More

    ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ: ಶಾಸಕ ಹಾಲಪ್ಪ ಭರವಸೆ

    ಸಾಗರ: ಸತತ ಮಳೆಯಿಂದ ಸಾಗರ, ಹೊಸನಗರ ಭಾಗದಲ್ಲಿ ಅಡಕೆಗೆ ವ್ಯಾಪಕ ಕೊಳೆ ಆವರಿಸಿದ್ದು, ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರ ಸ್ಪಂದಿಸುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ಸಾಗರ ತಾಲೂಕಿನ ಹೆಗ್ಗೋಡು, ಮಾವಿನಸರ, ಕಬ್ಬಳ್ಳಿ, ಕಲ್ಮನೆ ಭಾಗದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಕೊಳೆರೋಗದಿಂದ ಹಾನಿಗೊಳಗಾದ ಅಡಕೆ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
    ವಿಪರೀತ ಮಳೆಯಿಂದ ಅಡಕೆಗೆ ಕೊಳೆರೋಗ ಬಂದಿರುವುದನ್ನು ನಾನು ಖುದ್ದಾಗಿ ಅಟಕೆ ತೋಟಕ್ಕೆ ಭೇಟಿ ನೀಡಿ ಗಮನಿಸಿದ್ದೇನೆ. ನಮ್ಮಲ್ಲಿ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರು ಇದ್ದಾರೆ. ಅಡಕೆ ಬೆಳೆಯನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಬೆಳೆಗಾರರಿಗೆ ಕೊಳೆ ಬಂದಿರುವುದು ಶಾಪವಾಗಿ ಪರಿಣಮಿಸಿದೆ. ಶೇ.80ಕ್ಕೂ ಹೆಚ್ಚಿನ ಭಾಗ ಅಡಕೆ ನಾಶವಾಗಿದ್ದು, ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದರು.
    ಮಲೆನಾಡು ಭಾಗದ ಆರ್ಥಿಕ ಶಕ್ತಿ ಅಡಕೆ ಬೆಳೆ. ಅಡಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಸಿಲುಕಬಾರದು ಎನ್ನುವುದು ನನ್ನ ಮತ್ತು ಸರ್ಕಾರದ ಉದ್ದೇಶ. ಈ ಹಿನ್ನೆಲೆಯಲ್ಲಿ ವಿದೇಶದಿಂದ ಅಡಕೆ ಬರುತ್ತಿರುವುದನ್ನು ಮನಗಂಡು ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಕೃಷಿ ಸಚಿವರಿಗೆ ವಿದೇಶದಿಂದ ಅಡಕೆ ಆಮದಾಗದಂತೆ ಕ್ರಮವಹಿಸಲು ಮನವಿ ಸಲ್ಲಿಸಿ ಬರಲಾಗಿದೆ ಎಂದು ಹೇಳಿದರು.
    ಹೆಗ್ಗೋಡು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡು ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಆನಂದಪುರ ಹೋಬಳಿ, ಆವಿನಹಳ್ಳಿ ಹೋಬಳಿ ಸೇರಿದಂತೆ 13 ಗ್ರಾಪಂ ವ್ಯಾಪ್ತಿಯ 337 ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ತಾಲೂಕಿನ ಎಲ್ಲ ಭಾಗಗಳಲ್ಲೂ ನೂರಾರು ಕೋಟಿ ರೂ. ವೆಚ್ಚದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts