More

    ಅಂಜನಾಪುರ, ಅಂಬ್ಲಿಗೊಳಕ್ಕೆ 8 ಅಡಿ ನೀರು

    ಶಿಕಾರಿಪುರ: ಕಳೆದ ಒಂದು ವಾರದಿಂದ ಪ್ರತಿದಿನ ಚದುರಿದಂತೆ ಆಗ್ಗಾಗ್ಗೆ ಮಳೆಯಾಗುತ್ತಿದ್ದು, ರೈತರಲ್ಲಿ ಕೊಂಚ ಸಂತಸ ಮೂಡಿಸಿದೆ.
    ತಾಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.42 ಮಿಮೀ ಮಳೆ ಕೊರತೆ ಉಂಟಾಗಿದ್ದು, ಕೆರೆ-ಕಟ್ಟೆಗಳು ಇನ್ನೂ ಭರ್ತಿಗೊಂಡಿಲ್ಲ. ಇದರ ನಡುವೆ ಜೂನ್ ಕೊನೆಯ ಹಾಗೂ ಜುಲೈನ ಮೊದಲ ವಾರದಲ್ಲಿಯೇ ಬಹುತೇಕ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಇದೀಗ ಕಳೆದೆರಡು ದಿನಗಳಿಂದ ಮಳೆ ಸ್ವಲ್ಪ ಬಿರುಸುಗೊಂಡಿರುವ ಕಾರಣ ಅನ್ನದಾತರು ನಿಟ್ಟುಸಿರು ಬಿಡುವಂತಾಗಿದೆ.
    ತಾಲೂಕಿನ ಜೀವಜಲವಾಗಿರುವ ಅಂಜನಾಪುರ ಮತ್ತು ಅಂಬ್ಲಿಗೊಳ ಜಲಾಶಯಗಳಲ್ಲಿ ಕೇವಲ ಎಂಟು ಅಡಿಯಷ್ಟು ಮಾತ್ರ ನೀರಿದೆ. ಕಳೆದ ವರ್ಷ ಈ ವೇಳೆಗಾಗಲೇ ಎರಡೂ ಜಲಾಶಯಗಳು ಭರ್ತಿಗೊಂಡಿದ್ದವು. ಸಾಗರ ಭಾಗದಲ್ಲಿ ಒಳ್ಳೆಯ ಮಳೆಯಾದರೆ ಅಂಬ್ಲಿಗೊಳ ಜಲಾಶಯ ಭರ್ತಿಯಾಗುತ್ತದೆ. ರಿಪ್ಪನ್‌ಪೇಟೆ, ಹಾದಿಗಲ್ಲು, ತೀರ್ಥಹಳ್ಳಿ ಮತ್ತು ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಒಳ್ಳೆಯ ಮಳೆಯಾದರೆ ಅಂಜನಾಪುರ ಜಲಾಶಯ ತುಂಬಲಿದೆ.
    ತುಂಗಾ ನದಿ ಭಾಗದಲ್ಲಿ ಮಳೆ ಪ್ರಮಾಣ ಜಾಸ್ತಿಯಾದ ಕಾರಣ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸಾದ ಹೊಸಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಮಂಡಘಟ್ಟ ಸಮೀಪದ ದ್ಯಾವನಕೆರೆಗೆ ನೀರು ಬಿಡಲಾಗಿದೆ. ದ್ಯಾವನಕೆರೆ ತುಂಬಿ ಹರಿದ ಸುಮಾರು 50 ಕ್ಯೂಸೆಕ್ಸೃ್ನಷ್ಟು ನೀರು ಕುಮದ್ವತಿ ನದಿಗೆ ಸೇರಿ, ಅಲ್ಲಿಂದ ಅಂಜನಾಪುರ ಜಲಾಶಯ ತಲುಪುತ್ತಿದೆ.
    ಹೊಸಳ್ಳಿ ಏತ ನೀರಾವರಿ ಯೋಜನೆಯಡಿ ನಾಲ್ಕು ತಿಂಗಳು 0.4 ಟಿಎಂಸಿ ನೀರು ಬಿಡಲಾಗುತ್ತದೆ. ಶಿವಮೊಗ್ಗ ಗ್ರಾಮಾಂತರ ಕೆರೆಗಳನ್ನು ತುಂಬಿಸಲು 0.75 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತದೆ, ಈಗ ಕೆರೆ ತುಂಬಿಸಲು ನೀರು ಬಿಡದೆ ಅಂಜನಾಪುರ ಜಲಾಶಯವನ್ನು ದೃಷ್ಟಿಯಲ್ಲಿಟ್ಟುಕೊಂಡು ದ್ಯಾವನಕೆರೆಗೆ ಬಿಡುತ್ತಿರುವದರಿಂದ ನಿಧಾನವಾಗಿ ಅಂಜನಾಪುರ ಜಲಾಶಯದಲ್ಲಿ ನೀರಿನ ಹರಿವು ಜಾಸ್ತಿಯಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts