More

    ತೋಳನಕೆರೆ ಇನ್ನು ಪಿಕ್ನಿಕ್ ಸ್ಪಾಟ್!

    ಆನಂದ ಅಂಗಡಿ ಹುಬ್ಬಳ್ಳಿ

    ಅಂತೂ ಇಂತೂ ತೋಳನಕೆರೆ ‘ಸ್ಮಾರ್ಟ್’ ಆಗುವ ಕಾಲ ಸನ್ನಿಹಿತಗೊಂಡಿದೆ. ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದ ಕಾಮಗಾರಿ, ಕೆರೆ ಸೇರುವ ಚರಂಡಿ ನೀರು ಸೇರಿದಂತೆ ಹಲವು ಅಡಚಣೆಗಳ ನಂತರ ತೋಳನಕೆರೆಯು ಹುಬ್ಬಳ್ಳಿಯ ಪ್ರಮುಖ ಪಿಕ್ನಿಕ್ ತಾಣವಾಗುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ.

    ಸುಮಾರು 39.5 ಎಕರೆ ವಿಸ್ತೀರ್ಣ ಇರುವ ಈ ಕೆರೆಯನ್ನು ಸ್ಮಾರ್ಟ್​ಸಿಟಿ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುತ್ತಿದೆ. 20.29 ಕೋಟಿ ರೂ. ವೆಚ್ಚದಲ್ಲಿ ಈ ಕೆರೆಯ ಸುತ್ತಲೂ ಪಾದಚಾರಿ ಮಾರ್ಗ, ಬಯಲು ರಂಗಮಂದಿರ, ಧ್ಯಾನ ಮಂದಿರ, ನೀರಿನ ಬುಗ್ಗೆ, ವೀಕ್ಷಣಾ ಗೋಪುರ, ಕೃತಕ ನಡುಗಡ್ಡೆ ಸೇರಿದಂತೆ ಹಲವು ಸೌಲಭ್ಯ ನಿರ್ವಣಗೊಂಡಿವೆ. ಕೆಲ ಸೌಲಭ್ಯಗಳು ನಿರ್ವಣದ ಅಂತಿಮ ಹಂತದಲ್ಲಿವೆ.

    ಮಾರ್ಚ್ ಅಂತ್ಯದೊಳಗೆ ಕೆರೆ ಸೌಂದರ್ಯೀಕರಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಏಪ್ರಿಲ್​ನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಕೆರೆಗೆ ಸೇರುತ್ತಿದ್ದ ಒಳಚರಂಡಿ ನೀರಿನಿಂದಾಗಿ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿತ್ತು. ಇದೀಗ, ಅಮೃತ ಯೋಜನೆಯಡಿ ಅಳವಡಿಸಿದ ಪೈಪ್​ಲೈನ್​ಗೆ ಒಳಚರಂಡಿ ನೀರನ್ನು ಹರಿಸಲಾಗುತ್ತಿದೆ. ಕೆರೆಯಲ್ಲಿ ನೀರಿನ ಬುಗ್ಗೆ ಅಳವಡಿಸಿದ್ದು, ಮಧ್ಯೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಮನರಂಜನೆ ನೀಡುವ ಜತೆಗೆ ಕೆರೆಯ ನೀರನ್ನು ಸದಾ ಸ್ವಚ್ಛಗೊಳಿಸುವ ಕಾರ್ಯವನ್ನು ಈ ಬುಗ್ಗೆ ಮಾಡಲಿದೆ.

    ಕೆರೆಯಲ್ಲಿ ವಿವಿಧ ಸೌಲಭ್ಯ ಅಳವಡಿಸುವ ಮೂಲಕ ಸೌಂದರ್ಯೀಕರಣಗೊಳಿಸುವ ಕಾಮಗಾರಿಯ ಗುತ್ತಿಗೆಯನ್ನು ಮೆ. ಸೌಹಾರ್ದ ಇನ್​ಫ್ರಾಟೆಕ್ ಪ್ರೖೆ.ಲಿ.ಗೆ ನೀಡಿದ್ದು, ಕಳೆದ ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಲಾಕ್​ಡೌನ್​ನಿಂದಾಗಿ ತಡವಾಯಿತು. ಕೆರೆಯ ಒಂದು ಬದಿ ಅಮೃತ ಯೋಜನೆಯಡಿ ನೀರು ಶುದ್ಧೀಕರಣ ಘಟಕ ಅಳವಡಿಸಲಾಗಿದೆ. ಟಿಕೆಟ್ ಕೌಂಟರ್, ವಾಹನಗಳ ರ್ಪಾಂಗ್ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

    ಮಕ್ಕಳಿಗೆ ಆಟೋಟ: ಸ್ಮಾರ್ಟ್​ಸಿಟಿ ಯೋಜನೆಯ 2ನೇ ಹಂತದಲ್ಲಿ ಸುಮಾರು 4.96 ಕೋಟಿ ರೂ. ವೆಚ್ಚದಲ್ಲಿ ತೋಳನಕೆರೆಯಲ್ಲಿ ಮಕ್ಕಳ ಆಟದ ಮೈದಾನ ನಿರ್ವಿುಸುವ ಯೋಜನೆ ರೂಪಿಸಲಾಗಿದೆ. ತರಹೇವಾರಿ ಆಟದ ಸಾಮಗ್ರಿಯನ್ನು ಇಲ್ಲಿ ಅಳವಡಿಸುವ ಮೂಲಕ ಈ ಕೆರೆ ಮಕ್ಕಳ ಆಕರ್ಷಣೀಯ ಕೇಂದ್ರವೂ ಆಗಲಿದೆ.

    ಪೆಡಲ್ ಬೋಟಿಂಗ್: 2 ತಿಂಗಳ ನಂತರ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶವೂ ಇದೆ. ಮೋಟಾರ್ ಬೋಟಿಂಗ್​ನಿಂದ ಆಗುವ ಶಬ್ದ ಮಾಲಿನ್ಯದಿಂದ ಪಕ್ಷಿಗಳ ವಂಶಾಭಿವೃದ್ಧಿಗೆ ತೊಂದರೆಯಾಗಬಹುದೆಂಬ ಕಾರಣದಿಂದ ಪೆಡಲ್ ಬೋಟಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆ ಹು-ಧಾ ಸ್ಮಾರ್ಟ್​ಸಿಟಿ ಕಂಪನಿಯದ್ದು.

    ಪಕ್ಷಿಗಳ ಸಂತಾನ ವೃದ್ಧಿ ತಾಣ: 2 ಕೃತಕ ನಡುಗಡ್ಡೆಯಲ್ಲಿ ಗಿಡಗಳು ತಲೆ ಎತ್ತಿದ್ದು, ವಿಶೇಷ ಜಾತಿಯ ಪಕ್ಷಿಗಳು ಬೆಳಗ್ಗೆ ಹಾಗೂ ಸಂಜೆ ಕಾಣಿಸಿಕೊಳ್ಳುತ್ತಿವೆ. ಪಾದಚಾರಿ ಮಾರ್ಗದಿಂದ ದೂರ ಇರುವ ನಡುಗಡ್ಡೆಗಳು ಪಕ್ಷಿಗಳ ಸಂತಾನ ವೃದ್ಧಿಗೆ ಅನುಕೂಲವಾಗಿವೆ.

    ಇನ್ನೂ 2 ತಿಂಗಳಲ್ಲಿ ತೋಳನಕೆರೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಹುಬ್ಬಳ್ಳಿಯ ಪ್ರಮುಖ ಆಕರ್ಷಣೀಯ ಕೇಂದ್ರಗಳಲ್ಲಿ ಈ ಕೆರೆಯೂ ಒಂದಾಗಲಿದೆ.

    | ಎಸ್.ಎಚ್. ನರೇಗಲ್ ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts