More

    ಅಡಕೆಗೆ ಕೋವಿಡ್ ಕಾಮೋಡ

    ಶಿರಸಿ : ಅಡಕೆಯ ಬೃಹತ್ ಮಾರುಕಟ್ಟೆಯಾಗಿದ್ದ ಉತ್ತರ ಭಾರತದ ರಾಜ್ಯಗಳಲ್ಲಿ ಕೋವಿಡ್-19 ಹರಡುವಿಕೆ ಭೀತಿಯ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧ ಆದೇಶ ಹೊರಬಿದ್ದಿರುವುದು ಸ್ಥಳೀಯ ಅಡಕೆ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಹಂಗಾಮಿನಲ್ಲಿ ವಹಿವಾಟು ಸ್ಥಗಿತಗೊಂಡಿದ್ದು, ಭವಿಷ್ಯದ ಮಾರುಕಟ್ಟೆ ಹೇಗೆಂಬ ಚಿಂತೆ ಕಾಡತೊಡಗಿದೆ.

    ಕರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ಲಾಕ್​ಡೌನ್ ಘೊಷಣೆಯಾದ ಪರಿಣಾಮ, ಅಡಕೆ ಹಂಗಾಮಿನ ಬೆಳೆಗಾರರು ಭವಿಷ್ಯದ ಮಾರುಕಟ್ಟೆಯ ಬಗ್ಗೆ ಚಿಂತತರಾಗಿದ್ದಾರೆ. ವರ್ಷವಿಡೀ ಮಾರುಕಟ್ಟೆಯಲ್ಲಿ ಅಡಕೆ ವಹಿವಾಟು ನಡೆಯುತ್ತಿದ್ದರೂ, ಮಾರ್ಚ್​ನಿಂದ ಮೇವರೆಗೆ, ಅತಿಹೆಚ್ಚು ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ. ಮಳೆಗಾಲದ ಸಿದ್ಧತೆ, ತೋಟದ ಅಭಿವೃದ್ಧಿ, ಸಾಲ ಭರಣ ಮೊದಲಾದ ಕಾರಣಗಳಿಂದಾಗಿ ರೈತರು, ಸಿದ್ಧಪಡಿಸಿಟ್ಟುಕೊಂಡಿರುವ ಕೆಂಪಡಕೆ ಹಾಗೂ ಚಾಲಿಯನ್ನು ಮಾರಾಟಕ್ಕೆ ತರುತ್ತಾರೆ. ಈ ಬಾರಿ ಏರುಗತಿಯಲ್ಲಿ ಸಾಗಿರುವ ಅಡಕೆ ದರವನ್ನು ಕಂಡು, ಬೆಳೆಗಾರರು ಸಂತಸದಲ್ಲಿರುವಾಗಲೇ, ಕರೊನಾ ವೈರಸ್​ನ ಭೂತ ಖುಷಿಯನ್ನು ಕಸಿದುಕೊಂಡಿದೆ.

    ಆದೇಶ ತಂದ ಭಯ: ದೇಶಾದ್ಯಂತ ಲಾಕ್​ಡೌನ್ ಘೊಷಣೆಯಾದ ಮೇಲೆ ಅಡಕೆ ವಹಿವಾಟು ಸ್ಥಗಿತಗೊಂಡಿದೆ. ಹೊರ ರಾಜ್ಯಗಳಿಗೆ ಹೋಗುತ್ತಿದ್ದ ಅಡಕೆ ಸಾಗಾಟ ವಾಹನಗಳು ಶೆಡ್​ನಲ್ಲಿ ನಿಂತಿವೆ. ಇದೇ ವೇಳೆಗೆ, ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಕಾರಣ ದೆಹಲಿ, ಉತ್ತರ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸಿರುವ ಆದೇಶ ಹೊರಬಿದ್ದಿದೆ. ಇದು ಅಡಕೆ ಬೆಳೆಗಾರರನ್ನು ಇನ್ನಷ್ಟು ಚಿಂತೆಗೀಡುಮಾಡಿದೆ. ಉಗುಳುವಿಕೆ ನಿಷೇಧ ತಾತ್ಕಾಲಿಕ ಆದೇಶವಾಗಿರಬಹುದು. ಆದರೆ, ಉತ್ತರ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ, ನಮ್ಮಲ್ಲಿ ಅಡಕೆ ಮಾರುಕಟ್ಟೆ ಆರಂಭವಾದರೂ, ಅಲ್ಲಿ ಖರೀದಿಗೆ ಪ್ರಕ್ರಿಯೆ ವಿಳಂಬವಾಗಬಹುದು. ಅಂತರ್ ರಾಜ್ಯ ಸಾಗಣೆಗೆ ಅನುಮತಿ ನೀಡುವುದು ಸರ್ಕಾರದ ಕೈಯಲ್ಲಿದೆ. ಹೀಗಾಗಿ, ಆರಂಭಿಕ ದಿನಗಳಲ್ಲಿ ಕೊಂಚ ವ್ಯತ್ಯಯವಾದರೂ, ವ್ಯವಸ್ಥೆ ಸರಿಯಾದರೆ, ಅಡಕೆ ದರದಲ್ಲಿ ತೀರಾ ವ್ಯತ್ಯಾಸ ಆಗಲಾರದು. ಅಡಕೆ ಬಳಕೆ ಮಾಡುವ ಪ್ರದೇಶಗಳಲ್ಲಿ ಸಂಗ್ರಹ ಖಾಲಿಯಾಗಿದೆ. ಇರುವ ಅಲ್ಪಸ್ವಲ್ಪ ಸಂಗ್ರಹವು ಕಾಳಸಂತೆಯಲ್ಲಿ ದುಪ್ಪಟು ದರಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

    ಕಳೆದ ವರ್ಷ ಮಾರ್ಚ್​ನಲ್ಲಿ ಸುಮಾರು 15 ಸಾವಿರ ಕ್ವಿಂಟಾಲ್ ಅಡಕೆ ವಿಕ್ರಿಯಾಗಿತ್ತು. ಈ ವರ್ಷ ಮಾರ್ಚ್ ಆರಂಭದಲ್ಲಿ 5000 ಕ್ವಿಂಟಾಲ್ ಮಾತ್ರ ವಿಕ್ರಿಯಾಗಿದೆ. ಮಾರ್ಚ್ ಹಾಗೂ ಏಪ್ರಿಲ್ ಸೇರಿ ಸುಮಾರು 20 ಸಾವಿರ ಕ್ವಿಂಟಾಲ್ ಅಡಕೆಯ ಶಿಲ್ಕು ರೈತರ ಬಳಿಯಿದೆ. ರೈತರು ಉತ್ಪನ್ನ ಸಿದ್ಧಪಡಿಸಿಟ್ಟುಕೊಂಡು, ಮಾರುಕಟ್ಟೆ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಈ ವರ್ಷ ಶೇ.25ರಷ್ಟು ಬೆಳೆ ಕಡಿಮೆಯಿರುವುದರಿಂದ ಅಡಕೆ ದರ ಇಳಿಕೆ ಆಗುವ ಸಾಧ್ಯತೆ ಕಡಿಮೆ. ರೈತರು ಆತಂಕಪಡಬೇಕಾಗಿಲ್ಲ. ಈಗಾಗಲೇ ಹೊರ ರಾಜ್ಯಗಳಲ್ಲಿ ಅಡಕೆಯ ಸಂಗ್ರಹ ಖಾಲಿಯಾಗಿರುವುದರಿಂದ, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ವಿಶ್ವಾಸವಿದೆ. | ರವೀಶ ಹೆಗಡೆ ಟಿಎಸ್​ಎಸ್ ವ್ಯವಸ್ಥಾಪಕ

    ದರ ಹೆಚ್ಚಳವಾಗಬಹುದೆಂದು ರೈತ ಅಡಕೆ ಸಂಗ್ರಹಿಸಿಟ್ಟುಕೊಂಡಿದ್ದಾನೆ. ಆದಷ್ಟು ಶೀಘ್ರ ಮಾರುಕಟ್ಟೆ ಆರಂಭವಾದರೆ ಚಿಂತೆಯಿಲ್ಲ. ಒಮ್ಮೆ ಲಾಕ್​ಡೌನ್ ಮುಂದುವರಿದರೆ, ಬೆಳೆಗಾರ ಒತ್ತಡಕ್ಕೆ ಸಿಲುಕುತ್ತಾನೆ. ಮಾಧ್ಯಮಿಕ ಸಾಲ, ಬೆಳೆಸಾಲ ತುಂಬಲು ರೈತನಿಗೆ ಹಣದ ಅವಶ್ಯಕತೆ ಇರುತ್ತದೆ. ಸೊಸೈಟಿಗೆ ತಂದು ಶಿಲ್ಕು ಮಾಡಲು, ವಾಹನ ಸಂಚಾರಕ್ಕೆ ಅನುಮತಿ ಸಿಗುತ್ತಿಲ್ಲ. ಹೀಗಾಗಿ, ಅಡಕೆ ಬೆಳೆಗಾರನಿಗೆ ಹಣದ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೋಟದ ಕೆಲಸಗಳನ್ನು ಮುಂದೂಡುವುದು ಒಳಿತು. ಖರ್ಚು-ವೆಚ್ಚ ಸರಿದೂಗಿಸಿದರೆ ಸಾಲದ ಸುಳಿಯಿಂದ ಹೊರಬಲು ಪೂರಕ. | ರಮೇಶ ಹೆಗಡೆ ಹಳೇಕಾನಗೋಡು ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts