More

    ಅತಿವೃಷ್ಟಿಗೆ ಹಾಳಾದ ರಸ್ತೆ ಎರಡೆರಡು ಬಾರಿ ಸುಧಾರಣೆ

    ಅಕ್ಕಿಆಲೂರ: ಎರಡು ತಿಂಗಳ ಹಿಂದಷ್ಟೆ ದುರಸ್ತಿ ಮಾಡಿದ ರಸ್ತೆಯನ್ನು ಈಗ ಮತ್ತೆ 40 ಲಕ್ಷ ರೂ. ವೆಚ್ಚ ಮಾಡಿ ಮರು ಡಾಂಬರೀಕರಣ ಮಾಡುತ್ತಿದ್ದು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಪಟ್ಟಣದಿಂದ ಪೊಲೀಸ್ ಠಾಣೆ ಎದುರು ಹಾಯ್ದು ಹಾವಣಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿಲೋಮೀಟರ್ ರಸ್ತೆ ಎರಡು ತಿಂಗಳಲ್ಲೇ ಎರಡು ಬಾರಿ ದುರಸ್ತಿ ಭಾಗ್ಯ ಕಾಣುತ್ತಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಅತಿವೃಷ್ಟಿಯಿಂದ ಹಾಳಾಗಿದ್ದ ರಸ್ತೆಯ ತಗ್ಗು- ಗುಂಡಿಗಳನ್ನು ಮಾರ್ಚ್ ಆರಂಭದಲ್ಲಿ 1.80 ಲಕ್ಷ ರೂ. ವ್ಯಯಿಸಿ ಮುಚ್ಚಲಾಗಿತ್ತು. ಅದು ವಾಹನ ಸವಾರರ ಸಂಚಾರಕ್ಕೂ ಯೋಗ್ಯವಾಗಿತ್ತು. ಇದೀಗ ಮತ್ತೊಮ್ಮೆ ಡಾಂಬರೀಕರಣ ಕಾಮಗಾರಿ ಮಾಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.

    ಜಿಲ್ಲಾ ಪಂಚಾಯಿತಿ ಇಲಾಖೆಯ ಪ್ರವಾಹ ಮರು ನಿರ್ಮಾಣ ಕಾಮಗಾರಿ ಯೋಜನೆಯಡಿ 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕೊಪ್ಪರಸಿಕೊಪ್ಪ ಗ್ರಾಮದ ಕೆ.ಡಿ. ಗಾಜಿಪೂರ ಎಂಬ ಗುತ್ತಿಗೆದಾರರು ಅಕ್ಕಿಆಲೂರಿನಿಂದ ಹಾವಣಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರಿಕರಣ ಮಾಡುತ್ತಿದ್ದಾರೆ.

    ಪಟ್ಟಣದಿಂದ ಹಾವಣಗಿಗೆ ಬಹುತೇಕರು ರಾಜ್ಯ ಹೆದ್ದಾರಿ ಮೂಲಕವೇ ಸಂಚರಿಸುತ್ತಾರೆ. ನಿತ್ಯ ಸಾವಿರಾರು ಜನರು ಸಂಚರಿಸುವ ಬಾಳೂರ ರಸ್ತೆ ಸಂಪೂರ್ಣ ಹಾಳಾಗಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಂತೂ ರಸ್ತೆ ಪರಿಸ್ಥಿತಿ ಹೇಳತಿರದು. ಇಂತಹ ರಸ್ತೆ ಬದಲು ಹೆಚ್ಚು ಜನರ ಓಡಾಟ ನಡೆಸದ ರಸ್ತೆಗೆ ಎರಡು ಬಾರಿ ಹಣ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    2019ರ ಅಗಸ್ಟ್​ನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ರಸ್ತೆ ನಿರ್ವಣಕ್ಕೆ ಅನುಮೋದನೆ ದೊರೆತ 8 ತಿಂಗಳ ನಂತರ ತುರ್ತು ಪ್ರವಾಹ ಮರು ನಿರ್ಮಾಣ ಕಾಮಗಾರಿ ಹೆಸರಿನಲ್ಲಿ ರಸ್ತೆ ಡಾಂಬರಿಕರಣ ನಡೆಯುತ್ತಿರುವುದು ಜನತೆಯಲ್ಲಿ ಸಂಶಯ ಮೂಡಿಸಿದೆ.

    ಕೆಲ ತಿಂಗಳ ಹಿಂದೆ ನಡೆದಿದ್ದು ಗುಂಡಿಗಳನ್ನು ಮುಚ್ಚವ ಕೆಲಸ. ಈಗ ನಡೆಯುತ್ತಿರುವುದು ಮರು ನಿರ್ವಣದ ಕಾಮಗಾರಿ. ಒಂದು ವೇಳೆ ಈ ಹಿಂದೆ ತಗ್ಗು-ಗುಂಡಿ ಮುಚ್ಚಿರದಿದ್ದರೆ, ಈಗ ದುರಸ್ತಿ ಮಾಡಿಯೇ ಡಾಂಬರೀಕರಣ ಕಾಮಗಾರಿ ಆರಂಭಿಸಬೇಕಿತ್ತು. ಹೀಗಾಗಿ ಎರಡು ಕಾಮಗಾರಿ ನಡೆದಿದೆ ಎನ್ನಲು ಆಗಲ್ಲ.
    | ರಮೇಶಕುಮಾರ ಹೂಗಾರ, ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts