More

    ಅತಿಥಿ ಉಪನ್ಯಾಸಕರಿಗೆ ಹಾಕದಿರಿ ಮಕ್ಮಲ್ ಟೋಪಿ- ಸರ್ಕಾರಕ್ಕೆ ವೈ.ಎ. ನಾರಾಯಣಸ್ವಾಮಿ ಹೇಳಿಕೆ

    ದಾವಣಗೆರೆ: ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ತರಾತುರಿಯಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಮಕ್ಮಲ್ ಟೋಪಿ ಹಾಕಲು ಹೊರಟಿದೆ. ಅತಿಥಿ ಉಪನ್ಯಾಸಕರು, ಸರ್ಕಾರಿ ನೌಕರರ ಮೇಲೂ ಈ ಪ್ರಯೋಗ ಮಾಡದಿರಲಿ ಎಂದು ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.
    ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಭಾನುವಾರ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.
    ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಬಗ್ಗೆ ಅಸಡ್ಡೆ ತೋರುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಆತುರ ತೋರಿದಷ್ಟು ಗುಣಾತ್ಮಕ ಶಿಕ್ಷಣ ನೀಡುವತ್ತ ಗಮನ ಹರಿಸುತ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ತರುವುದಾಗಿ ಹೇಳಿದೆ. ಒಂದು ವರ್ಗದ ತುಷ್ಟೀಕರಣ ನೀತಿ ಮುಂದುವರಿಸಿದರೆ ಶಿಕ್ಷಣ ವ್ಯವಸ್ಥೆಗೆ ಕಡೆಗಾಲ ಬಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ರಾಜ್ಯದ 413 ಕಾಲೇಜು, 150 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶಾಶ್ವತ ಸಿಬ್ಬಂದಿ ಇಲ್ಲ. ಪದವಿ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಮೊದಲು ಸರ್ಕಾರ ಮುಂದಾಗಲಿ. ಅನುದಾನಿತ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಗಮನ ನೀಡಲಿ.
    ಖಾಲಿ ಹುದ್ದೆಗಳ ಪರಿಣಾಮ ಅತಿಥಿ ಉಪನ್ಯಾಸಕರು ಒತ್ತಡದಲ್ಲಿ ಮತ್ತು ಹೆಚ್ಚುವರಿ ಬೋಧನೆ ಹೊರೆ ಹೊತ್ತಿದ್ದಾರೆ. ಅವರನ್ನು ಕಾಯಂಗೊಳಿಸಬೇಕು. ಹತ್ತು ತಿಂಗಳ ಅವಧಿಗೆ ಅತಿಥಿ ಉಪನ್ಯಾಸಕರನ್ನು ನಿಯೋಜನೆ ಮಾಡಿದ್ದರಲ್ಲಿ ಹಲವು ಗೊಂದಲಗಳಿವೆ. ಇದನ್ನು ಬಗೆಹರಿಸಬೇಕು.
    ಉಪನ್ಯಾಸಕರ ವರ್ಗಾವಣೆ ನಿಯಂತ್ರಣ ಕಾಯ್ದೆಯ ಮಾನದಂಡಗಳನ್ನು ಪರಿಷ್ಕರಿಸಿ, ಅವುಗಳನ್ನು ಸರಳೀಕರಣಗೊಳಿಸಬೇಕು. ಡಿ ವಲಯದಲ್ಲಿರುವವರನ್ನು ಎ ವಲಯದಲ್ಲಿ ಕಾರ್ಯನಿರ್ವಹಿಸಲು ಉನ್ನತ ಶಿಕ್ಷಣ ಸಚಿವರು ಕ್ರಮ ಕೈಗೊಳ್ಳಬೇಕು.
    ಬಿಜೆಪಿ ಸರ್ಕಾರ ಸರ್ಕಾರಿ ನೌಕರರಿಗೆ ಶೇ.17ರಷ್ಟು ಮಧ್ಯಂತರ ವೇತನ ಪರಿಹಾರ ನೀಡಿತ್ತು. ಶೇ.40ರಷ್ಟು ವೇತನದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ನೂತನ ಪಿಂಚಣಿ ಯೋಜನೆ ಹಿಂಪಡೆದು ಹಳೆ ಪಿಂಚಣಿ ವ್ಯವಸ್ಥೆ ಮುಂದುವರಿಸಬೇಕು. 7ನೇ ವೇತನ ಆಯೋಗದ ವರದಿ ಪಡೆದು ವೇತನ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
    ಉನ್ನತ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಸಚಿವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ನಿಜವಾದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದೂ ಕಿವಿಮಾತು ಹೇಳಿದರು.
    ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಚ್.ಕೊಟ್ರೇಶ್ ಮಾತನಾಡಿ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ವೇಳಾಪಟ್ಟಿಯಂತೆ ಬಿಡುಗಡೆಗೊಳಿಸುವುದಾಗಿ ಉನ್ನತ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರಿಂದ ನಿಗದಿಯಂತ ಸೇವಾ ದಿನಗಳು ಕಡಿಮೆಯಾಗಲಿವೆ. ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗಲಿದೆ. ಹೀಗಾಗಿ ಸೇವೆಯಲ್ಲಿ ಮುಂದುವರಿಸಲು ಸರ್ಕಾರದ ಗಮನ ಸೆಳೆಯಬೇಕೆಂದರು.
    ಸಮಿತಿ ಪದಾಧಿಕಾರಿಗಳಾದ ಡಾ. ಪ್ರಭಾಕರ್, ವಿಜಯಕುಮಾರ್, ಡಾ. ಮಹಾಂತೇಶ, ಪಿ. ಶಂಕರಯ್ಯ, ಆರ್‌ಎಚ್.ಗಂಗಾಧರ, ಸಮರ್ಥರಾಮ, ಎ.ಎಂ.ಭಾರತಿ, ಹಾಲಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts