More

    ಅಡಕೆ ತೋಟ, ಬಾಳೆ ಗಿಡಗಳು ನಾಶ

    ಸಿದ್ದಾಪುರ: ತಾಲೂಕಿನ ಇಟಗಿ ತಾರಗೋಡ ಸಮೀಪದ ಆಲಳ್ಳಿಮಠದಲ್ಲಿ ಕೃಷಿಕ ಶಿವಕುಮಾರ ಸ್ವಾಮಿ ಅವರ ಅಡಕೆ ತೋಟಕ್ಕೆ ಕಾಡು ಹಂದಿಗಳು ದಾಳಿ ನಡೆಸಿ 75ಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಬಾಳೆ ಗಿಡಗಳನ್ನು ಭಾನುವಾರ ನಾಶಪಡಿಸಿವೆ.

    ಅಲ್ಲದೆ, ಪ್ರಭಾನಂದ ಸ್ವಾಮಿ ಆಲಳ್ಳಿಮಠ, ಶಶಿಧರ ಸ್ವಾಮಿ ಆಲಳ್ಳಿಮಠ, ಸುಬ್ರಾಯ ಹೆಗಡೆ ಆಲಳ್ಳಿ ಅವರ ಅಡಕೆ ತೋಟದಲ್ಲಿಯೂ 25ಕ್ಕೂ ಹೆಚ್ಚು ಅಡಕೆ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ. ಮೂರರಿಂದ ನಾಲ್ಕು ವರ್ಷದ ಅಡಕೆ ಸಸಿ ಇದಾಗಿದೆ. ಫಲ ಬಿಡುವ ಹಾಗೂ ಸಣ್ಣ ಬಾಳೆ ಗಿಡಗಳನ್ನು ಕಾಡು ಹಂದಿಗಳು ನಾಶಪಡಿಸಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಕಾಡು ಪ್ರಾಣಿಗಳಿಂದಾಗುತ್ತಿರುವ ಬೆಳೆ ಹಾನಿ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಲಳ್ಳಿಮಠ, ಆಲಳ್ಳಿ ಹಾಗೂ ಇಟಗಿ ಸುತ್ತ್ತನ ರೈತರು ಆಗ್ರಹಿಸಿದ್ದಾರೆ.

    ಬೆಳೆಹಾನಿ ಆದ ರೈತರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ನಂತರ ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಾರೆ. ಸರ್ಕಾರದ ಸುತ್ತೋಲೆಯಂತೆ ಇ- ಪರಿಹಾರದ ಮೂಲಕ ಹಾನಿಯಾದ ರೈತರ ಬೆಳೆಯ ವಿವರವನ್ನು ನೀಡಿ ಪರಿಹಾರ ಒದಗಿಸುವಂತೆ ಕೋರಿ ಮೇಲಧಿಕಾರಿಗಳಿಗೆ ಅರ್ಜಿ ಕಳುಹಿಸಲಾಗುತ್ತದೆ.
    | ಹರೀಶ ಸಿ.ಎನ್. ಆರ್​ಎಫ್​ಒ ಕ್ಯಾದಗಿ

    ಮುಂದುವರಿದ ಆನೆ ದಾಳಿ
    ಮುಂಡಗೋಡ:
    ತಾಲೂಕಿನ ಕಾತೂರ ವಲಯ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗದ್ದೆಗಳಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದೆ. ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ಓಣಿಕೇರಿ, ಓರಲಗಿ, ಪಾಳಾ ಮತ್ತು ಹುಡೇಲಕೊಪ್ಪ ಗ್ರಾಮಗಳ ಅರಣ್ಯದ ಅಂಚಿನಲ್ಲಿ ಬೀಡು ಬಿಟ್ಟಿದ್ದು ಆ ಭಾಗದ ಗದ್ದೆ ಮತ್ತು ತೋಟಗಳ ಮೇಲೆ ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿವೆ. ಮಂಗಳವಾರ ತಡ ರಾತ್ರಿ ಮರಗಡಿ ಗ್ರಾಮದ ಮುನೀರ್ ಅಹಮ್ಮದ್ ಹುಲಮನಿ ಎಂಬುವರ ಭತ್ತದ ಚೀಲಗಳನ್ನು ತುಳಿದು ನಾಶ ಮಾಡಿವೆ. ಗೌಸಮೊಹಿದ್ದೀನ್ ಗಾಂಜಿ ಅವರ ಹುಲ್ಲಿನ ಬಣವೆ, ಹನೀಫ್​ಸಾಬ್ ಹುಸೇನಸಾಬ್, ಆಲೆಮುಸ್ತಫಾ ಗಾಂಜಿ, ಶಾರವ್ವ ಓಣಿಕೇರಿ, ಬಸವಣ್ಣೆವ್ವ ವಾಲಿಕಾರ ಎಂಬುವವರ ಗೋವಿನ ಜೋಳದ ಬೆಳೆಯನ್ನು ನಾಶಪಡಿಸಿವೆ. ಇತ್ತ ಅರಣ್ಯ ಇಲಾಖೆಯವರು ಕಾಡಾನೆಗಳ ಹಿಂಡನ್ನು ಕಾಡಿನತ್ತ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಗಜಪಡೆ ಮಾತ್ರ ಗುಂಪು-ಗುಂಪಾಗಿ ಮಾರ್ಗಗಳನ್ನು ಬದಲಿಸುತ್ತ ರೈತರ ಗದ್ದೆಗಳಿಗೆ ನುಗ್ಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts