More

    ಅದ್ಧೂರಿಯಾಗಿ ಜರುಗಿದ ಅಪ್ಪನ ರಥೋತ್ಸವ

    ಕಲಬುರಗಿ: ನಾಡಿನ ಸುಪ್ರಸಿದ್ಧ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 200ನೇ ಯಾತ್ರಾ (ಜಾತ್ರಾ) ಮಹೋತ್ಸವದ ಮಹಾರಥೋತ್ಸವ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ಜೈಘೋಷಗಳೊಂದಿಗೆ ವೈಭವದಿಂದ ಜರುಗಿತು. ವಿವಿಧೆಡೆಯಿಂದ ಹರಿದುಬಂದ ಭಕ್ತಸಮೂಹ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡಿತಲ್ಲದೆ ತೇರು ಎಳೆದು ಕೃತಾರ್ಥರಾದರು. ಇದರೊಂದಿಗೆ ದ್ವಿಶತಮಾನೋತ್ಸವ ಜಾತ್ರೆ ಇತಿಹಾಸ ಪುಟ ಸೇರಿತು.

    ಶರಣಬಸವೇಶ್ವರ ಸಂಸ್ಥಾನ ಪರಿಸರದತ್ತ ಭಕ್ತರು ಬೆಳಗ್ಗೆಯಿಂದಲೇ ಹೆಜ್ಜೆ ಹಾಕಿ ಜಮಾಯಿಸಿದ್ದರು. ಸಂಜೆ ಅಪ್ಪನ ಗುಡಿ ಆವರಣದಲ್ಲಿ ಹಾಕಿದ್ದ ಮಂಟಪದಲ್ಲಿ 8ನೇ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಸಾನ್ನಿಧ್ಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ನೇತೃತ್ವದಲ್ಲಿ 9ನೇ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಪ್ರಥಮ ಬಾರಿಗೆ ಪರುಷ ಬಟ್ಟಲು ಮತ್ತು ಲಿಂಗ ಸಜ್ಜಿಕೆಯನ್ನು ಭಕ್ತರಿಗೆ ದರ್ಶನ ಮಾಡಿಸುತ್ತಲೇ ಶ್ರೀ ಶರಣಬಸವೇಶ್ವರ ಮಹಾರಾಜ ಕೀ ಜೈ ಎಂಬ ಜೈಘೋಷಗಳು ಮುಗಿಲು ಮುಟ್ಟಿದವು.

    ಶ್ರೀ ದೊಡ್ಡಪ್ಪ ಅಪ್ಪ ಪಟ್ಟಾಧಿಕಾರದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಜತೆಗೆ 200ನೇ ಮಹಾರಥೋತ್ಸವ ಆಗಿದ್ದರಿಂದ ಸಂಭ್ರಮ ಇಮ್ಮಡಿಗೊಂಡಿತ್ತು. ಕರೊನಾ ಅಬ್ಬರ ಮುಗಿದಿದ್ದರಿಂದ ಎರಡು ವರ್ಷ ನಂತರ ನಡೆದ ಈ ಜಾತ್ರೆ ಭಕ್ತರಲ್ಲಿ ಜೋಶ್ ಹೆಚ್ಚಿಸಿತ್ತು.

    ಶರಣಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಡಾ.ಶರಣಬಸವಪ್ಪ ಅಪ್ಪ ಸಾನ್ನಿಧ್ಯದಲ್ಲಿ ಮಹಾರಥಕ್ಕೆ ಸಂಸ್ಥಾನದ ಲಿಂಗರಾಜ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದಶರ್ಿ ಬಸವರಾಜ ದೇಶಮುಖ, ಶರಣರ ಪೂಜಾರಿಗಳು, ಸ್ವಾಮೀಜಿಗಳು ಪೂಜೆ ನೆರವೇರಿಸಿದರು. ಶ್ರೀ ಶರಣಬಸವೇಶ್ವರ ಮಹಾರಾಜ ಕೀ ಜೈ, ಪೂಜ್ಯ ಶರಣಬಸವಪ್ಪ ಅಪ್ಪ ಮಹಾರಾಜ ಕೀ ಜೈ, ಪೂಜ್ಯ ದೊಡ್ಡಪ್ಪ ಅಪ್ಪ ಮಹಾರಾಜ ಕೀ ಜೈ… ಘೋಷಣೆಗಳು ಮೊಳಗಿದವು.

    ಮೂಲ ಸ್ಥಳದಿಂದ ರಥ ಮುಂದೆ ಸಾಗುತ್ತಲೇ ಪಟಾಕಿ, ಬಾಣ-ಬಿರುಸುಗಳು ಬಾನಿನತ್ತ ಚಿಮ್ಮಿದವು. ರಥದ ಮಾರ್ಗದುದ್ದಕ್ಕೂ ಭಕ್ತರು ಉತ್ತತ್ತಿ, ಬಾದಾಮಿ, ಕಾರಿಕ್, ಹೂವು, ಬಾಳೆ ಹಣ್ಣುಗಳನ್ನು ಭಕ್ತರು ತೇರಿನ ಮೇಲೆ ಎಸೆಯುವ ಮೂಲಕ ಭಕ್ತಿಯನ್ನು ಅರ್ಪಿದಸಿದರು. ಅನೇಕರು ತೇರಿನ ಗಾಲಿಗೆ ಕಾಯಿ ಒಡೆದರು. ವಾದ್ಯಗಳ ನಿನಾದ ಭಕ್ತರನ್ನು ಭಕ್ತಿ ಸಾಗರದಲ್ಲಿ ಕಟ್ಟಿ ಹಾಕಿದಂತ್ತಿತ್ತು.

    ತೇರಿಗೂ ಮುನ್ನ ಪುರವಂತರ ಕುಣಿತ, ಶಸ್ತ್ರ ಹಾಕಿಕೊಳ್ಳುವಿಕೆ, ಡೊಳ್ಳು ಕುಣಿತ, ಪೂರ್ಣಕುಂಭ-ಕಳಸಗಳ ಮೆರವಣಿಗೆ ಹೀಗೆ ಹಲವ ಸಾಂಪ್ರದಾಯಿಕ ಕಾರ್ಯಗಳು ಗಮನ ಸೆಳೆದವು. ಇಕ್ಕೆಲಗಳಲ್ಲಿ, ಸುತ್ತಲಿನ ಕಟ್ಟಡಗಳಲ್ಲಿ ಲಕ್ಷಾಂತರ ಭಕ್ತರು ನಿಂತುಕೊಂಡು ರಥೋತ್ಸವ ವೈಭವವನ್ನು ಕಣ್ತುಂಬಿಕೊಂಡರು.

    ರಥವು ಮೂಲ ಸ್ಥಳದಿಂದ ದೇವಸ್ಥಾನ ಎದುರಿನ ಬಸವಣ್ಣ ದೇವರ ಗುಡಿ (ಪಾದಗಟ್ಟಿ)ವರೆಗೆ ಸಾಗಿ ಮರಳಿ ಮೂಲ ಸ್ಥಾನಕ್ಕೆ ಬಂದಿತು. ಈ ವೇಳೆ ಭಕ್ತರು ಆರಾಧ್ಯ ದೈವ ಅಪ್ಪನಿಗೆ ನಮೋಃ ನಮಃ ಎಂದು ಹಣೆ ಮಣಿದು ಪಾವನರಾದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಹೆಲಿಕಾಪ್ಟರ್ ಮೂಲಕ ಹೂಮಳೆ

    ಶರಣಬಸವೇಶ್ವರರ 200ನೇ ಜಾತ್ರೋತ್ಸವ ಹಾಗೂ ಸಂಸ್ಥಾನದ 9ನೇ ಪೀಠಾಧಿಪತಿಗಳಾಗಿ ಶ್ರೀ ದೊಡ್ಡಪ್ಪ ಅಪ್ಪ ಪಟ್ಟಾಭಿಷೇಕದ ನಂತರ ಜರುಗಿದ ಮೊದಲ ಜಾತ್ರೆ ಅವಿಸ್ಮರಣೀಯವಾಗಿಸಲು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಇದು ಭಕ್ತರ ಸಂಭ್ರಮ ಇಮ್ಮಡಿಗೊಳಿಸಿತು. ರಥೋತ್ಸವ ಮುಗಿಯುತ್ತಲೇ ಬಾನಂಗಳದಲ್ಲಿ ಹೆಲಿಕಾಪ್ಟರ್ ಸದ್ದು ಶುರುವಾಯಿತು. ಭಕ್ತರ ಗಮನ ಸೆಳೆಯುತ್ತಲೇ ಹೆಲಿಕಾಪ್ಟರ್ ಅನ್ನು ಪೈಲಟ್ ಅಪ್ಪನ ಗುಡಿಯ ಶಿಖರದ ಮೇಲೆ ತಂದು ಪುಷ್ಪವೃಷ್ಟಿ ಮಾಡಿದರು. ನಂತರ ಮತ್ತೆ ಮೇಲೆ ಹೋಗಿ ಇಡೀ ಪರಿಸರ ಸುತ್ತು ಹಾಕಿ ಮತ್ತೆ ಇನ್ನಷ್ಟು ಕೆಳಕ್ಕೆ ಬಂದ ಹೆಲಿಕಾಪ್ಟರ್ ಗುಡಿ ಜತೆಗೆ ಹಿಂದಿನ ಪೀಠಾಧಿಪತಿಗಳ ಸಮಾಧಿಗಳು ಹಾಗೂ ತೇರಿನ ಮೇಲೆ ಪುಷ್ಪವೃಷ್ಟಿ ಮಾಡಿತು. ಪುಣೆಯ ಎಂಎಬಿ ಏವಿಯೇಷನ್ ಸಂಸ್ಥೆ ಹೆಲಿಕಾಪ್ಟರ್ ಪುಷ್ಪವೃಷ್ಟಿಗಾಗಿಯೇ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬಂದಿತ್ತು. ಹೂವುಗಳನ್ನು ತುಂಬಿಸಿಕೊಂಡು ತೇರಿನ ವೇಳೆಗೆ ಅಲ್ಲಿಂದ ಅಪ್ಪನ ಗುಡಿಗೆ ಆಗಮಿಸಿ ಪುಷ್ಪ ಮಳೆ ಸುರಿಸಿತು. ಐದು ಸಲ ಸುತ್ತು ಹಾಕಿ ಪುಷ್ಪವೃಷ್ಟಿ ಮಾಡಿದ ನಂತರ ಪುನಃ ವಿಮಾನ ನಿಲ್ದಾಣಕ್ಕೆ ತೆರಳಿತು.

    ಎಲ್ಲರ ನಡಿಗೆ ಅಪ್ಪನ ಗುಡಿಯ ಕಡೆಗೆ

    ಶರಣಬಸವೇಶ್ವರರ ಜಾತ್ರೆ ನಿಮಿತ್ತ ಎಲ್ಲರೂ ಅಪ್ಪನ ಗುಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕಲಬುರಗಿ ಜಿಲೆಯಷ್ಟೇ ಅಲ್ಲ, ರಾಜ್ಯದ ವಿವಿಧೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಶರಣನ ಸನ್ನಿಧಾನಕ್ಕೆ ಆಗಮಿಸಿದರು. ರಥೋತ್ಸವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಮಂಗಳವಾರ ಶರಣರ ನಾಮಸ್ಮರಣೆ ಮೂಲಕ ಉಪವಾಸ ವ್ರತ ಆಚರಿಸಿದರು. ಸಂಜೆ ತೇರು ಎಳೆದ ನಂತರ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಇಡೀ ದೇಗುಲ ಪರಿಸರ ಮತ್ತು ಶರಣರ ಮೂತರ್ಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದರ್ಶನಕ್ಕೆ ಅಪಾರ ಭಕ್ತರು ನಿಂತಿರುವುದನ್ನು ಕಂಡು ಕೆಲವರು ದೂರಿನಿಂದಲೇ ನಮಿಸಿದರು.

    ರಾರಾಜಿಸಿದ ಯುವರತ್ನ ಅಪ್ಪು

    ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಯಾರಿಂದಲೂ ಮರೆಯಲು ಸಾಧ್ಯವಾಗುತ್ತಿಲ್ಲ. ಪುನೀತ್ ನಿಧನಗೊಂಡು ಐದಾರು ತಿಂಗಳಾಗಿದ್ದರೂ ಅಭಿಮಾನಿಗಳ ಮನಸ್ಸಿನಿಂದ ಮಾತ್ರ ಅಪ್ಪು ದೂರವಾಗಿಲ್ಲ. ಇದಕ್ಕೆ ಶರಣಬಸವೇಶ್ವರ ಜಾತ್ರೋತ್ಸವವೇ ಸಾಕ್ಷಿ. ಉತ್ಸವಕ್ಕೆ ಬಂದ ಸಹಸ್ರಾರು ಭಕ್ತರು ಕೈಯಲ್ಲಿ ಪುನೀತ್ ಭಾವಚಿತ್ರ ಹಿಡಿದು ತಿರುಗಾಡುತ್ತಿರುವುದು ಸಾಮಾನ್ಯವಾಗಿತ್ತು. ತೇರು ಎಳೆಯುವಾಗಲೂ ಅಪ್ಪು ಫೋಟೋ ಲಕ್ಷಾಂತರ ಭಕ್ತರ ಮಧ್ಯೆ ರಾರಾಜಿಸಿತು.

    ಗಮನ ಸೆಳೆದ ಸ್ಲೋಗನಗಳು

    ಕಲಬುರಗಿಯ ಶ್ರೀ ಶರಣಬಸವೇಶ್ವರರು ದಾಸೋಹದಿಂದಲೇ ಜಗತ್ತಿನಲ್ಲಿ ಗಮನ ಸೆಳೆದ ಮಹಾನ್ ಸಂತರು. ಹೀಗಾಗಿ ಜಾತ್ರೆಗೆ ಬರುವ ಅಸಂಖ್ಯಾತ ಭಕ್ತರಿಗೆ ದಾಸೋಹ ತತ್ವಗಳನ್ನು ತಿಳಿಸುವ ಕೆಲಸ ಸಂಸ್ಥಾನದಿಂದ ನಡೆಯಿತು. ದೇವಸ್ಥಾನದ ಒಂದೆಡೆ ಭಕ್ತರಿಗಾಗಿ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸುತ್ತಲಿನ ಪರಿಸರದಲ್ಲಿ ಅನ್ನದ ಬಗ್ಗೆ ಸಾಕಷ್ಟು ಬೋಡರ್್ಗಳನ್ನು ಹಾಕಲಾಗಿತ್ತು. ಅನ್ನ ಚೆಲ್ಲಲು ನಿಮಿಷ ಸಾಕು, ಅನ್ನ ಬೆಳೆಯಲು ವರ್ಷಗಳು ಬೇಕು.. ಬೇಕಾದಷ್ಟೆ ಪ್ರಸಾದ ಬಡಿಸಿಕೊಳ್ಳಿ.. ಇನ್ನಿತರ ಘೋಷವಾಕ್ಯಗಳ ಫಲಕಗಳನ್ನು ಹಾಕಿ ಭಕ್ತರಲ್ಲಿ ಅನ್ನದ ಮಹತ್ವ ಸಾರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts