಿಯೂ ತೋಳನಕೆರೆ, ಇಂದಿರಾ ಗಾಜಿನಮನೆ ಸೇರಿ ಇತರ ಕಾಮಗಾರಿಗಳಿಗೆ ಗಡುವು ನೀಡಿದ್ದರು. ಒಂದು ತಿಂಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಂಡು, ಉದ್ಘಾಟನೆಗೊಳ್ಳಬೇಕು ಎಂದು ಸಚಿವರು ಸೂಚಿಸಿದ್ದರು. ಆದರೆ, ಇದುವರೆಗೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಬುಧವಾರದ ಭೇಟಿಯ ಸಂದರ್ಭದಲ್ಲಿಯೂ ಸಚಿವರು ಮತ್ತೆ ಗಡುವು ನೀಡಿ ಹೋಗಿದ್ದಾರೆ.
    ಅನಧಿಕೃತ ಬಡಾವಣೆ ತೆರವು…
    ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳನ್ನು ಮುಲಾಜಿಲ್ಲದೆ ತೆರವು ಮಾಡಿ ಎಂದು ಸಚಿವ ಬಿ.ಎ. ಬಸವರಾಜ ತಿಳಿಸಿದರು. ಕಾರವಾರ ರಸ್ತೆ ಬೈಪಾಸ್ ಹೈ ಟೆನ್ಶನ್ ಕೇಬಲ್ ಅಡಿಯೇ ಅಕ್ರಮ ಬಡಾವಣೆ, ಕಟ್ಟಡ ನಿಮಾಣವಾಗುತ್ತಿವೆ. ಸರ್ಕಾರಿ ಜಾಗ ಸ್ವಂತ ಆಸ್ತಿ ಮಾಡಿಕೊಂಡು ಬಾಡಿಗೆ ನೀಡುತ್ತಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಗಮನಕ್ಕೆ ತಂದರು. ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಈ ಸಮಸ್ಯೆ ಇದೆ. ಇದರ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೂ ತರಲಾಗಿದೆ. ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಸಚಿವ
    ಬಸವರಾಜ ಹೇಳಿದರು.
    ಪಾಲಿಕೆಗೆ 240 ಕೋಟಿ ರೂ. ಶೀಘ್ರ ಬಿಡುಗಡೆ
    ಹುಬ್ಬಳ್ಳಿ: ಅವಳಿ ನಗರದ ರಸ್ತೆಗಳ ದುರಸ್ತಿ, ಡಾಂಬರೀಕರಣ ಹಾಗೂ ಒಳಚರಂಡಿ ನಿಮಾಣಕ್ಕೆ 240 ಕೋಟಿ ರೂ. ಅನುದಾನದ ಬೇಡಿಕೆಯನ್ನು ಪಾಲಿಕೆ ನೀಡಿದ್ದು, ಶೀಘ್ರವೇ ಬಿಡುಗಡೆ ಗೊಳಿಸಲಾಗುವುದು ಎಂದು ಸಚಿವ ಬಿ.ಎ. ಬಸವರಾಜ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್​ಸಿಟಿ ಯೋಜನೆ ಕಾಮಗಾರಿಗಳಿಗೆ ವೇಗ ನೀಡುವಂತೆ ಸೂಚಿಸಲಾಗಿದೆ. ಶೇ. 40ರಷ್ಟು ಕಾಮಗಾರಿ ಬಾಕಿ ಉಳಿದಿವೆ. 1 ತಿಂಗಳೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು. ತೋಳನಕೆರೆ ಅಭಿವೃದ್ಧಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ರೇಣುಕಾ ನಗರದ ಸ್ಮಾರ್ಟ್ ರಸ್ತೆ ಪ್ಯಾಕೇಜ್ ಡಾಂಬರೀಕರಣ ಆಗಸ್ಟ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಬೆಂಗೇರಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಯೂ ಮುಕ್ತಾಯ ಹಂತದಲ್ಲಿದೆ. ಜನತಾ ಬಜಾರ್ ಮಾರುಕಟ್ಟೆ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಹಾಗೂ ಗಣೇಶಪೇಟೆಯ ಹೊಸ ಮೀನು ಮಾರುಕಟ್ಟೆ ನಿಮಾಣ ಕಾಮಗಾರಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು. ಪಾಲಿಕೆ ಆಸ್ತಿ ಕರ ಹೆಚ್ಚಳವಾಗಿರುವುದನ್ನು ಸಿಎಂ ಜತೆ ರ್ಚಚಿಸಿ ಮರುಪರಿಶೀಲಿಸಲಾಗುವುದು ಎಂದರು. ಅವಳಿ ನಗರದಲ್ಲಿ ರೈತರ ಮನವೊಲಿಸಿ ಭೂಮಿ ಪಡೆದು ಬಡಾವಣೆ ನಿರ್ವಿುಸಿ, ಸಾರ್ವಜನಿಕರಿಗೆ ನಿವೇಶನ ವಿತರಿಸುವ ಯೋಜನೆ ಇದೆ. 30 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ವಿುಸುತ್ತಿರುವ ಬಸ್ ನಿಲ್ದಾಣ, 150 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಮುಚ್ಚಯ ನಿಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಶಕೀಲ್ ಅಹ್ಮದ್ ಇತರರಿದ್ದರು.
    ಪ್ರವಾಸದ ಹಿಂದೆ ರಾಜಕೀಯ ಇಲ್ಲ
    ಹುಬ್ಬಳ್ಳಿ: ರಮೇಶ ಜಾರಕಿಹೊಳಿ ಅವರು ಎದುರಿಸುತ್ತಿರುವ ಪ್ರಕರಣ ಇತ್ಯರ್ಥಗೊಂಡ ನಂತರ ಸಚಿವ ಸಂಪುಟಕ್ಕೆ ಮರಳುವುದು ಖಚಿತ. ಜಾರಕಿಹೊಳಿ ಅವರು ಮುಂಬೈ, ದೆಹಲಿ ಪ್ರವಾಸ ಕೈಗೊಂಡಿರುವುದರ ಹಿಂದೆ ರಾಜಕೀಯ ಇಲ್ಲ. ಅವರು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದಿಲ್ಲ ಎಂದರು. ಯಾವುದೋ ಉದ್ವೇಗದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದರೆ, ಅವರ ಸಹೋದರನ ಮನವೊಲಿಕೆಯಿಂದಾಗಿ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಯುವ ಕಾಂಗ್ರೆಸ್​ನಲ್ಲಿ ಇದ್ದಾಗಿನಿಂದಲೂ ಅವರನ್ನು ಬಲ್ಲೆ. ಅವರೊಂದಿಗೆ ನಾವೂ ಇದ್ದೇವೆ. ಸಣ್ಣ, ಪುಟ್ಟ ಸಮಸ್ಯೆಗಳು ಬಗೆಹರಿಯಲಿವೆ ಎಂದು ಸಚಿವ ಬಸವರಾಜ ಹೇಳಿದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts