More

    ಅಣ್ಣಿಗೇರಿ ಮಿನಿವಿಧಾನಸೌಧ ಕಾಮಗಾರಿಗೆ ಗ್ರಹಣ

    ಹುಬ್ಬಳ್ಳಿ: ಪಂಪನ ನಾಡು ಅಣ್ಣಿಗೇರಿ ತಾಲೂಕು ರಚನೆಯಾಗಿ ನಾಲ್ಕು ವರ್ಷ ಗತಿಸಿದೆ. ಆದರೂ ಮಿನಿವಿಧಾನಸೌಧ ಕಾಮಗಾರಿಗೆ ಗ್ರಹಣ ಹಿಡಿದಿದೆ.

    ಉಪ ನೋಂದಣಾಧಿಕಾರಿ, ಎಪಿಎಂಸಿ, ಅಗ್ನಿಶಾಮಕ ದಳ ಹಾಗೂ ಪುರಸಭೆ ಕಚೇರಿ ಮಾತ್ರ ಮೊದಲಿನಿಂದ ಕಾರ್ಯನಿರ್ವಹಿಸುತ್ತಿದ್ದವು. ಹಳೆಯ ಕಟ್ಟಡವೊಂದನ್ನು ನವೀಕರಿಸಿ ತಹಸೀಲ್ ಕಚೇರಿ ಆರಂಭಿಸಲಾಗಿದೆ. ಆಸ್ಪತ್ರೆ, ನ್ಯಾಯಾಲಯ, ಲೋಕೋಪ ಯೋಗಿ ಇಲಾಖೆ, ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ 22 ಇಲಾಖೆಗಳ ಕಚೇರಿಗಳು ಇಲ್ಲಿ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಹೆಸರಿಗೆ ಮಾತ್ರ ತಾಲೂಕೆಂಬ ಹಣೆಪಟ್ಟಿ ಹೊತ್ತು ಕೂತಿದೆ.

    ಅಣ್ಣಿಗೇರಿ ಗ್ರಾಮದ ಸ.ನಂ. 116/ಬಿ ಕ್ಷೇತ್ರದ 9 ಎಕರೆ 25 ಗುಂಟೆ ಜಾಗದ ಪೈಕಿ 7ಎಕರೆ 17 ಗುಂಟೆ ಜಮೀನು ಸಾರ್ವಜನಿಕ ಮತ್ತು ಆಡಳಿತ ಹಿತದೃಷ್ಟಿಯಿಂದ ಸರ್ಕಾರಿ ಕಚೇರಿ ಕಟ್ಟಡಗಳನ್ನು ನಿರ್ವಿುಸಲು ಯೋಗ್ಯವಿದೆ. ಲೋಕೋಪಯೋಗಿ ಇಲಾಖೆಯು ಈ ಜಾಗದಲ್ಲಿ ಪಿಡಬ್ಲ್ಯುಡಿ ಕಚೇರಿ, ವಸತಿಗೃಹ, ಐಬಿ ಸೇರಿ ಕೆಲವು ಕಚೇರಿಗಳನ್ನು ಈ ಜಾಗದಲ್ಲಿ ನಿರ್ವಿುಸಲು ಉದ್ದೇಶಿಸಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 2 ಎಕರೆಯಲ್ಲಿ ಮಿನಿ ವಿಧಾನಸೌಧ ಕಟ್ಟಲು ಜಾಗವಿದೆ ಎಂದು ಉಲ್ಲೇಖಿಸಿ, ತಾಲೂಕು ಆಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2017ರಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತ ಬರಲಾಗಿದೆ. ಆದರೆ, ಇದುವರೆಗೆ ಒಪ್ಪಿಗೆ ಸಿಕ್ಕಿಲ್ಲ.

    2020ರಲ್ಲಿಯೂ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ, ಕೋವಿಡ್ ನೆಪವೊಡ್ಡಿ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟಿಲ್ಲ. ಹಾಗಾಗಿ, ನೂತನ ತಾಲೂಕು ವ್ಯಾಪ್ತಿಗೆ ಬರುವ 21 ಗ್ರಾಮಗಳ ಸುಮಾರು 75 ಸಾವಿರ ಜನರು, ಸರ್ಕಾರಿ ಕಚೇರಿಗಳಿಗೆ ತೆರಳಿ ಕೆಲಸ ಮಾಡಿಸಿಕೊಳ್ಳಾಗದೆ ಪರದಾಡುತ್ತಿದ್ದಾರೆ.

    ಅನುದಾನವೂ ಅಷ್ಟಕಷ್ಟೇ: ಅಣ್ಣಿಗೇರಿ ತಾಲೂಕು ರಚನೆಗೆ ಸತತ 30 ವರ್ಷಗಳಿಂದ ಹೋರಾಟ ನಡೆದಿತ್ತು. 2017ರಲ್ಲಿ ಹೊಸ ತಾಲೂಕು ರಚನೆಯಾಗಿ, ವೆಂಕಟೇಶ್ವರ ಟೆಕ್ಸ್​ಟೈಲ್ ಮಿಲ್ ಆವರಣದಲ್ಲಿ ನೂತನ ತಾಲೂಕು ಕಚೇರಿ ಉದ್ಘಾಟಿಸಲಾಗಿದೆ. ಆರಂಭದಲ್ಲಿ ತಹಸೀಲ್ ಕಚೇರಿ ನಿರ್ವಹಣೆಗೆಂದು 10 ಲಕ್ಷ ರೂ. ಕೊಡಲಾಗಿತ್ತು. ಇದುವರೆಗೆ ತಾಲೂಕಿಗೆ ಒಟ್ಟು 28,93,878 ರೂ. ಅನುದಾನ ಬಂದಿದ್ದು, 21,08,303 ರೂ. ಖರ್ಚು ಮಾಡಲಾಗಿದೆ.

    ಸಚಿವದ್ವಯರ ಕಾಳಜಿ ಇಲ್ಲ: ನೂತನ ತಾಲೂಕು ರಚನೆಗೆ ಒಪ್ಪಿಗೆ ಕೊಟ್ಟವರು ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್. ನಂತರ ಸಿದ್ದರಾಮಯ್ಯ ಸಿಎಂ ಇದ್ದ ವೇಳೆ ನೂತನ ತಾಲೂಕೆಂದು ಘೊಷಣೆ ಮಾಡಲಾಯಿತು. ನವಲಗುಂದ ಪಟ್ಟಣ ಹಾಗೂ ಗದಗ ನಗರವು ಅಣ್ಣಿಗೇರಿಯಿಂದ 20 ಕಿ.ಮೀ. ದೂರದಲ್ಲಿವೆ. ಹುಬ್ಬಳ್ಳಿ ಮಹಾನಗರವು 30 ಕಿ.ಮೀ. ಇದೆ. ಅಣ್ಣಿಗೇರಿ ಜನರು ಬಹುತೇಕ ಖರೀದಿ, ವ್ಯಾಪಾರ ವಹಿವಾಟು ನಡೆಸುವುದು ಹುಬ್ಬಳ್ಳಿಯಲ್ಲಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲೇ ಇದ್ದಾರೆ. ಈ ಇಬ್ಬರೂ ತಾಲೂಕು ಅಭಿವೃದ್ಧಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಣ್ಣಿಗೇರಿಯ ಸಾರ್ವಜನಿಕರು.

    ಸತತ ಮೂವತ್ತು ವರ್ಷಗಳ ಹೋರಾಟದಿಂದ ನೂತನ ತಾಲೂಕು ರಚನೆಯಾಗಿದೆ. ತಾಲೂಕಿನಲ್ಲಿ ವಿವಿಧ ಕಚೇರಿಗಳು ಕಾರ್ಯಾರಂಭ ಮಾಡಬೇಕು. ಮಿನಿವಿಧಾನಸೌಧ ನಿರ್ಮಾಣ ಮಾಡುವುದಲ್ಲದೆ, ಸರ್ಕಾರಿ ನೌಕರರನ್ನೂ ನೇಮಕ ಮಾಡಬೇಕು. ಇದರಿಂದ ಆಡಳಿತ ಇನ್ನಷ್ಟು ಚುರುಕಾಗಿ ಜನರ ಸಮಸ್ಯೆಗಳು ನೀಗಲಿವೆ.

    | ಎ.ಪಿ. ಗುರಿಕಾರ ಅಣ್ಣಿಗೇರಿ ತಾಲೂಕು ಹೋರಾಟ ಸಮಿತಿ ಮುಖಂಡ

    ಮಿನಿವಿಧಾನಸೌಧ ನಿರ್ವಣಕ್ಕೆ ಜಾಗ ಗುರುತಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆಯಾಗಿ ಅನುದಾನ ಬಿಡುಗಡೆ ಆಗುವುದು ಬಾಕಿ ಇದೆ.

    | ಜಿ. ಕೊಟ್ರೇಶ ತಹಸೀಲ್ದಾರ್ ಅಣ್ಣಿಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts