More

    ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ; ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಮೇಗರವಳ್ಳಿಯಿಂದ ತೀರ್ಥಹಳ್ಳಿಗೆ ಪಾದಯಾತ್ರೆ

    ತೀರ್ಥಹಳ್ಳಿ: ಅಡಕೆ ಎಲೆಚುಕ್ಕೆ ರೋಗ, ಹಳದಿರೋಗ ಮುಂತಾದ ಸಮಸ್ಯೆಗಳಿಂದ ಮಲೆನಾಡಿನ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದು ಸರ್ಕಾರ ಮತ್ತು ಸ್ಥಳೀಯ ಶಾಸಕರು ಇದನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಶನಿವಾರ ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಮುಂಭಾಗದಿಂದ ತೀರ್ಥಹಳ್ಳಿ ತೋಟಗಾರಿಕಾ ಇಲಾಖೆ ಕಚೇರಿಯವರೆಗೆ 17 ಕಿ.ಮೀ. ಪಾದಯಾತ್ರೆ ನಡೆಯಿತು.
    ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿ ಕೂಡ ಹೆಚ್ಚುತ್ತಿದ್ದು ನಿಯಂತ್ರಿಸುವಂತೆ ಆಗ್ರಹಿಸಲಾಯಿತು. ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
    ತಾಲೂಕಿನಾದ್ಯಂತ ಹರಡುತ್ತಿರುವ ಎಲೆಚುಕ್ಕೆ ರೋಗದಿಂದ ಅಡಕೆ ತೋಟವೇ ನಾಶವಾಗುತ್ತಿದ್ದರೂ ಸರ್ಕಾರದ ಅಸಡ್ಡೆಯಿಂದಾಗಿ ಈ ವರೆಗೆ ವೈಜ್ಞಾನಿಕವಾಗಿ ಸಮೀಕ್ಷೆಯೇ ನಡೆದಿಲ್ಲ. ಈ ಸಮಸ್ಯೆಯ ಬಗ್ಗೆ ತಾಲೂಕಿಗೆ ನ.27ರಂದು ಆಗಮಿಸಲಿರುವ ಮುಖ್ಯಮಂತ್ರಿಗಳ ಗಮನ ಸೆಳೆಯುವ ಸಲುವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೂಡ ಹೂಡುವುದಾಗಿ ಕಿಮ್ಮನೆ ರತ್ನಾಕರ್ ಇದೇ ವೇಳೆ ಘೋಷಿಸಿದರು.
    ಬಗರ್‌ಹುಕುಂ ಪ್ರದೇಶ ಸೇರಿದಂತೆ ತಾಲೂಕಿನಲ್ಲಿ ಸುಮಾರು 75 ಸಾವಿರ ಎಕರೆ ಅಡಕೆ ತೋಟಕ್ಕೆ ಎಲೆಚುಕ್ಕೆ ತಗುಲಿದೆ. ಈ ಬಗ್ಗೆ ಸಮೀಕ್ಷೆ ನಡೆಯದ ಕಾರಣ ಇಲ್ಲಿಯವರೆಗೆ ಎಷ್ಟು ನಷ್ಟ ಸಂಭವಿಸಿದೆ ಎಂಬ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಇಲ್ಲ. ಈವರೆಗೆ ಆಗಿರುವ ನಷ್ಟವನ್ನು ಸರಿದೂಗಿಸಲು ಕನಿಷ್ಠ 50 ಕೋಟಿ ರೂ. ಬೇಕಿದೆ. ಸರ್ಕಾರದಿಂದ ಹತ್ತು ಕೋಟಿ ಮಂಜೂರು ಮಾಡಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಈವರೆಗೆ ತಾಲೂಕಿಗೆ ಮಂಜೂರಾಗಿರುವುದು ಕೇವಲ 38 ಲಕ್ಷ ರೂ. ಎಂದು ದೂರಿದರು.
    ಅಡಕೆ ಎಲೆಚುಕ್ಕೆ ರೋಗ ಕಾಣಿಸಿಕೊಂಡು ಆರು ತಿಂಗಳು ಕಳೆದಿದ್ದರೂ ಸರ್ಕಾರ ಈ ಬಗ್ಗೆ ಕಾಳಜಿ ವಹಿಸಿಲ್ಲ ನನ್ನ ಅಧಿಕಾರದ ಅವಧಿಯಲ್ಲಿ ಬಂದಿದ್ದ ಕೊಳೆರೋಗದ ಬಗ್ಗೆ ಪ್ರತಿ ಹೆಕ್ಟೇರಿಗೆ 12,500 ರೂ. ಪರಿಹಾರ ಕೊಡಿಸಿದ್ದೆ. ಸರ್ಕಾರದ ವೆಚ್ಚದಲ್ಲಿ ದೆಹಲಿ ಪ್ರವಾಸಕ್ಕೆ ಹೋಗುವ ಅಡಕೆ ಟಾಸ್ಕ್‌ಫೋರ್ಸ್ ಅಧ್ಯಕ್ಷರೂ ಆಗಿರುವ ಗೃಹ ಸಚಿವರು ಕೇಂದ್ರ ಸಚಿವರಿಗೆ ಮನವಿ ನೀಡಿ ಫೋಟೋ ಹಾಕಿಸಿಕೊಳ್ತಾರೆ. ರೈತರನ್ನು ಮರಳು ಮಾಡಿ ವಿಧಾನಸಭೆ ಚುನಾವಣೆವರೆಗೆ ಈ ಸಮಸ್ಯೆಯನ್ನು ಮುಂದೂಡಿಕೊಂಡು ಹೋಗೋದು ಬಿಜೆಪಿಯವರ ಉದ್ದೇಶವಾಗಿದೆ ಎಂದು ಟೀಕಿಸಿದರು.
    ಮಾಜಿ ಶಾಸಕ ಕಡಿದಾಳು ದಿವಾಕರ್ ಮಾತನಾಡಿ, ಅಡಕೆ ಬೆಳೆಯೇ ನಾಶವಾಗುವ ಈ ಹಂತದಲ್ಲಿ ರೈತರ ಪರವಾಗಿ ನಡೆದಿರೋ ಈ ಹೋರಾಟ ಅರ್ಥಪೂರ್ಣವಾಗಿದೆ. ಸಂಕಷ್ಟದ ಸ್ಥಿತಿ ತಲುಪಿದ್ದರೂ ನಮ್ಮ ರೈತರಲ್ಲಿ ಇನ್ನೂ ಜಾಗೃತಿ ಮೂಡಿರುವಂತೆ ಕಾಣುತ್ತಿಲ್ಲ ಎಂದರು.
    ಕಾಫಿ, ಟೋಮ್ಯಾಟೋಗೆ ಹೊಡೆಯುವ ಔಷಧ: ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿರೋದು ಕಾಫಿ ಮತ್ತು ಟೊಮ್ಯಾಟೋಗೆ ಹೊಡೆಯುವ ಔಷಧಿ. ಎಕರೆಗೆ 500 ರೂ ಔಷಧಿ ಕೊಟ್ಟಿದ್ದಾರೆ. ರೈತರು ಅಂದರೆ ಎಂಜಲು ಕಾಸಿಗೆ ಕೈ ಚಾಚೋರು ಅನ್ನೋ ಭಾವನೆ ಇರೋದು ಖಂಡನೀಯ ಎಂದು ಅಡಕೆ ಬೆಳೆಗಾರ ಇಳಿಮನೆ ಚಂದ್ರಶೇಖರ್ ಕಿಡಿಕಾರಿದರು. ಈವರೆಗೆ ನಾನು 9 ಬಾರಿ ಸ್ಪ್ರೇ ಮಾಡಿದ್ದೇನೆ. 40 ಕ್ವಿಂಟಾಲ್ ಆಗುತ್ತಿದ್ದ ಇಳುವರಿ 10 ಕ್ವಿಂಟಾಲ್‌ಗೆ ಇಳಿದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts