More

    ಅತಿಸಣ್ಣ ಕಥೆಗಳಿಗಿದೆ ಅನಂತ ಅರ್ಥ ನೀಡುವ ಶಕ್ತಿ; ಕಾದಂಬರಿ ಹೇಳಲಾಗದ್ದನ್ನು ಹೇಳಿಬಿಡುತ್ತವೆ: ಎಸ್.ದಿವಾಕರ್ ಅಭಿಮತ

    ಸಾಗರ: ಕಾದಂಬರಿ ಹೇಳಲಾಗದ್ದನ್ನು ಎಷ್ಟೋ ಬಾರಿ ಅತಿ ಸಣ್ಣ ಕಥೆಗಳು ಹೇಳಿಬಿಡುತ್ತವೆ. ಏಕೆಂದರೆ ಅವುಗಳಿಗೆ ಅನಂತವಾದ ಅರ್ಥ ನೀಡುವ ಸಾಮರ್ಥ್ಯ ಇರುತ್ತದೆ ಎಂದು ವಿಮರ್ಶಕ ಎಸ್.ದಿವಾಕರ್ ಹೇಳಿದರು.
    ಹೆಗ್ಗೋಡಿನ ನೀನಾಸಂನಲ್ಲಿ ನಡೆಯುತ್ತಿರುವ ಕಲೆಗಳ ಸಂಗಡ ಮಾತುಕತೆ ಮಾಲಿಕೆಯಲ್ಲಿ ಮಂಗಳವಾರ ಸಣ್ಣ ಕಥೆ ಮತ್ತು ಅತಿ ಸಣ್ಣ ಕಥೆಗಳ ಕುರಿತು ಮಾತನಾಡಿದರು.
    ಸವಿಸ್ತಾರದ ಓದು ಮನಸ್ಸನ್ನು ಜಾಗೃತಗೊಳಿಸುವ ಜತೆಗೆ ಹೊಳವು ನೀಡುತ್ತದೆ. ಕಳೆದ 150 ವರ್ಷಗಳ ಕಥಾ ಪ್ರಪಂಚವನ್ನು ಗಮನಿಸಿದರೆ ನಮ್ಮಲ್ಲಿ ದೊಡ್ಡ ದೊಡ್ಡ ಕಾದಂಬರಿಗಳು ಬಂದಿವೆ. ಪ್ರಾಣಿಗಳು ಹೇಳುವ ನೀತಿಕಥೆಗಳನ್ನೂ ಹೊರತರಲಾಗಿದೆ. ಜೀವನಾದರ್ಶಗಳನ್ನು ತಿಳಿಸುವ ಮುಖ್ಯ ಕಥೆಗಳು ಹೊರಹೊಮ್ಮಿವೆ ಎಂದರು.
    ಸಾಹಿತ್ಯ ಎನ್ನುವುದು ಜೀವನಾನುಭವದ ಪರಿಭಾಷೆ ಆಗಿರಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಅತಿಸಣ್ಣ ಕಥೆಯ ಪರಂಪರೆ ಬೆಳೆದು ಬಂದಿದೆ, ನಮ್ಮಲ್ಲಿ ಈ ಪರಂಪರೆ ವಿರಳ. ಇದು ಬೆಳೆದ ಮೇಲೆ ಓದುಗರು ಯಾವ ಮಟ್ಟದಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಸಣ್ಣ ಕಥೆಗೆ ಒಂದು ಮಿತಿಯಿರುತ್ತದೆ. ಆದರೆ ಅತಿ ಸಣ್ಣ ಕಥೆಗಳು ಸೂಕ್ಷ್ಮವಾದ ಆಶಯಗಳನ್ನು ಸೂಚ್ಯರೂಪಕದಲ್ಲಿ ತೆರೆದಿಡುತ್ತವೆ. ಕಾದಂಬರಿಗೆ ವಿಸ್ತಾರ ರೂಪವಿದೆ. ಸಣ್ಣಕಥೆಗೆ ಕೆಲವು ಸೂಕ್ಷ್ಮತೆಗಳಿವೆ. ಈ ಎರಡೂ ಹೇಳಲಾಗದೇ ಇರುವ ವಿಚಾರವನ್ನು ಅಥವಾ ಬಹುಮುಖ್ಯವಾದ ಸಂಗತಿಯನ್ನು ವಿಸ್ತರಿಸಿ ಹೇಳಿದರೆ, ಅತಿ ಸಣ್ಣ ಕಥೆ ಒಂದೇ ಸಾಲಿನಲ್ಲಿ ದಾಖಲಿಸಿ ಬಿಡುತ್ತದೆ ಎಂದು ಹೇಳಿದರು.
    ಅತಿಸಣ್ಣ ಕಥೆಯ ಬಹುಮುಖ್ಯವಾದ ಸಂಗತಿಯೆಂದರೆ ಕೆಲವು ಪ್ರಶ್ನೆಗಳನ್ನು, ವಿಸ್ಮಯಗಳನ್ನು ಚರ್ಚೆಗೆ ತರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ವಾಹನದಲ್ಲಿ ಪೆಟ್ರೋಲ್ ಇದೆಯೋ, ಇಲ್ಲವೋ ಎಂದು ತಿಳಿಯಲು ಕತ್ತಲಿನಲ್ಲಿ ಬೆಂಕಿ ಕಡ್ಡಿಯೊಂದನ್ನು ಗೀರಿ ಗಮನಿಸಿದ. ವಾಹನದಲ್ಲಿ ಪೆಟ್ರೋಲ್ ಇತ್ತು, ಇಲ್ಲಿಗೆ ಕಥೆ ಮುಗಿಯುತ್ತದೆ. ಅಂದರೆ ಈ ಒಂದು, ಎರಡು ಸಾಲಿನ ಅತಿ ಸಣ್ಣ ಕಥೆ ನಮ್ಮಲ್ಲಿ ನೂರಾರು ಪ್ರಶ್ನೆಗಳನ್ನು ಧ್ವನಿಸುತ್ತದೆ. ಅತಿ ಸಣ್ಣ ಕಥೆಯ ಸಂಗತಿಗಳು ದೃಶ್ಯವಾಗಿ ನಮ್ಮೊಳಗೆ ಇಣುಕುತ್ತವೆ ಎಂದು ಅತಿಸಣ್ಣ ಕಥೆಗಳ ವಿಶೇಷತೆಗಳನ್ನು ವಿವರಿಸಿದರು.
    ಬಹಳ ದಿನ ಮನಸ್ಸಿನಲ್ಲಿ ಉಳಿಯಲ್ಲ: ಅತಿ ಸಣ್ಣ ಕಥೆಗಳ ಮೇಲೆ ನಡೆದ ಸಂವಾದದಲ್ಲಿ ರಂಗ ನಿರ್ದೇಶಕರಾದ ಕೆ.ವಿ.ಅಕ್ಷರ, ಗಣೇಶ್, ಪ್ರೊ. ಟಿ.ಪಿ.ಅಶೋಕ್, ಶ್ರೀರಾಮ್ ಭಟ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಚರ್ಚೆಯಲ್ಲಿ ಅತಿ ಸಣ್ಣ ಕಥೆಗಳು, ಕವಿತೆಗಳು, ಸಣ್ಣ ಕಥೆಗಳು ರಂಗದ ಮೇಲೆ ಪ್ರಯೋಗಗೊಂಡಿವೆ, ಅದು ವಿಸ್ತಾರದ ಅರ್ಥವನ್ನು ನೀಡಿವೆ ಅದಕ್ಕೂ ಮಿಗಿಲಾದ ಇನ್ನೇನನ್ನೋ ಸೃಷ್ಟಿಸಿದೆ. ಆದರೆ ಒಂದು ಕಾದಂಬರಿ, ಕಥೆ ನೀಡಿದ್ದಕ್ಕಿಂತ ಹೆಚ್ಚಿನ ಹೊಳವನ್ನು ಅತಿಸಣ್ಣ ಕಥೆ ನೀಡಿದರೂ, ಆ ಕ್ಷಣದಲ್ಲಿ ಅದು ಅದ್ಭುತ ಮತ್ತು ಆಶ್ಚರ್ಯ ಹುಟ್ಟಿಸಿದರೂ ಬಹಳ ದಿನಗಳ ಕಾಲ ಅದು ಮನಸ್ಸಿನಲ್ಲಿ ಉಳಿಯುವುದಿಲ್ಲ ಎಂಬ ಮಾತುಗಳು ಚರ್ಚೆಯಲ್ಲಿ ಪ್ರತಿಧ್ವನಿಸಿತು. ಅತಿ ಸಣ್ಣ ಕಥೆಗಳನ್ನು ಬರೆಯುವ ಮತ್ತು ಅದನ್ನು ಓದುವ ಮನೋಪ್ರವೃತ್ತಿ ಹೆಚ್ಚಾದಾಗ ಅದರ ಅಳಿವು-ಉಳಿವಿನ ಬಗ್ಗೆ ಯೋಚಿಸಬಹುದಾಗಿದೆ ಎಂದು ಕೂಡ ಸಂವಾದದಲ್ಲಿ ಶಿಬಿರಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
    ನೀನಾಸಂ ರಂಗಮಂದಿರದಲ್ಲಿ ಲೋಕಚರಿತಾ ಬೆಂಗಳೂರು ತಂಡದ ಕಲಾವಿದರು ವಿವೇಕ್ ಶಾನುಭಾಗ್ ರಚಿಸಿರುವ, ಸಾಲಿಯಾ ಉಮೇಶ್ ನಾರಾಯಣ ನಿರ್ದೇಶಿಸಿರುವ ‘ಇಲ್ಲಿರುವುದು ಸುಮ್ಮನೆ’ ನಾಟಕ ಅಭಿನಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts