More

    ಅಡ್ಯಾರಿನಲ್ಲಿ ಶಾಸನ ಪತ್ತೆ: ಅಳುಪ ದೊರೆ ಮೂರನೇ ಕುಲಶೇಖರನ ಉಲ್ಲೇಖ

    ಮಂಗಳೂರು: ನಗರದ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿ ಆಳುಪ ದೊರೆ ಮೂರನೇ ಕುಲಶೇಖರನ ಶಾಸನವನ್ನು ಇಲ್ಲಿನ ಸ್ಥಳೀಯ ಯುವಕರು ಪತ್ತೆ ಮಾಡಿದ್ದಾರೆ.

    ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಸ್ಥಳೀಯರ ಸಹಕಾರದಿಂದ ಅದನ್ನು ಸರಿಯಾಗಿ ನಿಲ್ಲಿಸಲಾಗಿದೆ. 19 ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಕಣಶಿಲೆ(ಗ್ರಾನೈಟ್)ಯಲ್ಲಿ ಕೊರೆಯಲ್ಪಟ್ಟಿದ್ದು, 4 ಅಡಿ ಎತ್ತರ ಹಾಗೂ 2 ಅಡಿ ಅಗಲವಿದೆ. ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿದೆ.

    ಶಾಸನದಲ್ಲಿ ಮೂರನೇ ಕುಲಶೇಖರನನ್ನು ಶ್ರೀ ಮತ್ಪ್ಯಾಂಡ್ಯ ಚಕ್ರವರ್ತಿರಾಯ ಗಜಾಂಕುಶ ವೀರ ಕುಲಶೇಖರ ಎಂದು ಸಂಭೋದಿಸಲಾಗಿದೆ. ಶಾಸನದಲ್ಲಿ ಸಾಧಾರಣ ಸಂವತ್ಸರದ ಧನು ಮಾಸ 2ನೆಯ ಆದಿತ್ಯವಾರ ಎಂಬ ಕಾಲಮಾನದ ಉಲ್ಲೇಖವನ್ನು ಕಾಣಬಹುದಾಗಿದೆ. ವೀರ ಕುಲಶೇಖರ ಮಂಗಳೂರ ರಾಜ್ಯವನ್ನು ಪ್ರತಿಪಾಲಿಸುತ್ತಿದ್ದ ಸಂದರ್ಭದಲ್ಲಿ ಅಡಿಯಾರ ಪ್ರದೇಶದ ಬೆದೆಕಾರು (ಮಳೆಗಾಲದಲ್ಲಿ ಬೆಳೆಯುವ ತರಿ ಭೂಮಿ) ಭೂಮಿಗಳನ್ನು ದಾನ ಕೊಟ್ಟಿರುವ ಉಲ್ಲೇಖವನ್ನು ಈ ಶಾಸನದಲ್ಲಿ ಮಾಡಲಾಗಿದೆ.

    ಶಾಸನದ ಕೊನೆಯಲ್ಲಿ ಈ ಶಾಸನವನ್ನು ಯಾರು ಹಾಳು ಮಾಡುವರೋ ಅವರು ಗಂಗೆ ಮತ್ತು ವಾರಣಾಸಿಯಲ್ಲಿ ಸಹಸ್ರ ಗೋವುಗಳನ್ನು ಕೊಂದ ದೋಷಕ್ಕೆ ಹೋಗುವರು ಎಂಬ ಶಾಪಾಶಯ ವಾಕ್ಯವನ್ನು ಬರೆಯಲಾಗಿದೆ. ಈ ದಾನವನ್ನು ಗುರುವ-ಗುರುವಣಪ್ಪ ಒಡೆಯನು ಮಾಡಿದ ಎಂಬುದನ್ನು ಶಾಸನದಲ್ಲಿ ತಿಳಿಸಲಾಗಿದೆ.

    ಈ ಶಾಸನವನ್ನು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸುವಲ್ಲಿ ಸಹಕಾರ ನೀಡಿದರು. ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳಬೆಟ್ಟು ಅವರು ಕ್ಷೇತ್ರಕಾರ್ಯ ಶೋಧನೆಯಲ್ಲಿ ಸಹಾಯ ಮಾಡಿದರು.
    ಮುಖ್ಯವಾಗಿ ಶಾಸನದಲ್ಲಿ ಉಲ್ಲೇಖಗೊಂಡ ಅಡಿಯಾರ ಎಂಬ ಹೆಸರಿನ ಊರು ಪ್ರಸ್ತುತ ಅಡ್ಯಾರ್ ಇದರ ಪೂರ್ವದ ಹೆಸರಾಗಿರಬಹುದು ಎಂದು ಶ್ರುತೇಶ್ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ವಿಶ್ವಾಸ್, ವಿನೀತ್, ರಿಖಿಲ್, ಪ್ರಸನ್ನ, ರತನ್, ಸುಜಿತ್, ಸುರೇಶ್ ಶೆಟ್ಟಿ ಅವರು ಸಹಕಾರ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts