More

    ಅಧಿಕಾರಕ್ಕೇರಲು ಬಿಜೆಪಿ ಕಸರತ್ತು

    ಸವಣೂರ: ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರದಿಂದ ದೂರ ಉಳಿಯುವಂತಾಗಿದೆ. ಇತ್ತ ಬಿಜೆಪಿ ಮೀಸಲಾತಿಯ ಲಾಭ ಪಡೆದು, ಕೈ ಸದಸ್ಯರ ಬೆಂಬಲದೊಂದಿಗೆ ಅಧಿಕಾರಕ್ಕೇರಲು ತೆರೆಮರೆಯ ಕಸರತ್ತು ಆರಂಭಿಸಿದೆ.

    ಪುರಸಭೆಯ ಅಧ್ಯಕ್ಷ ಸ್ಥಾನವು ಬ ವರ್ಗ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್​ನಲ್ಲಿ ‘ಬ’ ವರ್ಗದಿಂದ ಆಯ್ಕೆಯಾದ ಮಹಿಳಾ ಸದಸ್ಯರಿಲ್ಲದಿರುವುದರಿಂದ ಬಹುಮತ ಇದ್ದರೂ ಅಧಿಕಾರ ಪಡೆಯದಂತಾಗಿದೆ.

    ಒಟ್ಟು 27 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್​ನ 15, ಬಿಜೆಪಿಯ 8, ಜೆಡಿಎಸ್​ನ 2 ಮತ್ತು ಇಬ್ಬರು ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಈ ಪೈಕಿ ಬ ವರ್ಗಕ್ಕೆ ಸೇರಿದ ಇಬ್ಬರು ಸದಸ್ಯರಿದ್ದಾರೆ.

    ಬಹುಮತ ಗಳಿಸಲು ಕನಿಷ್ಠ 15 ಸದಸ್ಯರ ಬೆಂಬಲ ಅಗತ್ಯವಿದೆ. ಸಂಸದರು, ಶಾಸಕರ ಮತ ಸೇರಿದರೂ ಬಿಜೆಪಿಯ ಬಲ 10ಕ್ಕೆ ಏರುತ್ತದೆ. ಇಬ್ಬರು ಪಕ್ಷೇತರರನ್ನು ಸೇರಿಸಿಕೊಂಡರೂ ಈ ಸಂಖ್ಯೆ 12ಕ್ಕೆ ತಲುಪುತ್ತದೆ. ಹೀಗಾಗಿ, ಅಧಿಕಾರ ಹಿಡಿಯಲು ಬಿಜೆಪಿಗೆ ಕಾಂಗ್ರೆಸ್ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ. ಈಗಾಗಲೇ 6 ಸದಸ್ಯರೊಂದಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್​ನ ಒಂದು ಗುಂಪು ಸಿದ್ಧವಾಗಿದೆ ಎನ್ನಲಾಗಿದೆ. ಈ ತಂಡದ ಮುಖಂಡ ಅಲ್ಲಾವುದ್ದೀನ್ ಮನಿಯಾರ್ ಅವರಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ.

    ಈ ನಡುವೆ ಬಿಜೆಪಿ ಮುಖಂಡರು 25ನೇ ವಾರ್ಡ್ ಸದಸ್ಯೆ ಶೈಲಾ ಎಚ್. ಮುದಿಗೌಡ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವುದು ಬಿಸಿತುಪ್ಪದಂತಾಗಿದೆ. ಏಕೆಂದರೆ ಬಿಜೆಪಿ ಬಂಡಾಯ (ಪಕ್ಷೇತರ) ಸದಸ್ಯೆ ಲೀಲಾವತಿ ಗಾಣಗೇರ ಅವರನ್ನು ನಿರ್ಲಕ್ಷಿಸಿದಲ್ಲಿ ಕಾಂಗ್ರೆಸ್​ಗೆ ವರವಾಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್​ನಲ್ಲಿ ಬ ವರ್ಗದ ಮಹಿಳಾ ಸದಸ್ಯರಿಲ್ಲದ ಕಾರಣ ಪಕ್ಷೇತರ ಸದಸ್ಯೆ ಲೀಲಾವತಿ ಗಾಣಗೇರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂಡ್ರಿಸಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಂತ್ರಗಾರಿಕೆ ಮಾಡುವ ಸಾಧ್ಯತೆಯೂ ಇದೆ. ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಈ ಕುರಿತು ರ್ಚಚಿಸಿದ್ದು, ಮುಂದಿನ ದಿನಗಳಲ್ಲಿ ಲೀಲಾವತಿ ಅವರಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಲಿದೆ ಎಂದು ಸದಸ್ಯರಿಗೆ ಆಮಿಷವೊಡ್ಡಲಾಗುತ್ತಿದೆ. ಈ ಬಗ್ಗೆ ಬಹಿರಂಗವಾಗಿಯೇ ಬಿಜೆಪಿ ಮುಖಂಡರು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಆಹ್ವಾನ ನೀಡಿದ್ದಾರೆ.

    ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಸದಸ್ಯರಾದ ಸದಾನಂದ ಕೆಮ್ಮಣ್ಣಕೇರಿ, ಮಹಾದೇವ ಮಹೇಂದ್ರಕರ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿ ಲೀಲಾವತಿ ಗಾಣಗೇರ ಅಧ್ಯಕ್ಷರಾದಲ್ಲಿ ಕಾಂಗ್ರೆಸ್​ನ ಅಲ್ಲಾವುದೀನ್ ಮನಿಯಾರ್, ಪಜಲಅಹ್ಮದಖಾನ್ ಪಠಾಣ ಉಪಾಧ್ಯಕ್ಷರಾಗುವ ಸಾಧ್ಯತೆ ಇದೆ.

    ಸತತ ಮೂರು ಬಾರಿ ಆಯ್ಕೆಗೊಂಡಿರುವ ಹಿರಿಯ ಸದಸ್ಯ ಅಬ್ದುಲ್​ಖಾದರ ಮಹ್ಮದಇಸಾಕ ಫರಾಶ (ಅದ್ದು) ಹಾಗೂ ಅಲ್ಲಾವುದ್ದೀನ್ ಹಸನಮಿಯ್ಯಾ ಮನಿಯಾರ ನಡುವೆ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಗುಂಪುಗಾರಿಕೆ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.

    ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ: ರಾಜ್ಯ ಸರ್ಕಾರವು ಅಧಿಕಾರ ದುರಪಯೋಗ ಮಾಡಿಕೊಂಡು ಬೇಕೆಂತಲೇ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲದ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿದೆ. ಈ ಕುರಿತು ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಕಾರ್ಯಕರ್ತರು ಚಿಂತನೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

    ಅದೃಷ್ಟದಾಟದಲ್ಲಿ ಪುರಸಭೆ ಅಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದು ಬಂದಿದೆ. ಇತರೆ ಪಕ್ಷಗಳ ಸದಸ್ಯರ ಬಾಹ್ಯ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೇರುವುದು ಖಚಿತ. | ಶೈಲಾ ಎಚ್. ಮುದಿಗೌಡ್ರ, ಬಿಜೆಪಿ ಸದಸ್ಯೆ, ಅಧ್ಯಕ್ಷ ಸ್ಥಾನ ಆಕಾಂಕ್ಷಿ

    ಬಿಜೆಪಿ ಟಿಕೆಟ್ ವಂಚಿತಳಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಗೊಂಡಿದ್ದೇನೆ. ಪುರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ಆಯ್ಕೆಯಾಗುವ ಭರವಸೆ ಇದೆ. ಗೃಹ ಸಚಿವರು ಅವಕಾಶ ಕಲ್ಪಿಸಿದಲ್ಲಿ ಸರ್ವರನ್ನೂ ಪರಿಗಣಿಸಿ ಅಧಿಕಾರ ಚುಕ್ಕಾಣಿ ಹಿಡಿಯುತ್ತೇನೆ. | ಲೀಲಾವತಿ ಗಾಣಗೇರ, ಪುರಸಭೆ ಪಕ್ಷೇತರ ಸದಸ್ಯೆ

    ಗೃಹ ಸಚಿವರು ಹಾಗೂ ಪಕ್ಷದ ಮುಖಂಡರು ಪುರಸಭೆ ಉಪಾಧ್ಯಕ್ಷ ಸ್ಥಾನ ನೀಡಿದಲ್ಲಿ ಸರ್ವರನ್ನೂ ಗಣನೆಗೆ ತೆಗೆದುಕೊಂಡು ಉತ್ತಮ ಆಡಳಿತವನ್ನು ನೀಡಲಾಗುವುದು. | ಸದಾನಂದ ಕೆಮ್ಮಣಕೇರಿ, ಬಿಜೆಪಿ ಹಿರಿಯ ಪುರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts