More

    ಅದ್ದೂರಿಯಾಗಿ ಜರುಗಿದ ಬಸವೇಶ್ವರ ಸ್ವಾಮಿ ರಥೋತ್ಸವ

    ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿ ಭೀಮಸಮುದ್ರ ಮಜುರೆಯ ಬಸವಾಪುರದ ಮಾವಿನಹಳ್ಳಿ ಶ್ರೀಗುರು ಬಸವೇಶ್ವರ ಸ್ವಾಮಿ ಮಹಾರಥೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು.

    ರಾಜ್ಯದ ವಿವಿಧೆಡೆಯಿಂದ ಜಮಾಯಿಸಿದ್ದ ಅಸಂಖ್ಯಾತ ಭಕ್ತರು ಸ್ವಾಮಿಯ ರಥವನ್ನು ಎಳೆಯುವ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಚಾಲನೆ ದೊರೆಯುತ್ತಿದ್ದ ಬಸವೇಶ್ವರ ಮಹರಾಜ್ ಕೀ ಜೈ, ಹರಹರ ಮಹಾದೇವ್ ಎಂದು ಜಯಘೋಷ ಮೊಳಗಿಸಿದರು. ಈ ವೇಳೆ ಭಕ್ತೋತ್ಸಾಹ ಮುಗಿಲುಮುಟ್ಟಿತ್ತು.

    ರಥಕ್ಕೆ ಬಾಳೆಹಣ್ಣನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬಸವೇಶ್ವರ ಸ್ವಾಮಿಗೆ ಮುಂಜಾನೆ ಮಹಾರುದ್ರಾಭಿಷೇಕ ಸೇರಿ ಇತರೆ ಪೂಜಾ ಕೈಂಕರ್ಯ ಶಾಸ್ತ್ರೋಕ್ತವಾಗಿ ನೆರವೇರಿದವು.

    ರಥೋತ್ಸವಕ್ಕೂ ಮುನ್ನ ಸ್ವಾಮಿಯ ಮೂರ್ತಿಯನ್ನು ದೇಗುಲದ ಸಮೀಪವಿರುವ ಗದ್ದಗೆ ಬಳಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಕರೆತಂದು ಪೂಜೆ ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದ ಬಳಿ ಕರೆತಂದು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

    ಎಡಕ್ಕೆ ತಿರುಗಿರುವ ಮೂರ್ತಿ: ಇಲ್ಲಿನ ದೇವರ ಮೂರ್ತಿಯೂ ಎಡಭಾಗಕ್ಕೆ ತಿರುಗಿರುವುದಕ್ಕೂ ರೋಚಕ ಕಥೆ ಇದೆ. ಶಿವ ಭಕ್ತೆಯೊಬ್ಬಳು ಒಮ್ಮೆ ತನ್ನ ಏಳು ಹಸುಗಳು ಕಳೆದುಹೋದಾಗ ಸ್ವಾಮಿಯ ಸನ್ನಿಧಾನಕ್ಕೆ ಬಂದು, ಹಸುಗಳು ಮರಳಿ ಮನೆಗೆ ಬಂದರೆ ನಿನಗೆ ತಪ್ಪದೆ ಗಿಣ್ಣದಿಂದ ಎಡೆ ಸಮರ್ಪಿಸುವುದಾಗಿ ಹರಕೆ ಹೊತ್ತು ಮನೆಗೆ ಹಿಂದಿರುಗಿದಾಗ ಹಸುಗಳು ಇರುವುದನ್ನು ಕಂಡು ಆಶ್ಚರ್ಯಗೊಂಡಳು. ಆದರೆ, ಆಕೆ ಹರಕೆ ಮಾಡಿಕೊಂಡಿದ್ದನ್ನು ಮರೆತಳು. ಇತ್ತ ಬಸವೇಶ್ವರ ಸ್ವಾಮಿ ತನ್ನ ಭಕ್ತೆ ಗಿಣ್ಣ ತರುವಳು ಎಂದು ಎಡಕ್ಕೆ ತಿರುಗಿ ನೋಡುತ್ತಾ ಭಕ್ತರನ್ನು ಆಶೀರ್ವಾದಿಸುತ್ತಾನೆ ಎನ್ನುವ ಪ್ರತೀತಿ, ನಂಬಿಕೆ ಈಗಲೂ ಇದೆ.

    ರೋಗಕ್ಕೆ ತೀರ್ಥ ಪ್ರೋಕ್ಷಣೆ: ಪುರಾತನ ಐತಿಹ್ಯವಿರುವ ಈ ಪುಣ್ಯಕ್ಷೇತ್ರ ಬಸವಾಪುರ ಎಂಬ ಹೆಸರನ್ನು ಈ ಹಿಂದೆಯೇ ಹೊಂದಿತ್ತು. ನಂತರ ಮಾವಿನಹಳ್ಳಿ ಬಸವೇಶ್ವರ ಎಂಬುದಾಗಿ ಬದಲಾದರೂ ಭಕ್ತರು ಪ್ರೀತಿಯಿಂದ ಬಸವಾಪುರದ ಬಸವೇಶ್ವರ ಎಂದೇ ಕರೆಯುತ್ತಾರೆ.

    ಈ ಭಾಗದ ಸುತ್ತಮುತ್ತಲಿನ ಭಕ್ತರು ತಮ್ಮ ದನಕರುಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಂದರೆ ಕೂಡಲೇ ಸ್ವಾಮಿ ಹೆಸರೇಳುವ ಮೂಲಕ ದೇವರಿಗೆ ಅಭಿಷೇಕ ಮಾಡಿದ ತೀರ್ಥ ಪ್ರಸಾದ ತೆಗೆದುಕೊಂಡು ಹೋಗಿ ದನಕರುಗಳಿಗೆ ಪ್ರೋಕ್ಷಿಸಿ ರೋಗಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಈ ನಂಬಿಕೆ ಈಗಲೂ ಭಕ್ತರಲ್ಲಿದೆ. ಅಲ್ಲದೆ, ತಮ್ಮ ಹಸುಗಳು ಕರು ಹಾಕಿದಾಗ ಮೊದಲು ಹಾಲನ್ನು ಸ್ವಾಮಿಗೆ ಸಮರ್ಪಿಸುವ ಪರಂಪರೆ ಬೆಳೆದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts